twitter
    For Quick Alerts
    ALLOW NOTIFICATIONS  
    For Daily Alerts

    ಆಂಧ್ರ ಸರ್ಕಾರಕ್ಕೆ ವರ್ಮಾ ಕೇಳಿದ ಹತ್ತು ಪ್ರಶ್ನೆಗಳು

    |

    ಆಂಧ್ರ ಸರ್ಕಾರದ ಮೇಲೆ ತೆಲುಗು ಚಿತ್ರರಂಗ ತಿರುಗಿ ಬಿದ್ದಿದೆ. ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ದೊಡ್ಡ ಹೊಡೆತವನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರ ನೀಡಿದೆ. ಇದು ಸಹಜವಾಗಿಯೇ ತೆಲುಗು ಚಿತ್ರರಂಗದವರನ್ನು ಕೆರಳಿಸಿದೆ.

    ಪವನ್ ಕಲ್ಯಾಣ್, ನಾನಿ, ಅಲ್ಲು ಅರ್ಜುನ್ ಸೇರಿದಂತೆ ಹಲವು ಸ್ಟಾರ್ ನಟರೇ ಆಂಧ್ರ ಸರ್ಕಾರದ ವಿರುದ್ಧ ಕಟು ಮಾತುಗಳನ್ನಾಡಿದ್ದಾರೆ. ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಂಧ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಟಿಕೆಟ್ ದರ ಇಳಿಸಿರುವ ಆಂಧ್ರ ಸರ್ಕಾರಕ್ಕೆ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.

    ''ಒಬ್ಬ ಉತ್ಪಾದಕ ಹಾಗೂ ಗ್ರಾಹಕನ ನಡುವೆ ಇರುವ ನೇರ ಸಂಬಂಧದ ಮಧ್ಯೆ ಸರ್ಕಾರಕ್ಕೆ ಮೂಗು ತೂರಿಸುವ ಅಧಿಕಾರವಿದೆಯೇ? ಗ್ರಾಹಕ ಹಾಗೂ ಉತ್ಪಾದಕನ ನಡುವೆ ಈಗಾಗಲೇ ಸ್ಥಾಪಿತವಾಗಿರುವ ಸಂಬಂಧದ ನಡುವೆ ಸರ್ಕಾರ ಮೂಗು ತೂರಿಸುವುದು ಸರಿಯೇ? ಒಂದೊಮ್ಮೆ ಗ್ರಾಹಕ ಹಾಗೂ ಉತ್ಪಾದಕರ ನಡುವೆ ವಿಶ್ವಾಸವಿಲ್ಲದಿದ್ದರೆ ಅಥವಾ ಕೆಲವು ವ್ಯತಿರಿಕ್ತ ಸಂದರ್ಭಗಳಲ್ಲಿ ಹೊರತಾಗಿ ಸರ್ಕಾರ ಈ ವ್ಯವಹಾರದಲ್ಲಿ ಮೂಗು ತೂರಿಸುವಂತಿಲ್ಲ. ಈಗ ಸಿನಿಮಾ ರಂಗಕ್ಕೂ ಪ್ರೇಕ್ಷಕರ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಹಾಗಿದ್ದರೂ ಸರ್ಕಾರ ಮೂಗು ತೂರಿಸಿದ್ದೇಕೆ'' ಎಂದು ರಾಮ್ ಗೋಪಾಲ್ ವರ್ಮಾ ಮೊದಲ ಪ್ರಶ್ನೆ ಮಾಡಿದ್ದಾರೆ.

    Ram Gopal Varma Asked 10 Questions To Andhra Pradesh Government

    ಯಾವುದೇ ಉತ್ಪಾದಕ ಉತ್ಪಾದಿಸಿದ ವಸ್ತುವಿಗೆ ಸರ್ಕಾರ ಬೆಲೆ ನಿಗದಿಪಡಿಸುವುದು ಸರಿಯೇ? ಉತ್ಪಾದಕನಿಗೆ ಆಗಿರುವ ಖರ್ಚನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರವು ಏಕಪಕ್ಷೀಯವಾಗಿ ಬೆಲೆ ನಿಗದಿ ಪಡಿಸಬಹುದೇ? ಎಂದು ವರ್ಮಾ ಎರಡನೇ ಪ್ರಶ್ನೆ ಕೇಳಿದ್ದಾರೆ.

