ಶಿವುಡು ರಾಜನಾದ ಬಳಿಕ ಮುಂದೇನು? 'ಬಾಹುಬಲಿ'- 3 ಖಚಿತಪಡಿಸಿದ ರಾಣಾ, ಪ್ರಭಾಸ್, ಅನುಷ್ಕಾ
ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಸರಣಿ ಸಿನಿಮಾ 'ಬಾಹುಬಲಿ'. ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾ ಇದು. ಎರಡು ಭಾಗಗಳಾಗಿ ತೆರೆಗೆ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಮುಂದೆ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಹುಟ್ಟು ಹಾಕಿತ್ತು. ಮುಂದೆ 'ಬಾಹುಬಲಿ' ಪಾರ್ಟ್- 3 ಬರುವುದಾಗಿ ನಟ ರಾಣಾ ದಗ್ಗುಬಾಟಿ ಹೇಳಿದ್ದಾರೆ.
ಒಂದು ಸಿನಿಮಾ ಮಾಡಲು ಬರೆದಿದ್ದ ಕಥೆಯನ್ನು ಹಿಗ್ಗಿಸಿ ಎರಡು ಭಾಗಗಳಾಗಿ 'ಬಾಹುಬಲಿ' ಸರಣಿ ಚಿತ್ರಗಳನ್ನು ತೆರೆಗೆ ತರಲಾಗಿತ್ತು. ಮಾಹಿಷ್ಮತಿ ಸಾಮ್ರಾಜ್ಯಕ್ಕೆ ಅಮರೇಂದ್ರ ಬಾಹುಬಲಿ ಮಗ ಮಹೇಂದ್ರ ಬಾಹುಬಲಿ ರಾಜನಾಗಿ ಪಟ್ಟಾಭಿಷೇಕ ಮಾಡುವುದರೊಂದಿಗೆ 2ನೇ ಭಾಗ ಮುಕ್ತಾಯವಾಗಿತ್ತು. ಸಾಕಷ್ಟು ಜನ ಕಥೆಯನ್ನು ಮುಂದುವರೆಸಬೇಕು, ಪಾರ್ಟ್- 3 ಬರುತ್ತಾ ಎಂದು ಕೇಳಿದ್ದರು. ರಾಜಮೌಳಿ ಕಥೆ ಇಲ್ಲ, ನೋಡೋಣ, ಮಾಡೋಣ ಎನ್ನುತ್ತಲೇ ಬಂದಿದ್ದರು. ಆದರೆ ಬೇರೆ ಬೇರೆ ರೂಪದಲ್ಲಿ ಬಾಹುಬಲಿ ಚಿತ್ರದ ಪಾತ್ರಗಳಿಗೆ ಜೀವ ಕೊಡುವ ಪ್ರಯತ್ನ ನಡೆಯುತ್ತಲೇ ಇದೆ. ಆನಿಮೆಟೆಡ್ ಸಿನಿಮಾಗಳಾಗಿ ಕೂಡ ಬಾಹುಬಲಿ ಕಥೆ ಬಂದಿತ್ತು.

'ಬಾಹುಬಲಿ: ದಿ ಟಾರ್ಚ್‌ಬೇರರ್' ಹೆಸರಿನಲ್ಲಿ ಡಾಕ್ಯುಮೆಂಟರಿ ನಿರ್ಮಾಣವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಬಾಹುಬಲಿ ಕಲ್ಪನೆ, ಮೇಕಿಂಗ್, ರಿಲೀಸ್, ಬಾಕ್ಸಾಫೀಸ್ ಹೀಗೆ ಸಾಕಷ್ಟು ವಿಚಾರಗಳನ್ನು ಚರ್ಚಿಸಲಾಗಿದೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಾಜಮೌಳಿ, ರಮಾ ರಾಜಮೌಳಿ ಹೀಗೆ ಚಿತ್ರಕ್ಕಾಗಿ ಕೆಲಸ ಮಾಡಿದ ಎಲ್ಲವೂ ಮಾತನಾಡಿದ್ದಾರೆ. ಇದೇ ವೇಳೆ 'ಬಾಹುಬಲಿ- 3' ಬಗ್ಗೆ ನಟ ರಾಣಾ ಸುಳಿವು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಈಗ ಭಾರೀ ಸದ್ದು ಮಾಡ್ತಿದೆ.
