'ಕಾಂತಾರ'-1 ನೋಡಿ ನಿರ್ದೇಶಕ ಆರ್‌ಜಿವಿ ಏನಂದ್ರು? ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ ಅದ್ಭುತಗಳನ್ನು ಸೃಷ್ಟಿಸುತ್ತಿದೆ. ಮೊದಲ ದಿನವೇ 89 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಸಿನಿಮಾ 2ನೇ ದಿನವೂ ಭರ್ಜರಿ ಗಳಿಕೆ ಕಾಣುವ ಸುಳಿವು ಸಿಗುತ್ತಿದೆ. ಪರಭಾಷಿಕರು ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ಪ್ರಭಾಸ್, ಯಶ್ ಸೇರಿದಂತೆ ಸ್ಟಾರ್ ನಟ, ನಟಿಯರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ 'ಕಾಂತಾರ- 1' ಮೋಡಿಗೆ ಮರುಳಾಗಿದ್ದಾರೆ. ತಮ್ಮ ವಿಭಿನ್ನ ಅಭಿಪ್ರಾಯ, ವಿಭಿನ್ನ ರೀತಿಯ ಆಲೋಚನೆ ಹಾಗೂ ವಿಭಿನ್ನ ರೀತಿಯ ಮಾತುಗಳಿಮದ ಆರ್‌ಜಿವಿ ಸುದ್ದಿ ಆಗುತ್ತಿರುತ್ತಾರೆ. ಕೆಲ ಸಿನಿಮಾಗಳ ಬಗ್ಗೆ ಅವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿರುವುದು ಇದೆ. ಸದ್ಯ ರಿಷಬ್ ಶೆಟ್ಟಿ ಸಿನಿಮಾ ನೋಡಿ ಫಿದಾ ಆಗಿ ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.

"ಕಾಂತಾರ ಒಂದು ಅದ್ಭುತ .. ಭಾರತದ ಎಲ್ಲಾ ಫಿಲ್ಮ್ ಮೇಕರ್ಸ್ ಈ ಅಮೋಘ ಪ್ರಯತ್ನವನ್ನು ನೋಡಿ ನಾಚಿಕೆಪಡಬೇಕು. ರಿಷಬ್ ಶೆಟ್ಟಿ ಮತ್ತು ಅವರ ತಂಡವು ಬಿಜಿಎಂ, ಧ್ವನಿ ವಿನ್ಯಾಸ, ಸಿನಿಮಾಟೋಗ್ರಫಿ, ನಿರ್ಮಾಣ ವಿನ್ಯಾಸ ಮತ್ತು VFX ಎಲ್ಲವೂ ಸೂಪರ್.. ಕಂಟೆಂಟ್ ಬೋನಸ್, ಅವರ ಎಫರ್ಟ್ ಸಿನಿಮಾ ಬ್ಲಾಕ್‌ಬಸ್ಟರ್ ಆಗಲು ಅರ್ಹವಾಗುವಂತೆ ಮಾಡಿದೆ. ಸೃಜನಶೀಲ ತಂಡವನ್ನು ರಾಜಿಯಾಗದಂತೆ ಬೆಂಬಲಿಸಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಹ್ಯಾಟ್ಸಾಫ್. ರಿಷಬ್ ಶೆಟ್ಟಿ ನೀವು ಶ್ರೇಷ್ಠ ನಿರ್ದೇಶಕರೋ ಅಥವಾ ಶ್ರೇಷ್ಠ ನಟರೋ ಎಂದು ನನ್ನಿಂದ ನಿರ್ಧರಿಸಲು ಸಾಧ್ಯವಿಲ್ಲ" ಎಂದು ಆರ್‌ಜಿವಿ ಬರೆದುಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ಟ್ಟೀಟ್‌ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. "ನಾನು ಸಿನಿಮಾ ಪ್ರೇಮಿ ಸರ್. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದ" ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ನಟ ಪ್ರಭಾಸ್ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಜ್ಯೂ. ಎನ್‌ಟಿಆರ್ ಮೊದಲಿನಿಂದಲೂ 'ಕಾಂತಾರ' ತಂಡದ ಬೆಂಬಲಕ್ಕೆ ನಿಂತಿದ್ದಾರೆ.
ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಕೂಡ 'ಕಾಂತಾರ- 1' ಚಿತ್ರಕ್ಕೆ ಶುಭ ಕೋರಿದ್ದಾರೆ. ಧನಂಜಯ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿ ಹಲವರು ಸಿನಿಮಾ ವೀಕ್ಷಿಸಿದ್ದಾರೆ. ಶೀಘ್ರದಲ್ಲೇ ಕನ್ನಡ ಸಿನಿಮಾ ತಾರೆಯರಿಗೆ ಸ್ಪೆಷಲ್ ಶೋ ಆಯೋಜನೆ ಮಾಡುವ ಸಾಧ್ಯತೆಯಿದೆ. ಇನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಟಿ ರಾಧಿಕಾ ಪಂಡಿತ್, ನಟಿ ಅಮೂಲ್ಯ, ನಟಿ ಅಮೃತಾ ಅಯ್ಯಂಗಾರ್, ನಿರ್ದೇಶಕ ಎ.ಪಿ ಅರ್ಜುನ್ ಸೇರಿ ಹಲವರು 'ಕಾಂತಾರ- 1' ಸಿನಿಮಾ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ತೆಲುಗು ನಟಿ ಮಂಚು ಲಕ್ಷ್ಮಿ, ಮಲಯಾಳಂ ನಟ ನಿವಿನ್ ಪೌಲಿ ಹೀಗೆ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಉತ್ತರ ಭಾರತದಲ್ಲಿ ನಿಧಾನವಾಗಿ 'ಕಾಂತಾರ- 1' ಕ್ರೇಜ್ ಹೆಚ್ಚುತ್ತಿದೆ. ಶೋಗಳು ಹೌಸ್‌ಫುಲ್ ಆಗಲು ಆರಂಭಿಸಿದೆ. ವೀಕೆಂಡ್‌ನಲ್ಲಿ ಸಿನಿಮಾ ಇನ್ನು ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಗುತ್ತಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ಬಾಕ್ಸಾಫೀಸ್ ಗಳಿಕೆ ಕಾಣುತ್ತದೆ. ಈಗಾಗಲೇ ಭರ್ಜರಿ ಬೆಲೆಗೆ ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಸೇಲ್ ಆಗಿದೆ. ಇನ್ನು ಯಾವೆಲ್ಲಾ ದಾಖಲೆ ಸಿನಿಮಾ ಬರೆಯುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











