RGV on KGF 2: 'ಕೆಜಿಎಫ್ 2' ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್‌ಗಳ ಓದಲೇ ಬೇಕು
ಸಾಮಾಜಿಕ ಜಾಲತಾಣ ತೆರೆದರೆ ಬರೀ 'ಕೆಜಿಎಫ್ 2' ಸಿನಿಮಾ ಬಗ್ಗೆಯೇ ಚರ್ಚೆ. ಸಿನಿಮಾದ ತಾಂತ್ರಿಕ ಅಂಶಗಳಿಂದ ಹಿಡಿದು, ಪಾತ್ರವರ್ಗ, ನಟನೆ, ಕತೆ, ಉಪಕತೆ ಎಲ್ಲ ವಿಷಯಗಳ ಬಗ್ಗೆಯೂ ಅಭಿಮಾನಿಗಳು ತಮ್ಮ-ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Recommended Video

'ಕೆಜಿಎಫ್ 2' ಸಿನಿಮಾ ಕೇವಲ ಅಭಿಮಾನಿಗಳನ್ನಷ್ಟೆ ರಂಜಿಸಿಲ್ಲ, ಸಿನಿಮಾ ಪ್ರೇಮಿಗಳನ್ನು, ಸಿನಿಮಾ ವಿದ್ಯಾರ್ಥಿಗಳನ್ನು, ಗಂಭೀರ ಸಿನಿಮಾ ವೀಕ್ಷಕರನ್ನು ಇವರೆಲ್ಲರನ್ನೂ ಮಾತ್ರವಲ್ಲದೆ ಸ್ವತಃ ಸಿನಿಮಾ ಕರ್ಮಿಗಳನ್ನೂ ಮೆಚ್ಚಿಸಿದೆ.
ಇತರೆ ಚಿತ್ರರಂಗದ ದಿಗ್ಗಜರು ಸಹ 'ಕೆಜಿಎಫ್ 2' ಸಿನಿಮಾಕ್ಕೆ ಮಾರು ಹೋಗಿದ್ದಾರೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗಕ್ಕೆ ಹೊಸ ಅಲೆ ತಂದಿದ್ದ ರಾಮ್ ಗೋಪಾಲ್ ವರ್ಮಾ 'ಕೆಜಿಎಫ್ 2' ಅನ್ನು ಮೆಚ್ಚಿಕೊಂಡು ಸರಣಿ ಟ್ವೀಟ್ ಮಾಡಿದ್ದಾರೆ. ಸಿನಿಮಾ ಹೇಗಿದೆ ಎಂಬುದನ್ನು ಮಾತ್ರವೇ ಬರೆಯದೆ, ಸಿನಿಮಾ ತಂದ ಬದಲಾವಣೆಗಳ ಬಗ್ಗೆಯೂ ಟ್ವೀಟ್‌ಗಳ ಮೂಲಕ ಬೆಳಕು ಚೆಲ್ಲಿದ್ದಾರೆ.

ಹಣವನ್ನು ಸಿನಿಮಾದ ಗುಣಮಟ್ಟಕ್ಕೆ ಖರ್ಚು ಮಾಡಿ: ವರ್ಮಾ
''ದೊಡ್ಡ ಮೊತ್ತದ ಹಣವನ್ನು ಸಿನಿಮಾದ ನಾಯಕ ನಟರಿಗೆ ಸಂಭಾವನೆ ನೀಡುವ ಬದಲು ಅದೇ ಹಣವನ್ನು 'ಮೇಕಿಂಗ್'ಗೆ ಖರ್ಚು ಮಾಡಿದರೆ ಒಳ್ಳೆಯ ಗುಣಮಟ್ಟದ ಸೂಪರ್ ಹಿಟ್ ಸಿನಿಮಾಗಳು ಬರುತ್ತವೆ ಎಂಬುದಕ್ಕೆ 'ಕೆಜಿಎಫ್ 2' ಸಿನಿಮಾ ಸಾಕ್ಷಿ'' ಎಂದು ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ.

''ಯಾರೂ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ''
''ಹಿಂದಿ ಚಿತ್ರರಂಗವನ್ನು ಬಿಡಿ, ತೆಲುಗು, ತಮಿಳು ಚಿತ್ರರಂಗ ಸಹ 'ಕೆಜಿಎಫ್' ಸಿನಿಮಾ ಬರುವವರೆಗೆ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಸ್ಥಾನ ತಂದುಕೊಟ್ಟಿದ್ದಾರೆ'' ಎಂದಿದ್ದಾರೆ ವರ್ಮಾ.

''ಹಿಂದಿ ಸ್ಟಾರ್‌ಗಳನ್ನು ಹೊಡೆದಿರುಳಿಸಿದ್ದಾನೆ ರಾಕಿಭಾಯ್''
''ರಾಕಿಭಾಯ್ ಮುಂಬೈಗೆ ಬಂದು ಮಷಿನ್ ಗನ್‌ನಿಂದ ವಿಲನ್‌ಗಳನ್ನು ಹೊಡೆದು ಹಾಕಿದ್ದು ನನಗೆ ಇಷ್ಟವಾಯಿತು. ಅದೇ ರೀತಿ ನಟ ಯಶ್, ಮುಂಬೈನ ಸ್ಟಾರ್ ನಟರನ್ನು ಸಹ ಹೊಡೆದು ಹಾಕುತ್ತಿದ್ದಾರೆ. ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡುವ ಮೂಲಕ ಅವರು ಬಾಲಿವುಡ್‌ನ ಸ್ಟಾರ್ ನಟರನ್ನು ಉಡೀಸ್ ಮಾಡಿದ್ದಾರೆ'' ಎಂದಿದ್ದಾರೆ ವರ್ಮಾ.

ಬಾಲಿವುಡ್ಡಿಗರಿಗೆ ಇದು ಹಾರರ್ ಸಿನಿಮಾ
''ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಕೇವಲ ಗ್ಯಾಂಗ್‌ಸ್ಟರ್ ಒಬ್ಬನ ಆಕ್ಷನ್ ಸಿನಿಮಾ ಅಲ್ಲ. ಅದು ಬಾಲಿವುಡ್ ಪಾಲಿಗೆ 'ಹಾರರ್' ಸಿನಿಮಾ. ಬಾಲಿವುಡ್‌ನ ಜನ 'ಕೆಜಿಎಫ್ 2' ಸಿನಿಮಾದ ಯಶಸ್ಸು, ಕಲೆಕ್ಷನ್ ಕಂಡು ವರ್ಷಗಳ ವರೆಗೆ ನಿದ್ರೆಯಲ್ಲೂ ಕೆಟ್ಟ ಕನಸು ಬಿದ್ದಂತೆ ಗಾಬರಿಗೊಳ್ಳಲಿದ್ದಾರೆ'' ಎಂದು ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ.


Click it and Unblock the Notifications