    ಸಿನಿಮಾ ಎಂಬುದು ಜನರಿಗೆ ಬಹಳ ಅವಶ್ಯಕ ಎಂದು ಸರ್ಕಾರವೇ ಇತ್ತೀಚೆಗೆ ಹೇಳಿದೆ ಹಾಗಾಗಿ ಟಿಕೆಟ್ ದರ ಇಳಿಸಿರುವುದಾಗಿ ಹೇಳುತ್ತಿದೆ. ಸಿನಿಮಾಗಳು ಜನಗಳಿಗೆ, ಬಡವರಿಗೆ ಅವಶ್ಯಕವಾಗಿ ಬೇಕಾಗಿರುವುದು ಎಂದು ಸರ್ಕಾರ ನಿರ್ಧರಿಸಿರುವಾಗ ಸರ್ಕಾರ ಏಕೆ ನಿರ್ಮಾಪಕರಿಗೆ ಸಬ್ಸಿಡಿ ನೀಡಿ ಇನ್ನೂ ಹೆಚ್ಚು ಹೆಚ್ಚು ಸಿನಿಮಾ ನಿರ್ಮಾಣ ಮಾಡಲು ಪ್ರೋತ್ಸಾಹ ನೀಡಬಾರದು? ಎಂದು ವರ್ಮಾ ಮೂರನೇ ಪ್ರಶ್ನೆ ಕೇಳಿದ್ದಾರೆ.

    ರೇಷನ್ ಅಂಗಡಿಗಳು ಅಥವಾ ನ್ಯಾಯ ಬೆಲೆ ಅಂಗಡಿಗಳ ಮೂಲಕ ಸರ್ಕಾರವು ರೈತರಿಂದ ವಸ್ತು ಖರೀದಿಸಿ ಕಡಿಮೆ ಬೆಲೆಗೆ ಜನರಿಗೆ ನೀಡುತ್ತಿರುವ ಮಾದರಿಯಲ್ಲಿಯೇ, ಸರ್ಕಾರವೇ ನಮ್ಮ ಸಿನಿಮಾಗಳನ್ನು ನಮ್ಮ ಬೆಲೆಗೆ ಖರೀದಿಸಿ 'ನ್ಯಾಯಬೆಲೆ ಚಿತ್ರಮಂದಿರ'ಗಳನ್ನು ಸ್ಥಾಪಿಸಿ ಏಕೆ ಕಡಿಮೆ ಬೆಲೆಗೆ ಸಿನಿಮಾಗಳನ್ನು ತೋರಿಸಬಾರದು'' ಎಂದು ವರ್ಮಾ ಪ್ರಶ್ನೆ ಮಾಡಿದ್ದಾರೆ.

    ಯಾವ ಬೆಲೆಗೆ ಚಿತ್ರಮಂದಿರಗಳ ಟಿಕೆಟ್ ಅನ್ನು ಮಾರಬೇಕು ಎಂದು ನಿರ್ಮಾಪಕರು, ಚಿತ್ರಮಂದಿರಗಳ ಮಾಲೀಕರು ಬೇಡಿಕೆ ಇಟ್ಟಿದ್ದಾರೆಯೋ ಅದೇ ಬೆಲೆಗೆ ಸರ್ಕಾರವೇ ಟಿಕೆಟ್‌ಗಳನ್ನು ಖರೀದಿಸಿ ಅದನ್ನು ಜನರಿಗೆ ಉಚಿತವಾಗಿಯೋ ಅಥವಾ ಕಡಿಮೆ ಬೆಲೆಗೋ ಮಾರಾಟ ಮಾಡಿದರೆ ನಮಗೆ ನಮ್ಮ ಹಣವೂ ಸಿಗುತ್ತದೆ, ನಿಮಗೆ ನಿಮ್ಮ ಓಟುಗಳೂ ಸಿಗುತ್ತವೆ, ಈ ಐಡಿಯಾ ಹೇಗಿದೆ? ಎಂದು ಸಲಹೆ ನೀಡಿದ್ದಾರೆ ವರ್ಮಾ.

