ರಾಮ್ ಪೋತಿನೇನಿ ಕೈ ಹಿಡಿದ ಹಿಟ್ ನಿರ್ದೇಶಕ, ಗೆಲುವು ಸಾಧ್ಯವಾ?
'ಅಖಂಡ' ಮೂಲಕ ಭರ್ಜರಿ ಮಾಸ್ ಸಿನಿಮಾ ನೀಡಿದ್ದ ನಿರ್ದೇಶಕ ಬೋಯಪಾಟಿ ಶ್ರೀನು ಮುಂದಿನ ಸಿನಿಮಾವನ್ನು ಮಾಸ್ ಹೀರೋ ಜೊತೆಗೆ ಮಾಡುತ್ತಾರೆ ಎಂದು ಎಣಿಸಲಾಗಿತ್ತು. ಆದರೆ ಬೋಯಪಾಟಿ ಕೈಹಿಡಿದಿರುವುದು ಲವ್ವರ್ ಬಾಯ್ ರಾಮ್ ಪೋತಿನೇನಿಯನ್ನು.
ನಿರ್ದೇಶಕ ಬೋಯಪಾಟಿ ಶ್ರೀನು ಮತ್ತು ನಟ ರಾಮ್ ಪೋತಿನೇನಿ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರದ ಮುಹೂರ್ತ ಮೇ 01ರಂದು ಹೈದ್ರಾಬಾದ್ ನಲ್ಲಿ ನೆರವೇರಿದೆ.
'ಭದ್ರ', 'ತುಳಸಿ', 'ಸಿಂಹ', 'ಲೆಜೆಂಡ್', 'ಸರೈನೋಡು', 'ಜಯಜಾನಕಿ ನಾಯಕ' ಮತ್ತು ಇತ್ತೀಚೆಗಷ್ಟೇ ತೆರೆ ಕಂಡು ಬ್ಲಾಕ್ ಬಸ್ಟರ್ ಹಿಟ್ ಆದ ʻಅಖಂಡʼ ಚಿತ್ರಗಳನ್ನು ನಿರ್ದೇಶಿಸಿದ ಬೋಯಪಾಟಿ ಶ್ರೀನು ಈಗ ರಾಮ್ ಪೋತಿನೇನಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿರುವುದು ವಿಶೇಷ.

ಮೊದಲ ಪ್ಯಾನ್ ಇಂಡಿಯಾ ಸಿನಿಮಾ
ರಾಮ್ ಪೋತಿನೇನಿ ಅವರೊಟ್ಟಿಗಿನ ಈ ಚಿತ್ರ ಬೋಯಪಾಟಿ ಶ್ರೀನು ಅವರಿಗೆ 10 ನೇ ಚಿತ್ರ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಶ್ರೀನಿವಾಸ ಚಿತ್ತೂರಿ ಅವರ ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಿನಿಮಾಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಈ ಸಿನಿಮಾ ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್ ನ 9 ನೇ ಸಿನಿಮಾ ಆಗಿದೆ. ರಾಮ್ ಪೋತಿನೇನಿ ಅವರ ಕೆಲವು ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿ ಯೂಟ್ಯೂಬ್‌ನಲ್ಲಿ ಭಾರಿ ಜನಪ್ರಿಯತೆಗಳಿಸಿವೆ. ಆದರೆ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಮ್ ಪೋತಿನೇನಿ ನಟಿಸುತ್ತಿದ್ದಾರೆ.

ರಾಮ್ ಪೋತಿನೇನಿಯ 20ನೇ ಸಿನಿಮಾ
ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ ಆರಂಭವಾಗಿರುವ ಈ ಚಿತ್ರ ರಾಮ್ ಪೋತಿನೇನಿ ಅವರ 20 ನೇ ಚಿತ್ರ. ರಾಮ್ ಇತ್ತೀಚೆಗಷ್ಟೇ ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್ ಬ್ಯಾನರ್‌ನಡಿ ತಯಾರಾದ 'ದಿ ವಾರಿಯರ್' ಚಿತ್ರೀಕರಣವನ್ನು ಮುಗಿಸಿದ್ದಾರೆ. ಆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಮತ್ತೆ ಇದೇ ಬ್ಯಾನರ್ ಜೊತೆ ಸಿನಿಮಾಕ್ಕೆ ರೆಡಿಯಾಗಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ರಾಮ್, ಬೋಯಪಾಟಿ ಮತ್ತು ಶ್ರೀನಿವಾಸ ಚಿತ್ತೂರಿ ಒಂದಾಗಿದ್ದು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಜೂನ್ 1ರ ಬುಧವಾರ ಹೈದರಾಬಾದ್ ನಲ್ಲಿ ನೆರವೇರಿತು.

ಕನ್ನಡದಲ್ಲೂ ಬಿಡುಗಡೆ ಆಗಲಿದೆ
ಈ ಕ್ರೇಜಿ ಕಾಂಬಿನೇಶನ್ ಬಗ್ಗೆ ಮಾತನಾಡಿದ ನಿರ್ಮಾಪಕ ಶ್ರೀನಿವಾಸ ಚಿತ್ತೂರಿ, ''ಬೋಯಪಾಟಿ ಶ್ರೀನು ನಿರ್ದೇಶನದ ಚಿತ್ರ ನಿರ್ಮಾಣ ಮಾಡಲು ನಾವು ಸಂತೋಷಪಡುತ್ತೇವೆ. 'ದಿ ವಾರಿಯರ್' ಚಿತ್ರದ ಶೂಟಿಂಗ್ ಮುಗಿಯುತ್ತಿದ್ದಂತೆ ನಮ್ಮ ನಾಯಕ ರಾಮ್ ಪೋತಿನೇನಿ ಜೊತೆ ಮತ್ತೊಂದು ಸಿನಿಮಾ ಶುರುವಾಗಿರುವುದು ಸಂತೋಷದ ವಿಚಾರ. ಇದು ನಮ್ಮ ಬ್ಯಾನರ್‌ನ ಪ್ರತಿಷ್ಠಿತ ಚಿತ್ರವಾಗಿದ್ದು, ಉನ್ನತ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗುವುದು. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ'' ಎಂದು ತಿಳಿಸಿದ್ದಾರೆ.

ಚಿತ್ರದ ನಾಯಕಿ ಯಾರಾಗಲಿದ್ದಾರೆ?
ನಿರ್ದೇಶಕ ಬೋಯಪಾಟಿ ಶ್ರೀನು ಬರೆದಿರುವ ಮಾಸ್ ಅಂಶಗಳಿಂದ ಕೂಡಿರುವ ಅದ್ಭುತ ಕತೆ ಕೇಳಿರುವ ನಿರ್ಮಾಪಕ ಮತ್ತು ನಟ ಇಬ್ಬರೂ ಥ್ರಿಲ್ ಆಗಿದ್ದಾರೆ. ಚಿತ್ರದ ನಾಯಕಿ ಮತ್ತು ಉಳಿದ ತಾರಾಗಣದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳನ್ನು ನೀಡುವುದಾಗಿ ಚಿತ್ರತಂಡ ತಿಳಿಸಿದೆ.


Click it and Unblock the Notifications











