ರಾಮ್‌ಚರಣ್, ಉಪಾಸನಾ ಅವಳಿ ಮಕ್ಕಳ ನಾಮಕರಣ; ದೇವರ ಹೆಸರುಗಳನ್ನಿಟ್ಟ ಚಿರಂಜೀವಿ
ತೆಲುಗು ನಟ ರಾಮ್‌ಚರಣ್ ಹಾಗೂ ಪತ್ನಿ ಉಪಾಸನಾ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಲ್ಲಿ ದಂಪತಿ ಸ್ವಾಗತಿಸಿದ್ದರು. ಎರಡೂವರೆ ವರ್ಷದ ಹಿಂದೆ ಹೆಣ್ಣು ಮಗುವಿಗೆ ಉಪಾಸನಾ ಜನ್ಮ ನೀಡಿದ್ದರು. ಆಕೆಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದರು. ಇದೀಗ ಅವಳ ತಂಗಿ, ತಮ್ಮನ ಹೆಸರು ರಿವೀಲ್ ಆಗಿದೆ.
ಜನವರಿ 31ರಂದು ಹೈದರಾಬಾದ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾಗೆ ಹೆರಿಗೆ ಆಗಿತ್ತು. ಅವಳಿ ಮಕ್ಕಳನ್ನು ಮೆಗಾ ಫ್ಯಾಮಿಲಿ ಬರಮಾಡಿಕೊಂಡಿತ್ತು. 12 ದಿನಕ್ಕೆ ಸರಳವಾಗಿ ನಾಮಕರಣ ಶಾಸ್ತ್ರ ಮಾಡಲಾಗಿದೆ. ಸಂಪ್ರದಾಯಬದ್ಧವಾಗಿ ಹೆಸರಿರುವ ಕಾರ್ಯಕ್ರಮ ನೆರವೇರಿದೆ. ಚಿರಂಜೀವಿ ಈ ಬಗ್ಗೆ ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.

ಅಪ್ಪನ ಮಡಿಲಲ್ಲಿ ಕ್ಲಿಂಕಾರ ಕೂತಿದ್ದಾಳೆ. ಚಿರಂಜೀವಿ ಹಾಗೂ ಉಪಾಸನಾ ತಾಯಿ ತಲಾ ಒಂದು ಮಗುವಿನ್ನ ಹಿಡಿದು ಕ್ಯಾಮರಾಗಿ ಪೋಸ್ ಕೊಟ್ಟಿದ್ದಾರೆ. ಮಕ್ಕಳ ಮುಖ ಕಾಣದಂತೆ ದಂಪತಿ ಎಚ್ಚರ ವಹಿಸಿದ್ದಾರೆ. ಈವರೆಗೆ ಕ್ಲಿಂಕಾರಳನ್ನು ಕೂಡ ರಾಮ್‌ಚರಣ್- ಉಪಾಸನಾ ಅಭಿಮಾನಿಗಳಿಗೆ ಪರಿಚಯಿಸಲಿಲ್ಲ. ಇನ್ನು ಮೆಗಾ ಫ್ಯಾನ್ಸ್ ಮೆಗಾ ವಾರಸ್ದಾರ ಬಂದ ಎಂದು ಸಂಭ್ರಮಿಸುತ್ತಿದೆ.
ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಷಯ ತಿಳಿದು ಅಭಿಮಾನಿಗಳು ಆಸ್ಪತ್ರೆ ಮುಂಭಾಗದಲ್ಲಿ ಜಮಾಯಿಸಿ ಸಂಭ್ರಮಿಸಿದ್ದರು. ಪಟಾಕಿ ಸಿಡಿಸಿ ಜೈಕಾರ ಹಾಕಿ ಖುಷಿಪಟ್ಟಿದ್ದರು. ರಾಮ್‌ಚರಣ್- ಉಪಾಸನಾ ಅಭಿಮಾನಿಗಳಿಗೆ ಸಿಹಿ ಹಂಚಿದ್ದರು. ಕೆಲವರಿಗೆ ವಿಶೇಷ ಗಿಫ್ಟ್ ಬಾಕ್ಸ್ ಕೂಡ ಕಳುಹಿಸಿದ್ದರು.
ಅವಳಿ ಮಕ್ಕಳಲ್ಲಿ ಹೆಣ್ಣು ಮಗುವಿಗೆ ಅನ್ವೀರಾ ದೇವಿ ಕೊನಿದೇಲ ಹಾಗೂ ಗಂಡು ಮಗುವಿಗೆ ಶಿವರಾಮ್ ಕೊನಿದೇಲ ಎಂದು ಹೆಸರಿಟ್ಟಿದ್ದಾರೆ. ಚಿರಂಜೀವಿ ಕುಟುಂಬದಲ್ಲಿ ಬಹುತೇಕ ಎಲ್ಲರಿಗೂ ರಾಮ ಹಾಗೂ ಹನುಮಂತನ ಹೆಸರು ಬರುವಂತೆ ನಾಮಕರಣ ಮಾಡುತ್ತಾರೆ. ಇದೀಗ ಶಿವ ಹಾಗೂ ರಾಮನ ಹೆಸರು ಸೇರಿಸಿ ಚರಣ್ ಮಗನಿಗೆ ಹೆಸರಿಟ್ಟಿದ್ದಾರೆ. ನಟ ಚಿರಂಜೀವಿ ನಿಜವಾದ ಹೆಸರು 'ಶಿವ'ಶಂಕರ ವರಪ್ರಸಾದ್. ಹೀಗೆ ತಮ್ಮ ತಂದೆ ಹಾಗೂ ತಮ್ಮ ಹೆಸರು ಸೇರಿಕೊಂಡಿರುವಂತೆ ಮಗನಿಗೆ ಶಿವರಾಮ ಎಂದು ನಾಮಕರಣ ಮಾಡಿದ್ದಾರೆ. ಕೋನಿದೇಲ ಎನ್ನುವುದು ಮನೆತನದ ಹೆಸರು.