    ''ಸ್ಟಾರ್ ನಟರಿಗೆ ದೊಡ್ಡ ಸಂಭಾವನೆ ಕೊಟ್ಟು ಸಿನಿಮಾಗಳ ಬಜೆಟ್ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತೀರಿ. ಸ್ಟಾರ್ ನಟರನ್ನು ನೋಡಿಯೇ ಚಿತ್ರಮಂದಿರಕ್ಕೆ ಜನ ಬರುವುದು. ಸ್ಟಾರ್ ನಟರು ಎಂದ ಮಾತ್ರಕ್ಕೆ ಅವರಿಗೆ ಹೆಚ್ಚು ಸಂಭಾವನೆ ನೀಡುವುದಿಲ್ಲ. ನಿರ್ಮಾಪಕರು ಬುದ್ಧಿವಂತರು ನಟರ ಈ ಹಿಂದಿನ ಸಿನಿಮಾಗಳ ಕಲೆಕ್ಷನ್ ಎಲ್ಲವನ್ನೂ ನೋಡುತ್ತಾರೆ. ಅದೂ ಅಲ್ಲದೆ ಸಂಭಾವನೆ ಎನ್ನುವುದು ಪಡೆಯುವವನ, ನೀಡುವವನ ನಡುವೆ ನಡೆವ ವ್ಯವಹಾರ ಅದನ್ನು ಪ್ರಶ್ನಿಸಲು ನೀವು ಯಾರು?'' ಎಂದು ವರ್ಮಾ ಕೇಳಿದ್ದಾರೆ.

    ''ಸಿನಿಮಾದ ಟ್ರೇಲರ್ ಚೆನ್ನಾಗಿರುತ್ತದೆ, ಅದನ್ನು ನಂಬಿ ಹಣ ಕೊಟ್ಟು ಸಿನಿಮಾಕ್ಕೆ ಬಂದರೆ ಅದು ಚೆನ್ನಾಗಿರುವುದಿಲ್ಲ. ಇಲ್ಲಿ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಕೆಟ್ಟ ಸಿನಿಮಾಗಳಿಗೆ ಕೊಟ್ಟಿರುವ ಹಣ ಗ್ರಾಹಕರಿಗೆ ವಾಪಸ್ ಕೊಡುತ್ತೀರ? ಎಂದು ಪ್ರಶ್ನೆ ಎದ್ದಿದೆ. ಒಂದೊಮ್ಮೆ ಸ್ಟಾರ್ ಹೋಟೆಲ್‌ಗೆ ಹೋಗಲಿ ಚೆನ್ನಾಗಿ ಊಟ ಮಾಡಿ, ನನಗೆ ಊಟ ಇಷ್ಟವಿಲ್ಲ ಬಿಲ್ ಕಟ್ಟುವುದಿಲ್ಲ ಎಂದರೆ ಅದು ಸರಿಯಾಗುತ್ತದೆಯೇ?. ಹೋಗಲಿ ಸಿನಿಮಾ ಇಷ್ಟವಾಗಲಿಲ್ಲ ಹಣ ವಾಪಸ್ ಕೊಡಿ ಎಂದವರು, ಹಣ ಕೊಟ್ಟರೆ, ತಾವು ನೋಡಿದ ಸಿನಿಮಾವನ್ನು ನಿರ್ಮಾಪಕನಿಗೆ ವಾಪಸ್ ನೀಡಬಲ್ಲರೆ? ಅಧಿಕಾರಕ್ಕೆ ಬರುವಾಗ ಅದು ಮಾಡುತ್ತೇವೆ ಇದು ಮಾಡುತ್ತೇವೆ ಎನ್ನುತ್ತಾರೆ ರಾಜಕಾರಣಿಗಳು ಅವರು ಭರವಸೆ ಕೊಟ್ಟ ಕೆಲಸ ಮಾಡಲಿಲ್ಲವೆಂದು ಅವರನ್ನು ರಾಜೀನಾಮೆ ಕೊಡಿ ಎಂದರೆ ಕೊಡುತ್ತಾರೆಯೇ? ಸರ್ಕಾರವನ್ನು ಕೆಳಗಿಳಿಸಿ ಎಂದರೆ ಇಳಿಸುತ್ತಾರೆಯೇ?'' ಎಂದು ಪ್ರಶ್ನೆ ಮಾಡಿದ್ದಾರೆ ವರ್ಮಾ.

    ''ಸರ್ಕಾರದ ಬಳಿಯೇ ದೂರದರ್ಶನ ಚಾನೆಲ್ ಇದೆ. ಸರ್ಕಾರವೇ ಏಕೆ 'ಬಾಹುಬಲಿ' ಅವರ ಅಪ್ಪನಂಥಹಾ ಸಿನಿಮಾಗಳನ್ನು ತೆಗೆದು ದೂರದರ್ಶನದಲ್ಲಿಯೇ ಪ್ರಸಾರ ಮಾಡಿಬಿಡಬಾರದು. ಅದು ಇನ್ನೂ ಸುಲಭವಲ್ಲವೆ, ಸಿನಿಮಾಗಳಿಗಾಗಿ ಚಿತ್ರರಂಗದವರ ಮೇಲೆ ಅವಲಂಬಿತರಾಗುವುದೇ ಬೇಡ'' ಎಂದು ಸಲಹೆ ಕೊಟ್ಟಿದ್ದಾರೆ ವರ್ಮಾ.

