ಮಗನಿಗಾಗಿ ಹಿಂದೆ ಸರಿದ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ!
ತೆಲುಗು ಚಿತ್ರರಂಗದಲ್ಲಿ ಮೆಗಾ ಫ್ಯಾಮಿಲಿಯಿಂದ ಹಲವರು ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಅದರಲ್ಲಿ ಚಿರು ಬಳಿಕ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಹಾಗೂ ರಾಮ್‌ಚರಣ್ ಮಾತ್ರ ಭರ್ಜರಿ ಸಕ್ಸಸ್ ಕಂಡಿದ್ದಾರೆ. 'RRR' ನಂತರ ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ.
ಚಿರಂಜೀವಿ ಪ್ರಭಾವಳಿ ನಡುವೆಯೂ ಪವನ್, ಬನ್ನಿ ಹಾಗೂ ಚರಣ್ ತಮ್ಮದೇ ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಗೆದ್ದಿದ್ದಾರೆ. ಈಗ ಮೆಗಾಸ್ಟಾರ್ ಹಂಗಿಲ್ಲದೇ ಸಿನಿಮಾಗಳನ್ನು ಮಾಡಿ ಗೆಲ್ಲುವ ತಾಖತ್ತು ಸಂಪಾದಿಸಿದ್ದಾರೆ. ಇನ್ನು ವಯಸ್ಸು 60 ದಾಟಿದರೂ ಹೊಸ ಹೀರೊಗಳಿಗೆ ಚಿರು ಸವಾಲ್ ಹಾಕುವಂತೆ ತೆರೆಮೇಲೆ ರಾರಾಜಿಸುತ್ತಿದ್ದಾರೆ. ಮಗನಿಗೂ ಪೈಪೋಟಿ ಕೊಡುತ್ತಿದ್ದಾರೆ.

ಸದ್ಯ ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ತಮಿಳು ನಿರ್ದೇಶಕ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಶಂಕರ್ ಶತಾಯಗತಾಯ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ 'ಗೇಮ್ ಚೇಂಜರ್' ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಎಂದಿನಂತೆ ಒಂದು ಮೆಸೇಜ್ ಜೊತೆಗೆ ಕಮರ್ಷಿಯಲ್ ಚಿತ್ರವನ್ನು ಶಂಕರ್ ಕಟ್ಟಿಕೊಡುತ್ತಿದ್ದಾರೆ.
ಕಾರಣಾಂತರಗಳಿಂದ 'ಗೇಮ್ ಚೇಂಜರ್' ಸಿನಿಮಾ ರಿಲೀಸ್ ಡೇಟ್ ತಡವಾಗುತ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಇದೀಗ ಚಿತ್ರತಂಡ ಘೋಷಿಸಿದೆ. ದಿಲ್ ರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದು ಕೈರಾ ಅದ್ವಾನಿ ನಾಯಕಿಯಾಗಿ ನಟಿಸಿದ್ದಾರೆ. ಪಕ್ಕಾ ಕಮರ್ಷಿಯಲ್ ಸಬ್ಜೆಕ್ಟ್ ಚಿತ್ರದಲ್ಲಿ ಇರಲಿದೆ.

ಶಂಕರ್ ನಿರ್ದೇಶನದ 'ಇಂಡಿಯನ್-2' ಸಿನಿಮಾ ಹೀನಾಯವಾಗಿ ಸೋತಿದೆ. 'RRR' ಬಳಿಕ ಚರಣ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ರಾಜಮೌಳಿ ಜೊತೆ ಸಿನಿಮಾ ಮಾಡಿದ ಬಳಿಕ ನಾಯಕ ನಟನ ಮುಂದಿನ ಸಿನಿಮಾ ಸೋಲುತ್ತದೆ ಎನ್ನುವ ವಿಚಿತ್ರ ನಂಬಿಕೆ ಕೂಡ ಚಿತ್ರರಂಗದಲ್ಲಿದೆ. 'ದೇವರ' ಸಿನಿಮಾ ಈ ಮಾತನ್ನು ಸುಳ್ಳಾಗಿಸಿತ್ತು. 'ಗೇಮ್ ಚೇಂಜರ್' ತಂಡಕ್ಕೂ ಇದು ಸಂತಸ ತಂದಿದೆ.
ಸಂಕ್ರಾಂತಿ ಸಂಭ್ರಮದಲ್ಲೇ ಚಿರಂಜೀವಿ ನಟನೆಯ 'ವಿಶ್ವಂಭರ' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿತ್ತು. ಇದೀಗ ಮಗನ 'ಗೇಮ್ ಚೇಂಜರ್' ಚಿತ್ರಕ್ಕಾಗಿ ಚಿರು ಸಿನಿಮಾ ಹಿಂದಕ್ಕೆ ಸರಿದಿದೆ. ಸುಗ್ಗಿ ಸಂಭ್ರಮದಲ್ಲಿ ಚರಣ್ 'ಗೇಮ್ ಚೇಂಜರ್' ಆಗಲು ಹೊರಟ್ಟಿದ್ದಾರೆ. ವಸಿಷ್ಟ ನಿರ್ದೇಶನದ ಫ್ಯಾಂಟಸಿ ಥ್ರಿಲ್ಲರ್ 'ವಿಶ್ವಂಭರ' ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ವಿಜಯ ದಶಮಿ ಸಂಭ್ರಮದಲ್ಲೇ ಸಣ್ಣ ಝಲಕ್ ಬಂದಿದೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಚಿರಂಜೀವಿ ಕಳೆದ ವರ್ಷ ಸಂಕ್ರಾಂತಿಗೆ 'ವಾಲ್ತೇರು ವೀರಯ್ಯ' ಸಿನಿಮಾ ಮಾಡಿ ಗೆದ್ದಿದ್ದರು. ಬಳಿಕ ಬಂದ 'ಭೋಳಾ ಶಂಕರ್' ಸಿನಿಮಾ ಸೋತಿತ್ತು. ಇದೀಗ 'ವಿಶ್ವಂಭರ' ಆಗಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಚಿತ್ರದ ಟೀಸರ್ ನೋಡುಗರಿಗೆ ನಿರಾಸೆ ಮೂಡಿಸಿದೆ. ತ್ರಿಶಾ, ಆಶಿಕಾ ರಂಗನಾಥ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
'ಗೇಮ್ ಚೇಂಜರ್' ಚಿತ್ರವನ್ನು ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆ ಮಾಡಲು ಮನಸ್ಸು ಮಾಡಿದ್ದೆವು. ಆದರೆ ವಿತರಕರು ಸಂಕ್ರಾಂತಿ ರಿಲೀಸ್ ಬೆಸ್ಟ್ ಎಂದರು. 'ವಿಶ್ವಂಭರ' ಚಿತ್ರತಂಡ ಕೂಡ ಸುಗ್ಗಿ ಸಂಭ್ರಮದಲ್ಲೇ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದರು. ಅವರೊಟ್ಟಿಗೆ ಚರ್ಚಿಸಿ ಸಂಕ್ರಾತಿ ಡೇಟ್ ಪಡೆದುಕೊಂಡಿದ್ದಾಗಿ 'ಗೇಮ್ ಚೇಂಜರ್' ಚಿತ್ರದ ನಿರ್ಮಾಪಕ ದಿಲ್ ರಾಜು ಹೇಳಿದ್ದಾರೆ.


Click it and Unblock the Notifications











