ಬಿಡುಗಡೆ ಬೆನ್ನಲ್ಲೇ 'ಗೇಮ್ ಚೇಂಜರ್' ಸಿನಿಮಾ ಲೀಕ್; ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ!
ಪೈರಸಿ ಚಿತ್ರರಂಗಕ್ಕೆ ಶಾಪವಾಗಿ ಪರಿಣಮಿಸಿದೆ. ಅದನ್ನು ಮಟ್ಟ ಹಾಕಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ವಿಶ್ವದಾದ್ಯಂತ ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಬಿಡುಗಡೆ ಆಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅದರ ನಡುವೆ ಚಿತ್ರದ HD ಪ್ರಿಂಟ್ ಲೀಕ್ ಆಗಿ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.
ದೊಡ್ಡ ಸಿನಿಮಾಗಳನ್ನು ಪೈರಸಿ ಮಾಡುವ ಕಿಡಿಗೇಡು ಇದ್ದಾರೆ. ಸಿನಿಮಾ ಬಿಡುಗಡೆ ಬೆನ್ನಲ್ಲೇ ಚಿತ್ರಮಂದಿರದಲ್ಲಿ ಚಿತ್ರೀಕರಿಸಿ ಆಲ್‌ಲೈನ್‌ನಲ್ಲಿ ಲೀಕ್ ಮಾಡಿಬಿಡುತ್ತಾರೆ. ಇನ್ನು ಬಿಡುಗಡೇ ಆಗದೇ ಇರುವ ಸಿನಿಮಾಗಳು ಪೈರಸಿ ಆಗಿರುವ ಉದಾಹರಣೆಗಳಿವೆ. ಇದು ಸಹಜವಾಗಿಯೇ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆ. ತೆರೆಕಂಡ ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರುತ್ತದೆ. ಅದಕ್ಕೂ ಮುನ್ನ HD ಪ್ರಿಂಟ್ ಸೋರಿಕೆ ಆಗಿರುವ ಉದಾಹರಣೆಗಳಿವೆ.

ಶಂಕರ್ ನಿರ್ದೇಶನದಲ್ಲಿ ರಾಮ್ ಚರಣ್ ನಟನೆಯ 'ಗೇಮ್ ಚೇಂಜರ್' ಚಿತ್ರವನ್ನು ದಿಲ್ ರಾಜು ನಿರ್ಮಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಆದರೆ ರೊಟೀನ್ ಸ್ಟೋರಿ, ಆವರೇಜ್ ಸಿನಿಮಾ ಎನ್ನುವ ಟಾಕ್ ಬಂದಿದೆ. ಇದರ ಬೆನ್ನಲ್ಲೇ ಸಿನಿಮಾ ಲೀಕ್ ಆಗಿರುವುದು ಬೇಸರದ ಸಂಗತಿ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡುವ ನಿರೀಕ್ಷೆ ಇತ್ತು. ಆದರೆ ಪೈರಸಿ ಅದಕ್ಕೂ ಹೊಡೆತ ಕೊಡುವಂತಿದೆ.
'ಇಂಡಿಯನ್- 2' ಸೋಲಿನ ಬಳಿಕ ಶಂಕರ್ ನಿರ್ದೇಶಿಸಿರುವ ಸಿನಿಮಾ ಇದು. ಇನ್ನು 'ಆಚಾರ್ಯ' ಸೋಲಿನ ಬಳಿಕ ರಾಮ್‌ಚರಣ್ ನಟಿಸಿರುವ ಸಿನಿಮಾ ಕೂಡ. ಆದರೂ ಇಬ್ಬರ ಕಾಂಬಿನೇಷನ್ ಕುತೂಹಲ ಮೂಡಿಸಿತ್ತು. ನಿರ್ದೇಶಕ ಶಂಕರ್ ಮೇಲೆ ಸಾಕಷ್ಟು ಜನರಿಗೆ ನಂಬಿಕೆ ಇತ್ತು. ತಕ್ಕಮಟ್ಟಿಗೆ ಅದರಲ್ಲಿ ಯಶ ಕಂಡಿದ್ದರು.
ತಂದೆ ಮಗನಾಗಿ ದ್ವಿಪಾತ್ರದಲ್ಲಿ ರಾಮ್‌ಚರಣ್ ನಟಿಸಿದ್ದಾರೆ. ಕಿಯಾರಾ ಅಡ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಅಂಜಲಿ, ಎಸ್. ಜೆ ಸೂರ್ಯ ಸೇರಿದಂತೆ ದೊಡ್ಡ ತಾರಾಗಣ 'ಗೇಮ್ ಚೇಂಜರ್'ಚಿತ್ರದಲ್ಲಿದೆ. ಹಣವನ್ನು ನೀರಿನಂತೆ ಚೆಲ್ಲಿ ಸಿನಿಮಾ ನಿರ್ಮಿಸಲಾಗಿದೆ. ಆದರೆ ಕೋಟಿ ಕೋಟಿ ಖರ್ಚು ಸುರಿದು ಸೆರೆ ಹಿಡಿದಿದ್ದ ಹಾಡೊಂದನ್ನು ಚಿತ್ರತಂಡ ಸಿನಿಮಾದಿಂದ ಕೈಬಿಟ್ಟಿದೆ. ಇನ್ನು ಸಿನಿಮಾ ಪೈರಸಿ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿಲ್ಲ.