    ಎಲ್ಲ ಸಿನಿಮಾಗಳ ನಿರ್ಮಾಣ ರೀತಿ ಒಂದೇ. ಹಾಗಿದ್ದರೂ ಕೆಲವು ಕಡಿಮೆ ಬಜೆಟ್ ಸಿನಿಮಾಗಳು, ಕೆಲವು ದೊಡ್ಡ ಬಜೆಟ್‌ ಸಿನಿಮಾಗಳು ಆಗುವುದು ಏಕೆ. ಯಾಕೆ ಎಲ್ಲ ಸಿನಿಮಾಗಳ ಬಜೆಟ್‌ಗಳು ಒಂದೇ ರೀತಿ ಇರಬಾರದು ಎಂದು ಕೇಳುತ್ತೀರಿ. ಸಣ್ಣ ಸಿನಿಮಾಗಳಿಗೆ 20-30 ಜನರಷ್ಟೆ ಕೆಲಸ ಮಾಡುತ್ತಾರೆ. ಆದರೆ ದೊಡ್ಡ ಬಜೆಟ್ ಸಿನಿಮಾಗಳಿಗೆ ಸಾವಿರಾರು ಮಂದಿ ಕೆಲಸ ಮಾಡುತ್ತಾರೆ. ನಿರ್ಮಾಪಕ ಖರ್ಚು ಮಾಡುವ ಹಣ ಅವರಿಗೆ ಹಂಚಿಕೆ ಆಗುತ್ತದೆ. ಅಲ್ಲದೆ ಗುಣಮಟ್ಟದ ಕೆಲಸ ಮಾಡುವವನಿಗೆ ಹೆಚ್ಚು ಹಣ ಕೊಡಬೇಕಾಗುತ್ತದೆ. ಸರ್ಕಾರದಲ್ಲಿಯೂ ಕೆಲವು ಅಧಿಕಾರಿಗಳಿಗೆ ಹೆಚ್ಚು ಸಂಬಳ ನೀಡುವುದಿಲ್ಲವೇ ಹಾಗೆಯೇ ಅದು'' ಎಂದಿದ್ದಾರೆ ವರ್ಮಾ.

    ''ಸರ್ಕಾರದ ಈ ಜನಪರವಾದ ನಿರ್ಧಾರ ಚಿತ್ರರಂಗದ ವಿಷಯದಲ್ಲಿ ಮಾತ್ರವೇ ಏಕೆ? ಹೋಟೆಲ್ ಅಥವಾ ಇನ್ನಾವುದೇ ವ್ಯವಹಾರಗಳಲ್ಲಿ ಸರ್ಕಾರ ಮೂಗು ತೂರಿಸುತ್ತಿಲ್ಲ ಏಕೆ? ಒಂದು ಇಡ್ಲಿಯನ್ನು ರಸ್ತೆ ಬದಿ ಅಂಗಡಿಯವ ಐದು ರುಪಾಯಿಗೆ ಮಾರಾಟ ಮಾಡುತ್ತಾನೆ, ಫೈವ್ ಸ್ಟಾರ್ ಹೊಟೆಲ್‌ನವ 500 ರುಪಾಯಿಗೆ ಮಾರಾಟ ಮಾಡುತ್ತಾನೆ. ಅದೇ ಇಡ್ಲಿಯನ್ನು ಸ್ಟಾರ್ ಹೋಟೆಲ್‌ನಲ್ಲಿ ಏಕೆ ದುಬಾರಿ ಬೆಲೆಗೆ ಮಾರಬೇಕು, ಅಲ್ಲಿಯೂ ಐದು ರುಪಾಯಿಗೆ ಮಾರಾಟ ಮಾಡಲಿ, ಫೈವ್ ಸ್ಟಾರ್ ಹೋಟೆಲ್‌ನಲ್ಲಿಯೂ ಬಡವರಿಗೆ ಎಟುಕುವ ದರದಲ್ಲಿ ಇಡ್ಲಿ ಸಿಗಬೇಕೆಂದು ಸರ್ಕಾರ ಏಕೆ ಪ್ರಯತ್ನ ಮಾಡುತ್ತಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ಪ್ರಶ್ನೆ ಮಾಡಿದ್ದಾರೆ.

    English summary
    Ram Gopal Varma asked 10 questions to Andhra Pradesh government regarding movie theater ticket price issue.
    Wednesday, January 5, 2022, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X