ವಿದೇಶಕ್ಕೂ ನೆಚ್ಚಿನ ದೇವರನ್ನು ಕೊಂಡೊಯ್ದ ರಾಮ್ ಚರಣ್ ಪತ್ನಿ; ಆಸ್ಕರ್ ಗೆಲುವಿನ ಹಿಂದೆ ಈ ದೇವರ ಆಶೀರ್ವಾದ?
ನಿನ್ನೆ ( ಮಾರ್ಚ್ 13 ) ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಜರುಗಿತು. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತೆಲುಗಿನ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿ ಅಡಿಯಲ್ಲಿ ಪ್ರಶಸ್ತಿಯನ್ನು ಗೆದ್ದು ಆಸ್ಕರ್ ಗೆದ್ದ ಮೊದಲ ಇಂಡಿಯನ್ ಸಿನಿಮಾ ಎಂಬ ದಾಖಲೆಯನ್ನು ಬರೆಯಿತು. ಇನ್ನು ಇದೇ ಕಾರ್ಯಕ್ರಮದಲ್ಲಿ ಭಾರತದ ದ ಎಲಿಫೆಂಟ್ ವಿಸ್ಪರರ್ಸ್ ಎಂಬ ಸಾಕ್ಷ್ಯ ಕಿರುಚಿತ್ರ ಬೆಸ್ಟ್ ಡಾಕ್ಯು ಚಿತ್ರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿತು.
ಹೀಗೆ ಆರ್ ಆರ್ ಆರ್ ದೊಡ್ಡ ಸಾಧನೆ ಮಾಡಿದ್ದರ ಬಗ್ಗೆ ಸಿನಿಮಾ ಮಾತ್ರವಲ್ಲದೇ ಎಲ್ಲಾ ಕ್ಷೇತ್ರಗಳ ದೊಡ್ಡ ವ್ಯಕ್ತಿಗಳೂ ಸಹ ಟ್ವೀಟ್ ಮಾಡಿ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದರು. ಈ ಗೆಲುವಿನ ಹಿಂದೆ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಸಾಹಿತಿ ಚಂದ್ರಬೋಸ್, ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲಭೈರವ ಹಾಗೂ ನೃತ್ಯ ಸಂಯೋಜಕ ಪ್ರೇಮ್ ರಕ್ಷಿತ್ ಅವರ ಅಭೂತಪೂರ್ವ ಶ್ರಮವಿತ್ತು.

ಈ ಮಹತ್ವದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಡಿಗೆ ಹೆಜ್ಜೆ ಹಾಕಿದ್ದ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ಸಹ ಆಗಮಿಸಿದ್ದರು. ಪತ್ನಿ ಉಪಾಸನ ಜತೆ ಕಾರ್ಯಕ್ರಮಕ್ಕೆ ಬಂದಿದ್ದ ರಾಮ್ ಚರಣ್ ಭಾರತ ಸಂಪ್ರದಾಯದ ಡ್ರೆಸ್ ಧರಿಸಿ ಮಿಂಚಿದರು. ಇನ್ನು ತಾವು ಆಸ್ಕರ್ ಕಾರ್ಯಕ್ರಮಕ್ಕೆ ಯಾವ ರೀತಿ ತಯಾರಾದೆವು ಎಂಬುದನ್ನು ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ವಿಡಿಯೊ ಮಾಡುವ ಮೂಲಕ ಹಂಚಿಕೊಂಡಿದೆ.
ಈ ವಿಡಿಯೊದಲ್ಲಿ ರಾಮ್ ಚರಣ್ ತಮ್ಮ ಬಟ್ಟೆಗಳನ್ನು ಹೇಗೆಲ್ಲಾ ತಯಾರಿಸಲಾಗಿದೆ ಎಂಬುದನ್ನು ವಿವರರಿಸಿ ಬಟ್ಟೆಯ ವಿನ್ಯಾಸ ಹಾಗೂ ಗುಣಮಟ್ಟವನ್ನು ಮೆಚ್ಚಿಕೊಂಡರು. ಇನ್ನು ಇದೇ ವಿಡಿಯೊದಲ್ಲಿ ತನ್ನ ಪತ್ನಿ ಉಪಸನಾ ಎಲ್ಲೇ ಹೋದರೂ ಈ ಒಂದು ಪುಟ್ಟ ದೇವಸ್ಥಾನವನ್ನು ಹೊತ್ತು ಬರುತ್ತಾರೆ ಎಂದ ರಾಮ್ ಚರಣ್ ಪುಟ್ಟ ಬಾಕ್ಸ್ ಒಳಗೆ ಸೀತೆ, ರಾಮ, ಲಕ್ಷ್ಮಣ ಹಾಗೂ ಆಂಜನೇಯನ ವಿಗ್ರಹಗಳು ಇರುವುದನ್ನು ತೋರಿಸಿ ಕೈ ಮುಗಿದಿದ್ದಾರೆ ಹಾಗೂ ಇವರ ಆಶೀರ್ವಾದ ನಮ್ಮನ್ನು ಕಾಯುತ್ತಿದೆ ಎಂದಿದ್ದಾರೆ.

ಸದ್ಯ ವಿಡಿಯೊದಲ್ಲಿನ ಈ ತುಣುಕನ್ನು ವೀಕ್ಷಿಸಿದ ನೆಟ್ಟಿಗರು ಈ ದೇವರುಗಳ ಆಶೀರ್ವಾದ ನಿಮ್ಮ ಮೇಲಿದೆ, ಆಸ್ಕರ್ ಗೆಲುವಿನ ಹಿಂದೆ ಇವರ ಆಶೀರ್ವಾದವೂ ಸಹ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಲಾಸ್ ಏಂಜಲೀಸ್‌ಗೂ ತೆರಳುವ ಮುನ್ನ ಮಾಲೆ ಧರಿಸಿದ್ದ ರಾಮ್ ಚರಣ್ ಅದೇ ಉಡುಗೆಯಲ್ಲಿ ವಿಮಾನ ಹತ್ತಿದ್ದರು. ಆದರೆ ಲಾಸ್ ಏಂಜಲೀಸ್ ತಲುಪಿದ ನಂತರ ವ್ರತ ಮುಗಿದ ಕಾರಣ ಮಾಲೆ ತೆಗೆದು ಹಾಕಿದ್ದರು. ಅಲ್ಲದೆ ರಾಮ್ ಚರಣ್ ಪತ್ನಿ ಉಪಾಸನಾ ನಾಲ್ಕು ತಿಂಗಳ ಗರ್ಭಿಣಿ ಎಂಬ ವಿಚಾರವನ್ನೂ ಸಹ ರಾಮ್ ಚರಣ್ ಹಂಚಿಕೊಂಡಿದ್ದು, ಪತ್ನಿ ಉಪಸನಾ ಹೊಟ್ಟೆಯಲ್ಲಿರುವ ಕಂದ ತಮಗೆ ಲಕ್ಕಿ ಎಂದು ಹೇಳಿಕೊಂಡಿದ್ದರು. ಇದರ ಕುರಿತೂ ಸಹ ಪ್ರತಿಕ್ರಿಯಿಸಿದ್ದ ನೆಟ್ಟಿಗರು ಈ ಪುಟ್ಟ ಮಗೂ ಸಹ ನಿಮಗೆ ಲಕ್ಕಿ ಎಂದಿದ್ದಾರೆ.


Click it and Unblock the Notifications