ಸಾಮಾನ್ಯವಾಗಿ ದೊಡ್ಡ ಸಿನಿಮಾಗಳು ಬಿಡುಗಡೆ ಸಮಯದಲ್ಲಿ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡುವ ಪ್ರಯತ್ನ ನಡೆಯುತ್ತದೆ. ಅದಕ್ಕಾಗಿ ನಿರ್ಮಾಪಕರು ಹಣ ವ್ಯಯಿಸಿ ಒಂದು ತಂಡ ನೇಮಿಸುತ್ತಾರೆ. 'ಗೇಮ್ ಚೇಂಜರ್' ಚಿತ್ರದ ವಿಚಾರದಲ್ಲಿ ಕೂಡ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡುವ ಪ್ರಯತ್ನಗಳು ನಡೀತಿದೆ. ಇದೆಲ್ಲದರ ನಡುವೆ ಇಂತಹ ಲಿಂಕ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರವಾಗಿರುವುದು ಅನಿವಾರ್ಯ.
ಇತ್ತೀಚೆಗೆ ಆನ್‌ಲೈನ್ ವಂಚನೆ, ಸೈಬರ್ ವಂಚನೆ ಕೇಸ್‌ಗಳು ಹೆಚ್ಚಾಗಿದೆ. ಯಾಮಾರಿಸಿ ಹಣ ದೋಚುವ, ನಿಮ್ಮ ಖಾತೆಗಳಿಗೆ ಕನ್ನ ಹಾಕುವ ಹ್ಯಾಕರ್‌ಗಳು ಇದ್ದಾರೆ. ಕೆಲ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚುತ್ತಿದೆ. ಅದೇ ರೀತಿ ಸಿನಿಮಾ ಲಿಂಕ್‌ಗಳ ರೀತಿಯಲ್ಲಿ ಕೂಡ ನಕಲಿ ಲಿಂಕ್‌ಗಳು ಹರಿದಾಡುತ್ತಿರುತ್ತದೆ.
'ಗೇಮ್ ಚೇಂಜರ್' ಸಿನಿಮಾ ಪೈರಸಿ ಆಗಿದೆ. ಲಿಂಕ್ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿ ಸಿನಿಮಾ ನೋಡೋಣ ಎಂದು ಪ್ರಯತ್ನಿಸುವವರು ಇಂತಹ ಲಿಂಕ್‌ಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಇನ್ನು ಪೈರಸಿಯಿಂದ ಸಹಜವಾಗಿಯೇ ಚಿತ್ರಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ದುಬಾರಿ ಸಿನಿಮಾಗಳನ್ನು ನಿರ್ಮಿಸುವವರಿಗೆ ಇದು ಭಾರೀ ನಷ್ಟ ತಂದೊಡ್ಡುತ್ತಿದೆ. ಪೈರಸಿ ತಡೆಯಲು ಹಿಂದೆ ಸಾಕಷ್ಟು ಪ್ರಯತ್ನ ನಡೆಸಲಾಯಿತು. ಆದರೆ ಯಾವುದು ಕೂಡ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲಿಲ್ಲ.


Click it and Unblock the Notifications











