ಹೊಸ ದೃಶ್ಯಗಳ ಸೇರ್ಪಡೆ; ಇನ್ಮುಂದೆ ಚಿತ್ರಮಂದಿರಗಳಲ್ಲಿ 'ಪೆದ್ದಿ' ನೋಡುವವರಿಗೆ ಗುಡ್ ನ್ಯೂಸ್
ರಾಮ್‌ಚರಣ್ ಅಭಿಮಾನಿಗಳಿಗೆ 'ಪೆದ್ದಿ' ಚಿತ್ರತಂಡ ಸರ್‌ಪ್ರೈಸ್ ನೀಡಿದೆ. ಈಗಾಗಲೇ ಸಿನಿಮಾ 400 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಒಂದಷ್ಟು ಟೀಕೆಗಳ ನಡುವೆಯೂ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ. ಈ ವರ್ಷ 'ಧುರಂಧರ್- 2' ಬಿಟ್ಟು ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ಕರ್ನಾಟಕದಲ್ಲಿ ಕೂಡ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.
'ಪೆದ್ದಿ' ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರದ ಚಿತ್ರಣದ ಬಗ್ಗೆ ಭಾರೀ ಅಸಮಾಧಾನ ವ್ಯಕ್ತವಾಗಿತ್ತು. ಬಳಿಕ ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿ ನಿರ್ದೇಶಕ ಬುಚ್ಚಿಬಾಬು ಕ್ಷಮೆ ಕೇಳಿದ್ದರು. ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿದ್ದರು. ಜೊತೆಗೆ ಒಂದಷ್ಟು ಹೊಸ ದೃಶ್ಯಗಳನ್ನು ಸೇರಿಸುವುದಾಗಿ ಚಿತ್ರತಂಡ ಹೇಳಿತ್ತು. ಸದ್ಯ ಆ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ಸಿನಿಮಾ ನೋಡುವವರು ಈ ಬದಲಾವಣೆಯನ್ನು ಗಮನಿಸಬಹುದು.

ಯಾವೆಲ್ಲಾ ದೃಶ್ಯಗಳನ್ನು ಸೇರಿಸಿದ್ದಾರೆ ಎನ್ನುವ ಬಗ್ಗೆ ಕೂಡ ಮಾಹಿತಿ ಸಿಕ್ಕಿದೆ. ಮೊದಲಾರ್ಧದಲ್ಲಿ 'ಪೆದ್ದಿ' ಮದುವೆಗೆ ಹುಡುಗಿ ನೋಡಲು ಹೋಗುವ ಸನ್ನಿವೇಶ ಇದೆ. ಅದೇ ರೀತಿ ದ್ವಿತಿಯಾರ್ಧದಲ್ಲಿ ನಾಯಕಿ ಅಚ್ಚಿಯಮ್ಮ ಮನೆಗೆ ನುಗ್ಗಿ ಆಕೆಯ ಮದುವೆ ಮಾತುಕತೆಯನ್ನು ಪೆದ್ದಿ ನಿಲ್ಲಿಸುವ ಸನ್ನಿವೇಶ ಕೂಡ ಇದೆ. ರಾಮ್‌ಚರಣ್ ಕುಸ್ತಿ ಪೈಲ್ವಾನ್ ಅವತಾರದಲ್ಲಿ ಗದೆ ಹಿಡಿದು ಸೈಕಲ್ ಏರಿ ಬರುವ ಪೋಸ್ಟರ್ ಗಮನ ಸೆಳೆದಿತ್ತು. ಹಾಡಿನ ಸಣ್ಣ ಝಲಕ್‌ನಲ್ಲಿ ಕೂಡ ಅದನ್ನು ತೋರಿಸಿದ್ದರು. ಆದರೆ ಯಾಕೆ ಎನ್ನುವುದು ಈಗ ಗೊತ್ತಾಗಿದೆ.
ಉಸ್ತಾದ್ ಗೌರ್ನಾಯ್ಡು ಬಳಿ 'ಪೆದ್ದಿ' ಕುಸ್ತಿ ಕಲಿಯುವ ಸಮಯದಲ್ಲಿ ಇತ್ತ ಅಚ್ಚಿಯಮ್ಮ ಮದುವೆಗೆ ಪೋಷಕರು ಸಿದ್ಧತೆ ನಡೆಸುತ್ತಾರೆ. ಹುಡುಗನ ಮನೆಯವರು ಅಚ್ಚಿಯಮ್ಮ ಮನೆಗೆ ಬಂದ ವಿಚಾರ ಗೊತ್ತಾಗಿ 'ಪೆದ್ದಿ' ಸೈಕಲ್ ಏರಿ ಏಕಾಏಕಿ ಮನೆಗೆ ನುಗ್ಗಿಬಿಡುತ್ತಾನೆ. ಅಲ್ಲಿಗೆ ಆ ಮಾತುಕತೆ ಮುರಿದು ಬೀಳುತ್ತದೆ. ಆ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಟ್ಟು 5 ನಿಮಿಷ 56 ಸೆಕೆಂಡ್ ಅಂದ್ರೆ ಹೆಚ್ಚುಕಮ್ಮಿ 6 ನಿಮಿಷದ ಹೊಸ ಸನ್ನಿವೇಶಗಳನ್ನು ಚಿತ್ರದಲ್ಲಿ ಸೇರಿಸಲಾಗಿದೆ.

