Peddi Advance Booking: ಹೇಗಿದೆ 'ಪೆದ್ದಿ' ಅಡ್ವಾನ್ಸ್ ಬುಕ್ಕಿಂಗ್? ಎಲ್ಲಿಲ್ಲಿ ಟಿಕೆಟ್ ದರ ಎಷ್ಟಿದೆ?
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಬುಧವಾರ ಸಂಜೆಯಿಂದಲೇ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನಲ್ಲಿ ಕೂಡ 'ಪೆದ್ದಿ' ಫೀವರ್ ಜೋರಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಬುಚ್ಚಿಬಾಬು ಸನಾ ನಿರ್ದೇಶನದ ಸ್ಪೋರ್ಟ್ಸ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ತೆಲುಗು ಸೇರಿ 5 ಭಾಷೆಯಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಟೀಸರ್, ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ. 'ಗೇಮ್ ಚೇಂಜರ್' ಹೀನಾಯ ಸೋಲಿನ ಬಳಿಕ ಈ ಚಿತ್ರದಲ್ಲಿ ರಾಮ್‌ಚರನ್ ನಟಿಸಿದ್ದಾರೆ. ಪಾತ್ರಕ್ಕಾಗಿ ಕುಸ್ತಿ ಪಟ್ಟುಗಳನ್ನು ಕಲಿತು ಬಣ್ಣ ಹಚ್ಚಿದ್ದಾರೆ. ಅವರ ಪರಿಶ್ರಮಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಕಾದು ನೋಡಬೇಕಿದೆ.

ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ 'ಪೆದ್ದಿ' ಸಿನಿಮಾ ನಿರ್ಮಾಣವಾಗಿದೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದು ಶಿವರಾಜ್‌ಕುಮಾರ್, ಜಗಪತಿ ಬಾಬು ಚಿತ್ರದ ತಾರಾಗಣದಲ್ಲಿದ್ದಾರೆ. ರತ್ನವೇಲು ಛಾಯಾಗ್ರಹಣ ಹಾಗೂ ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಇನ್ನು ಆಂಧ್ರ, ತೆಲಂಗಾಣದಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ.
ಅಡ್ವಾನ್ಸ್ ಬುಕ್ಕಿಂಗ್
ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ 6.30ಕ್ಕೆ 'ಪೆದ್ದಿ' ಆರ್ಭಟ ಶುರುವಾಗಲಿದೆ. ಅದಕ್ಕೂ ಮುನ್ನ ಬುಧವಾರ ಸಂಜೆ ಕೆಲವೆಡೆ ಪ್ರೀಮಿಯರ್ ಶೋಗಳು ಆಯೋಜನೆಯಾಗಿದೆ. ಈಗಾಗಲೇ ಬೆಳಗಿನ ಕೆಲ ಶೋಗಳ ಟಿಕೆಟ್ ಸೋಲ್ಡೌಟ್ ಆಗಿದೆ. ಸಾಕಷ್ಟು ಕಡೆಗಳಲ್ಲಿ ಫಾಸ್ಟ್ ಫಿಲ್ಲಿಂಗ್ ನೋಡಬಹುದು. ಐಪಿಎಲ್ ಟೂರ್ನಿ ಶುರುವಾದ ಬಳಿಕ ದೊಡ್ಡ ಸಿನಿಮಾಗಳು ತೆರೆಗೆ ಬಂದಿರಲಿಲ್ಲ. ಇದೀಗ ಐಪಿಎಲ್ ಮುಗಿದಿದ್ದು ಮೊದಲಿಗೆ 'ಪೆದ್ದಿ' ಬರ್ತಿದ್ದಾನೆ.

ಎಲ್ಲೆಲ್ಲಿ ಟಿಕೆಟ್ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಪ್ರೀಮಿಯರ್ ಶೋಗಳ ಟಿಕೆಟ್ ದರ 600 ರೂ. ದಾಟಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಕೂಡ ಪ್ರೀಮಿಯರ್ ಶೋ ಟಿಕೆಟ್ ದರ 400 ರೂ, 600 ರೂ,ಗಳಿಗೆ ಹೆಚ್ಚಿಸಲಾಗಿದೆ. ಹಾಗಾಗಿ ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮೀನಾಮೇಷ ಎಣಿಸುವಂತಾಗಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಗುರುವಾರ ಬೆಳಗಿನ ಶೋಗಳ ಟಿಕೆಟ್ 250 ರೂ. ಹಾಗೂ 300 ರೂ. ಆಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ದರ ಹೆಚ್ಚಾಗಿದೆ.
ಆಂಧ್ರ, ತೆಲಂಗಾಣ ಬುಕ್ಕಿಂಗ್
ತೆಲುಗು ರಾಜ್ಯಗಳಲ್ಲಿ 'ಪೆದ್ದಿ' ಕ್ರೇಜ್ ಜೋರಾಗಿದೆ. ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಅಲ್ಲಿನ ಸರ್ಕಾರಗಳ ಅನುಮತಿ ಸಿಕ್ಕಿದೆ. ಆಂಧ್ರದಲ್ಲಿ ಬುಧವಾರ ರಾತ್ರಿ 8 ಗಂಟೆಗೆ ಪ್ರೀಮಿಯರ್ ಶೋ ನಡೆಸಲು ಸರ್ಕಾರ ಅನುಮತಿ ನೀಡಿದೆ. ಟಿಕೆಟ್ ದರ 600 ರೂ.ಗೆ ನಿಗದಿಪಡಿಸಲು ಸೂಚಿಸಿದೆ. ಅದೇ ರೀತೀ ಜೂನ್ 4 ರಿಂದ 2 ವಾರ ಪ್ರತಿದಿನ 5 ಪ್ರದರ್ಶನಗಳನ್ನು ನಡೆಸಲು ಅನುಮತಿ ಸಿಕ್ಕಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್ ಬೆಲೆಯನ್ನು 100 ರೂ. ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 125 ರೂ.ವರೆಗೆ ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿದೆ. ಆಂಧ್ರ, ತೆಲಂಗಾಣದಲಿ ಒಂದು ಲಕ್ಷಕ್ಕೂ ಅಧಿಕ ಟಿಕೆಟ್ ಈಗಾಗಲೇ ಬುಕ್ ಆಗಿದೆ.
ಓವರ್‌ಸೀಸ್ ಮಾರ್ಕೆಟ್
ವಿದೇಶಗಳಲ್ಲಿ ಕೂಡ 'ಪೆದ್ದಿ' ಕ್ರೇಜ್ ಶುರುವಾಗಿದೆ. ಉತ್ತರ ಅಮೆರಿಕಾದಲ್ಲಿ $850K ಪ್ರೀ ಸೇಲ್ಸ್ ಆಗಿದೆ. ಅಂದರೆ ಸುಮಾರು 8 ಕೋಟಿ ರೂ. ಕಲೆಕ್ಷನ್ ಮಾಡಿದಂತಾಗಿದೆ. ಶೀಘ್ರದಲ್ಲೇ ಇದು 1 ಮಿಲಿಯನ್ ಗಡಿ ದಾಟಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಓವರ್‌ಸೀಸ್‌ನಲ್ಲಿ ಸಿನಿಮಾ ಬಿಡುಗಡೆ ಮಾಡ್ತಿದೆ. ಎಲ್ಲೆಡೆ ಅಭಿಮಾನಿಗಳು ಅದ್ಧೂರಿಯಾಗಿ 'ಪೆದ್ದಿ' ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ.


Click it and Unblock the Notifications