ಅದೇ ರೀತಿ "ವೀರಾ ಎಂದರೆ ಶೌರ್ಯ, ಮತ್ತು 'ಆನ್' ಅಪರಿಮಿತವಾದ ಎನ್ನುವ ಅರ್ಥವಿದೆ. ದೇವಿ ಹೆಸರನ್ನು ಸೇರಿಸಿ ಅನ್ವೀರಾ ದೇವಿ ಎಂದು ಹೆಣ್ಣು ಮಗುವಿಗೆ ನಾಮಕರಣ ಮಾಡಿದ್ದಾರೆ. ಮಕ್ಕಳ ನಾಮಕರಣ ಬಗ್ಗೆ Variety ಮ್ಯಾಗಝೀನ್ ಸಂದರ್ಶನದಲ್ಲಿ ರಾಮ್‌ಚರಣ್ ಮಾತನಾಡಿದ್ದಾರೆ.
"ಇಬ್ಬರು ಮಕ್ಕಳಿಗೆ ಹೆಸರಿಸುವುದು ನಮ್ಮಿಬ್ಬರ ಆಳವಾದ ವೈಯಕ್ತಿಕ ಮತ್ತು ಆಧ್ಯಾತ್ಮಿಕ ನಿರ್ಧಾರವಾಗಿತ್ತು. ಉಪಾಸನಾ ಮತ್ತು ನಾನು ಅದರ ಬಗ್ಗೆ ಬಹಳ ಚರ್ಚಿಸಿದೆವು, ಪೋಷಕರು ಜೊತೆಗಿದ್ದರು. ನಮ್ಮ ಸಂಸ್ಕೃತಿಯಲ್ಲಿ, ಹಿರಿಯರು ತಿಳುವಳಿಕೆ ಮತ್ತು ಆಶೀರ್ವಾದಗಳನ್ನು ತರುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರ ಉಪಸ್ಥಿತಿಯು ನಮಗೆ ಅರ್ಥಪೂರ್ಣವಾಗಿತ್ತು. ಮಗನ ಹೆಸರು ಶಿವರಾಮ. ಶಿವ ಮತ್ತು ರಾಮ - ಸಂಯಮದಿಂದ ಶಕ್ತಿ, ಸದಾಚಾರದೊಂದಿಗೆ ಭಕ್ತಿ. ನನ್ನ ತಂದೆಯ ಜನ್ಮ ಹೆಸರು ಶಿವಶಂಕರ್ ವರಪ್ರಸಾದ್. ಹಾಗಾಗಿ ಅವರ ಹೆಸರು ಸೇರಿಕೊಂಡಿದೆ" ಎಂದು ರಾಮ್‌ಚರಣ್ ಹೇಳಿದ್ದಾರೆ.
ಮಗಳ ಹೆಸರಿನ ಬಗ್ಗೆ ರಾಮ್‌ಚರಣ್ ಮಾತನಾಡಿ "ಅನ್ವೀರಾ ದೇವಿ, ಈ ಹೆಸರು ಅಪರಿಮಿತ ಧೈರ್ಯ ಮತ್ತು ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಪ್ರತಿನಿಧಿಸುತ್ತದೆ. 'ವೀರ' ಶೌರ್ಯವನ್ನು ಸೂಚಿಸುತ್ತದೆ ಮತ್ತು 'ಆನ್' ಎಂದರೆ ಅಪರಿಮಿತವಾದ ಎನ್ನುವ ಅರ್ಥವಿದೆ. ಜೊತೆಗೆ 'ದೇವಿ' ಹೆಸರು ಇದೆ. ಶಕ್ತಿ ಮತ್ತು ಅನುಗ್ರಹವು ಸಹಬಾಳ್ವೆ ನಡೆಸಬಹುದು ಎಂಬುದನ್ನು ನೆನಪಿಸುತ್ತದೆ. ನಮಗೆ, ಈ ಹೆಸರುಗಳು ಬರೀ ಗುರುತಿಸುವಿಕೆಗಳಲ್ಲ. ಅವು ಶಕ್ತಿ, ಪ್ರೀತಿ ಮತ್ತು ಧೈರ್ಯದ ಆಕಾಂಕ್ಷೆಗಳಾಗಿವೆ" ಎಂದು ತಿಳಿಸಿದ್ದಾರೆ.


Click it and Unblock the Notifications