ಕಾಲಾವಧಿ ಹೆಚ್ಚಾಯ್ತು ಎನ್ನುವ ಕಾರಣಕ್ಕೆ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಈ ಬಗ್ಗೆ ಅಪ್ಪಲ ಸೂರಿ ಪಾತ್ರಧಾರಿ ಜಗಪತಿ ಬಾಬು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರು. ನಾನು ನಟಿಸಿರುವ ಮತ್ತೆರಡು ದೃಶ್ಯಗಳು ಚಿತ್ರದಲ್ಲಿ ಇದ್ದಿದ್ದರೆ ಇನ್ನು ಚೆನ್ನಾಗಿ ಇರ್ತಿತ್ತು. ರನ್ ಟೈಮ್ ಹೆಚ್ಚಾಯ್ತು ಎಂದು ಕತ್ತರಿಸಿ ಹಾಕಿದ್ದಾರೆ ಎಂದಿದ್ದರು. ಇದೀಗ ಆ ದೃಶ್ಯಗಳನ್ನು ಕೂಡ ಸೇರಿಸಿ ಸಿನಿಮಾ ಪ್ರದರ್ಶನ ಮಾಡಲಾಗ್ತಿದೆ. ಇನ್ನು ಮುಂದೆ ಸಿನಿಮಾ ನೋಡುವವರಿಗೆ ಮತ್ತೊಮ್ಮೆ ನೋಡಲು ಹೋಗುವವರು ಈ ದೃಶ್ಯಗಳನ್ನು ನೋಡಿ ಎಂಜಾಯ್ ಮಾಡಬಹುದು.
14 ದಿನಕ್ಕೆ 'ಪೆದ್ದಿ' ಸಿನಿಮಾ ಬಾಕ್ಸಾಫೀಸ್ ಗಳಿಕೆ 400 ಕೋಟಿ ರೂ. ದಾಟಿದೆ. ಈ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದೆ. ಸೋಲೊ ಹೀರೊ ಆಗಿ ರಾಮ್‌ಚರಣ್ ನಟನೆಯ ಸಿನಿಮಾಗಳಲ್ಲೇ ಇದು ದಾಖಲೆಯ ಕಲೆಕ್ಷನ್ ಎನ್ನಬಹುದು. ರಾಜಮೌಳಿ ನಿರ್ದೇಶನದಲ್ಲಿ ಜ್ಯೂ. ಎನ್‌ಟಿಆರ್ ಜೊತೆ ರಾಮ್‌ಚರಣ್ ನಟಿಸಿದ್ದ 'RRR' ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು.
ನೆಟ್‌ಫ್ಲಿಕ್ಸ್ 'ಪೆದ್ದಿ' ಚಿತ್ರದ ಓಟಿಟಿ ರೈಟ್ಸ್ ಧಕ್ಕಿಸಿಕೊಂಡಿದೆ. ಜೀ ಸಂಸ್ಥೆಗೆ ಟಿವಿ ರೈಟ್ಸ್ ಮಾರಾಟವಾಗಿದೆ. ಜುಲೈ 2ನೇ ವಾರದಲ್ಲಿ 'ಪೆದ್ದಿ' ಸಿನಿಮಾ ಓಟಿಟಿಗೆ ಬರಬಹುದು ಎನ್ನಲಾಗ್ತಿದೆ. ಆ ಬಳಿಕ ಟಿವಿಯಲ್ಲಿ ಬರಲಿದೆ. 5 ಭಾಷೆಗಳಿಗೆ ಡಬ್ ಆಗಿ ಸಿನಿಮಾ ವೀಕ್ಷಣೆಗೆ ಸಿಗಲಿದೆ.


Click it and Unblock the Notifications