'ಗೇಮ್ ಚೇಂಜರ್' ಸಾಂಗ್ ಬಂತು; ರಾಮ್‌ಚರಣ್ ಡ್ಯಾನ್ಸ್ ಓಕೆ, ಆದ್ರೆ...
ತೆಲುಗು ನಟ ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೀಗ ಚಿತ್ರದ ಲಿರಿಕಲ್ ಸಾಂಗ್ ಒಂದು ರಿಲೀಸ್ ಆಗಿದೆ. ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗಪ್ಪಳಿಸಲಿದೆ.
'ಆರ್‌ಆರ್‌ಆರ್' ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಮೆಗಾ ಫ್ಯಾನ್ಸ್ 'ಗೇಮ್ ಚೇಂಜರ್' ದರ್ಶನಕ್ಕೆ ಕಾಯುವಂತಾಗಿದೆ. ತಮಿಳು ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಒಂದ್ಕಾಲದಲ್ಲಿ ಶಂಕರ್ ನಿರ್ದೇಶನದ ಚಿತ್ರಗಳೆಲ್ಲಾ ಗೆಲ್ಲುತ್ತಿದ್ದವು. ಆದರೆ ಈಗ ಅದು ನಡೆಯುತ್ತಿಲ್ಲ. ಇತ್ತೀಚೆಗೆ ಬಂದ 'ಇಂಡಿಯನ್- 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಹಾಗಾಗಿ 'ಗೇಮ್ ಚೇಂಜರ್' ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಬಹಳ ಹಿಂದೆ ಸೆಟ್ಟೇರಿದ್ದ 'ಗೇಮ್ ಚೇಂಜರ್' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಮೇಲೆ ಬರಲಿದೆ. ಚಿತ್ರಕ್ಕೆ ಎಸ್. ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಕೈರಾ ಅದ್ವಾನಿ, ಎಸ್. ಜೆ ಸೂರ್ಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ಚರಣ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ.
ಶಂಕರ್ ಸಿನಿಮಾಗಳಲ್ಲಿ ಅದ್ಧೂರಿತನ ಎದ್ದು ಕಾಣುತ್ತದೆ. ಮುಖ್ಯವಾಗಿ ಸಾಂಗ್ಸ್ ಬಹಳ ಹೈಲೆಟ್ ಆಗುತ್ತದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿ ಸೆಟ್, ನೂರಾರು ಡ್ಯಾನ್ಸರ್ಸ್, ಕಲರ್‌ಫುಲ್ ಕಾಸ್ಟ್ಯೂಮ್ ಹಾಗೂ ಬಿಂದಾಸ್ ಸ್ಟೆಪ್ಸ್‌ನಿಂದ ಶಂಕರ್ ಸಿನಿಮಾ ಸಾಂಗ್ಸ್ ಗಮನ ಸೆಳೆಯುತ್ತವೆ. ಸದ್ಯ ಬಿಡುಗಡೆ ಆಗಿರುವ 'ರಾ ಮಚ್ಚಾ ರಾ' ಸಾಂಗ್‌ನಲ್ಲೂ ಅದನ್ನೆಲ್ಲಾ ನೋಡಬಹುದು.
ನೂರಾರು ಡ್ಯಾನ್ಸರ್ಸ್ ಜೊತೆ ರಾಮ್‌ಚರಣ್ ಸ್ಟೆಪ್ಸ್ ಹಾಕಿರುವುದನ್ನು ನೋಡಬಹುದು. ಬಹಳ ಅದ್ಧೂರಿಯಾಗಿ ಸಾಂಗ್ ಸೆರೆ ಹಿಡಿದಿರುವುದು ಗೊತ್ತಾಗುತ್ತದೆ. ಆದರೆ ತಮನ್ ಮ್ಯೂಸಿಕ್ ಅಷ್ಟಾಗಿ ಸದ್ದು ಮಾಡ್ತಿಲ್ಲ. ಯಾಕೋ ಮ್ಯಾಜಿಕ್ ಕ್ರಿಯೇಟ್ ಆಗಿಲ್ಲ ಎಂದು ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗಣೇಶ್ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದ ಮೇಕಿಂಗ್ ಝಲಕ್ ಮಿಕ್ಸ್ ಮಾಡಿ ಲಿರಿಕಲ್ ಸಾಂಗ್ ವೀಡಿಯೋ ರಿಲೀಸ್ ಮಾಡಿದ್ದಾರೆ.