ರಾಣಾ ಮಾತನಾಡುತ್ತಾ "ನಾನು ಈ ವಿಚಾರವನ್ನು ಪಬ್ಲಿಕ್ ಆಗಿ ಹೇಳಬೇಕೊ ಬೇಡವೋ ಗೊತ್ತಿಲ್ಲ.. ರಾಜಮೌಳಿ ಹಾಗೂ ನಿರ್ಮಾಪ ಶೋಭು ಇಲ್ಲಿ ಇಲ್ಲದೇ ಇರುವುದರಿಂದ ನನ್ನ ಮನಸ್ಸಿಲ್ಲಿರುವುದನ್ನು ಹೇಳ್ತೀನಿ. ಜಗತ್ತು ಇದಕ್ಕೆ ಸಿದ್ಧವಾಗದೇ ಇರಬಹುದು. ಆದರೆ 'ಬಾಹುಬಲಿ' ಬರಲಿದೆ, ಎಂದು ಹೇಳಿ ನಿಲ್ಲಿಸುತ್ತಿದ್ದಂತೆ ಪ್ರಭಾಸ್ ಹಾಗೂ ಅನುಷ್ಕಾ 'ಬಾಹುಬಲಿ'-3 ಎಂದು ಕುತೂಹಲ ಮೂಡಿಸಿದ್ದಾರೆ. ಅಲ್ಲಿಗೆ ಮತ್ತೊಂದು ಭಾಗದಲ್ಲಿ ಮಾಹಿಷ್ಮತಿ ಕಥೆ ತೆರೆಮೇಲೆ ಬರುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
'ಬಾಹುಬಲಿ'-2 ಚಿತ್ರದಲ್ಲಿ ಬಲ್ಲಾಳದೇವನಾಗಿ ರಾಣಾ ಪಾತ್ರ ಮುಕ್ತಾಯವಾಗಿದೆ. ಒಂದು ವೇಳೆ ಕಥೆಯನ್ನು ಮುಂದುವರೆಸಿದರೆ ದೇವಸೇನಾ ಆಗಿ ಅನುಷ್ಕಾ, ಮಹೇಂದ್ರ ಬಾಹುಬಲಿಯಾಗಿ ಪ್ರಭಾಸ್ ಮುಂದುವರೆಯಲಿದ್ದಾರೆ ಎಂದು ಕೆಲವರು ನಿರೀಕ್ಷೆ ಮಾಡುತ್ತಿದ್ದಾರೆ. ಸದ್ಯಕ್ಕೆ ಮತ್ತೊಂದು ಸೀಕ್ವೆಲ್ ಮಾಡುವುದು ಅನುಮಾನ. ಕಾರಣ ಎಲ್ಲರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬಾಹುಬಲಿ'ಗಿಂತ ಹಲವು ಪಟ್ಟು ದೊಡ್ಡದಾಗಿರುವ 'ವಾರಣಾಸಿ' ಸಿನಿಮಾ ಕಟ್ಟಿಕೊಡುವುದರಲ್ಲಿ ಜಕ್ಕಣ್ಣ ನಿರತರಾಗಿದ್ದಾರೆ.
'ಬಾಹುಬಲಿ' ಚಿತ್ರದಲ್ಲಿ ಕಥೆ ಅದ್ಭುತವಾಗಿತ್ತು. ಪ್ರತಿ ಪಾತ್ರವನ್ನು ಮತ್ತಷ್ಟು ಹಿಗ್ಗಿಸಿ ಹೇಳುವ ಅವಕಾಶ ಇತ್ತು. ಚಿತ್ರೀಕರಿಸಿದ್ದ ಒಂದಷ್ಟು ದೃಶ್ಯಗಳಿಗೂ ಕತ್ತರಿ ಹಾಕಿದ್ದರು. ಅಷ್ಟರಮಟ್ಟಿಗೆ ದೊಡ್ಡ ಕಥೆ ಅದು. ಹಾಗಾಗಿ ಅದೇ ಪಾತ್ರಗಳನ್ನು ವಿಸ್ತರಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತೊಂದು ಸಿನಿಮಾ ಕೊಟ್ಟಿಕೊಡಲು ಅವಕಾಶವಿದೆ. ಮಹೇಂದ್ರ ಬಾಹುಬಲಿ ಆಡಳಿತ ಹೇಗಿರುತ್ತೆ, ಆತನಿಗೆ ಮುಂದೆ ಎದುರಾಗುವ ಸವಾಲುಗಳೇನು, ಅದನ್ನು ಹೇಗೆ ನಿವಾರಿಸಿಕೊಳ್ಳುತ್ತಾನೆ, ಇದರ ಹಿನ್ನೆಲೆಯಲ್ಲಿ ಅಮರೇಂದ್ರ ಬಾಹುಬಲಿ, ಬಲ್ಲಾಳದೇವ, ದೇವಸೇನಾ, ಕಟ್ಟಪ್ಪ ಹಾಗೂ ಶಿವಗಾಮಿ ಪಾತ್ರಗಳನ್ನು ಫ್ಲ್ಯಾಶ್‌ಬ್ಯಾಕ್ ತಂತ್ರ ಅನುಸರಿಸಿ ಕಥೆ ಹೇಳಲು ಅವಕಾಶವಿದೆ.
ಕಾಲ್ಪನಿಕ ಕಥೆಗಳನ್ನು ಹೆಣೆಯುವುದರಲ್ಲಿ ವಿಜಯೇಂದ್ರ ಪ್ರಸಾದ್, ಅದಕ್ಕೆ ಚಿತ್ರಕಥೆ ಮಾಡಿ ತೆರೆಮೇಲೆ ಅದ್ಭುತಗಳನ್ನು ಸೃಷ್ಟಿಸುವುದರಲ್ಲಿ ಪುತ್ರ ರಾಜಮೌಳಿ ಚಾಲಾಕಿಗಳು. ಮುಂದೊಂದು ದಿನ 'ಬಾಹುಬಲಿ- 3' ಸಿನಿಮಾ ಕೂಡ ತೆರೆಗೆ ಬಂದರೆ ಅಚ್ಚರಿಪಡಬೇಕಿಲ್ಲ.


Click it and Unblock the Notifications