ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ಕಲ್ಯಾಣೋತ್ಸವದ ದಿನಾಂಕ ಫಿಕ್ಸ್
ಉದ್ಯಮಿ ಮಿಹೀಕಾ ಬಜಾಜ್ ಜತೆ ಇತ್ತೀಚೆಗಷ್ಟೇ ಉಂಗುರ ಬದಲಿಸಿಕೊಂಡಿದ್ದ ಖ್ಯಾತ ನಟ ರಾಣಾ ದಗ್ಗುಬಾಟಿ ಅವರ ಮದುವೆಯ ದಿನಾಂಕ ನಿಗದಿಯಾಗಿದೆ. ರಾಣಾ ಮತ್ತು ಮಿಹೀಕಾ ಮದುವೆ ಡಿಸೆಂಬರ್‌ನಲ್ಲಿ ನಡೆಯಬಹುದು ಎಂದು ಈ ಹಿಂದೆ ರಾಣಾ ತಂದೆ, ನಿರ್ಮಾಪಕ ಸುರೇಶ್ ಬಾಬು ಹೇಳಿದ್ದರು. ಆದರೆ ಇನ್ನು ಎರಡು ತಿಂಗಳಿನಲ್ಲಿಯೇ ಮದುವೆ ಕಾರ್ಯ ನೆರವೇರಿಸಲು ಎರಡೂ ಕುಟುಂಬಗಳು ತೀರ್ಮಾನಿಸಿವೆ.
Recommended Video
ಹೈದರಾಬಾದ್‌ನಲ್ಲಿ ಆಗಸ್ಟ್ 8ರಂದು ಮದುವೆ ಆಯೋಜಿಸಲು ನಿರ್ಧರಿಸಲಾಗಿದೆ. ರಾಣಾ ಮದುವೆಯ ದಿನಾಂಕ ನಿಗದಿಯಾಗಿರುವುದನ್ನು ಸುರೇಶ್ ಬಾಬು ಖಚಿತಪಡಿಸಿದ್ದಾರೆ. ಎರಡೂ ಕುಟುಂಬಗಳ ಆಪ್ತರು ಮಾತ್ರವೇ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರದ ಮಾರ್ಗದರ್ಶಿಯಂತೆ ಮದುವೆ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಮುಂದೆ ಓದಿ...

ನಿಶ್ಚಿತಾರ್ಥದಲ್ಲಿ ಕುಟುಂಬದವರು ಭಾಗಿ
ರಾಣಾ ಮತ್ತು ಮಿಹೀಕಾ ಅವರ ರೋಕಾ (ನಿಶ್ಚಿತಾರ್ಥ) ಸಮಾರಂಭ ಮೇ 20ರಂದು ನಡೆದಿತ್ತು. ನಟರಾದ ವೆಂಕಟೇಶ್, ನಾಗ ಚೈತನ್ಯ, ಸಮಂತಾ ಅಕ್ಕಿನೇನಿ ಸೇರಿದಂತೆ ದಗ್ಗುಬಾಟಿ ಮತ್ತು ಬಜಾಜ್ ಕುಟುಂಬದ ಅತ್ಯಾಪ್ತರು ಮಾತ್ರವೇ ಪಾಲ್ಗೊಂಡಿದ್ದರು.

ಮಾರ್ಗಸೂಚಿ ಅನುಗುಣ ಮದುವೆ
ಸುರೇಶ್ ಬಾಬು ದಗ್ಗುಬಾಟಿ ಅವರ ಹಿರಿಯ ಮಗ ರಾಣಾ ದಗ್ಗುಬಾಟಿ ಮತ್ತು ಉದ್ಯಮಿಗಳಾದ ಸುರೇಶ್ ಬಜಾಜ್- ಬಂಟಿ ಬಜಾಜ್ ದಂಪತಿಯ ಪುತ್ರಿ ಮಿಹೀಕಾ ಬಜಾಜ್ ಮದುವೆಗೆ ತೆಲುಗು, ತಮಿಳು, ಹಿಂದಿ ಚಿತ್ರರಂಗ ಸೇರಿದಂತೆ ವಿವಿಧ ಚಿತ್ರರಂಗಗಳ ಗಣ್ಯರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ ಲಾಕ್ ಡೌನ್ ನಿಯಮಗಳ ನಡುವೆ ಮದುವೆ ನಡೆಯುವುದರಿಂದ ಹೆಚ್ಚು ಜನರು ಮದುವೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ.

ನಿಯಮ ಸಡಿಲವಾದರೆ ಅದ್ಧೂರಿ ಮದುವೆ
ಒಂದು ವೇಳೆ ಸರ್ಕಾರ ಆಗಸ್ಟ್ ವೇಳೆಗೆ ಮಾರ್ಗಸೂಚಿಗಳನ್ನು ಸಡಿಲಗೊಳಿಸಿ, ಮದುವೆಯಲ್ಲಿ ಹೆಚ್ಚು ಜನರು ಭಾಗವಹಿಸಲು ಅನುಮತಿ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಭಾಗವಹಿಸಲಿದ್ದಾರೆ. ಮದುವೆ ಸಮಾರಂಭ ಅದ್ಧೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದ್ದು, ಭವ್ಯ ಮಂಟಪದಲ್ಲಿ ವಿವಾಹ ಜರುಗಲಿದೆ.

ರಾಣಾ ಸಿನಿಮಾಗಳು ಬಾಕಿ
ರಾಣಾ ದಗ್ಗುಬಾಟಿ ಪ್ರಸ್ತುತ ವೇಣು ಉಡುಗಲ ಅವರ ವಿರಾಟ ಪರ್ವ ಮತ್ತು ಗುಣ ಶೇಖರ್ ನಿರ್ದೇಶನದ ಪೌರಾಣಿಕ ಚಿತ್ರ ಹಿರಣ್ಯಕಶಿಪುದಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ 'ಅರಣ್ಯ' ಬಿಡುಗಡೆಗೆ ಸಿದ್ಧವಾಗುತ್ತಿದೆ. ಅವರ ಭಾವಿ ಪತ್ನಿ ಮಿಹೀಕಾ ಬಜಾಜ್, ಹೈದರಾಬಾದ್‌ನಲ್ಲಿ ಡ್ಯೂ ಡ್ರಾಪ್ ಡಿಸೈನ್ ಸ್ಟುಡಿಯೋ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಸ್ಥಾಪಿಸಿ ನಡೆಸುತ್ತಿದ್ದಾರೆ.


Click it and Unblock the Notifications