ಹೆಲಿಕ್ಯಾಪ್ಟರ್‌ನಲ್ಲಿ ರಾಮ್‌ಚರಣ್ ಎಂಟ್ರಿ ಕೊಡುವುದನ್ನು ನೋಡಬಹುದು. ಇದು ಚಿತ್ರದಲ್ಲಿ ಹೀರೊ ಇಂಟ್ರಡಕ್ಷನ್ ಸಾಂಗ್. ಹಾಗಾಗಿ ಬಹಳ ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಆದರೆ ಅಭಿಮಾನಿಗಳ ಮನಗೆಲ್ಲುವಲ್ಲಿ ಸಾಂಗ್ ವಿಫಲವಾಗಿದೆ. ಶೂಟಿಂಗ್ ವೇಳೆ ದುರಂತ ನಡೆದು 'ಇಂಡಿಯನ್- 2' ಸಿನಿಮಾ ನಿಂತಿತ್ತು. ಅದೇ ಸಮಯದಲ್ಲಿ ಶಂಕರ್ 'ಗೇಮ್ ಚೇಜರ್' ಸಿನಿಮಾ ಆರಂಭಿಸಿದ್ದರು. ಬಳಿಕ ಕಮಲ್ ಸಿನಿಮಾ ಮುಗಿಸಿ ರಿಲೀಸ್ ಮಾಡಿದ್ದರು. ಹಾಗಾಗಿ ಚರಣ್ ಚಿತ್ರ ತಡವಾಯಿತು.
ದಿಲ್ ರಾಜು 'ಗೇಮ್ ಚೇಜರ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಐಎಎಸ್ ಆಫೀಸರ್ ಆಗಿ ಚರಣ್ ನಟಿಸಿದ್ದಾರೆ. ಉನ್ನತ ಅಧಿಕಾರಿಯಾಗಿ ನೇಮಕಗೊಂಡ ಬಳಿಕ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಆತ ಆಡಿ ಕುಣಿಯುವ ಸಂದರ್ಭದಲ್ಲಿ ಈ ಸಾಂಗ್ ಬರುತ್ತದೆ. ಡಿಸೆಂಬರ್ 20ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಸಾಮಾನ್ಯವಾಗಿ ಒಂದು ಸಂದೇಶದ ಜೊತೆಗೆ ಶಂಕರ್ ಪಕ್ಕಾ ಕಮರ್ಷಿಯಲ್ ಸಿನಿಮಾ ಕಟ್ಟಿಕೊಡುತ್ತಾರೆ. 'ಗೇಮ್ ಚೇಂಜರ್' ಚಿತ್ರದಲ್ಲಿ ಕೂಡ ಅದೇ ಪ್ರಯತ್ನ ನಡೀತಿದೆ. 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ತಿರು ಛಾಯಾಗ್ರಹಣ ಚಿತ್ರಕ್ಕಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಜೀ ಸ್ಟುಡಿಯೋಸ್, ಎಎ ಫಿಲ್ಮ್ಸ್ ಚಿತ್ರದ ವಿತರಣೆ ಹಕ್ಕು ಕೊಂಡಕೊಂಡಿದೆ.
ರಾಜಮೌಳಿ ಜೊತೆ ನಟಿಸಿದ ಬಳಿಕ ಆ ನಟನ ಮುಂದಿನ ಸಿನಿಮಾ ಸೋಲುತ್ತದೆ ಎನ್ನುವ ವಿಚಿತ್ರ ನಂಬಿಕೆ ತೆಲುಗು ಚಿತ್ರರಂಗದಲ್ಲಿದೆ. 'ಮಗಧೀರ' ಬಳಿಕ ಚರಣ್‌ಗೆ ಇದೇ ಅನುಭವ ಆಗಿತ್ತು. ಇದೀಗ 'RRR' ಬಳಿಕ 'ಗೇಮ್ ಚೇಂಜರ್' ಸಿನಿಮಾ ಬರುತ್ತಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಜ್ಯೂ. ಎನ್‌ಟಿಆರ್ ನಟಿಸಿದ 'ದೇವರ' ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡ್ತಿದೆ.


Click it and Unblock the Notifications











