ರಿಷಬ್ ಶೆಟ್ಟಿ 'ಜೈ ಹನುಮಾನ್' ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ; ಯಾವ ಪಾತ್ರ?
ನಟ, ನಿರ್ದೇಶಕ ರಿಷಬ್ ಶೆಟ್ಟಿ 'ಕಾಂತಾರ-1' ಚಿತ್ರದಲ್ಲಿ ಮಗ್ನರಾಗಿದ್ದಾರೆ. ಮುಂದೆ ಯಾವ ಸಿನಿಮಾ ಇನ್ನುವ ಪ್ರಶ್ನೆಗೆ ಇತ್ತೀಚೆಗೆ ಉತ್ತರ ಸಿಕ್ಕಿತ್ತು. ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಪ್ರಶಾಂತ್ ವರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ದೀಪಾವಳಿ ಸಂಭ್ರಮದಲ್ಲಿ 'ಜೈ ಹನುಮಾನ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿತ್ತು. ಅದರ ಬೆನ್ನಲ್ಲೇ ಚಿತ್ರದ ಥೀಮ್ ಸಾಂಗ್ ಬಿಡುಗಡೆ ಆಗಿತ್ತು. ಇತ್ತೀಚೆಗೆ ರಿಷಬ್ ಜೊತೆಗಿನ ಒಂದು ಮೇಕಿಂಗ್ ಫೋಟೊವನ್ನು ಸಹ ಪ್ರಶಾಂತ್ ವರ್ಮಾ ಹಂಚಿಕೊಂಡಿದ್ದರು. ಇದೀಗ ಚಿತ್ರತಂಡಕ್ಕೆ ಮತ್ತೊಬ್ಬ ಸ್ಟಾರ್ ನಟನ ಆಗಮನವಾಗಿದೆ. ಅದನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದ 'ಹನುಮಾನ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಚಿತ್ರದ ಕಥೆ, ಮೇಕಿಂಗ್, ಗ್ರಾಫಿಕ್ಸ್ ಎಲ್ಲದರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಸ್ಟಾರ್ ನಟರಿಲ್ಲದೇ ಪ್ರಶಾಂತ್ ವರ್ಮಾ ಒಂದೊಳ್ಳೆ ಒಂದೊಳ್ಳೆ ಸಿನಿಮಾ ಮಾಡಿ ತಮ್ಮನ್ನು ಸಾಬೀತುಪಡಿಸಿದ್ದರು. ಹಾಗಾಗಿ 'ಜೈ ಹನುಮಾನ್' ಸಿನಿಮಾ ಬಜೆಟ್, ಸ್ಟಾರ್‌ಕಾಸ್ಟ್ ಎಲ್ಲವೂ ದೊಡ್ಡದಾಗುತ್ತಿದೆ.
ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದರಲ್ಲಿ 'ಹನುಮಾನ್' ಬಳಿಕ 'ಜೈ ಹನುಮಾನ್' ಸಿನಿಮಾ ಸಿದ್ಧವಾಗುತ್ತಿದೆ. ಮುಂದೆ ಮತ್ತಷ್ಟು ಚಿತ್ರಗಳನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಸದ್ಯಕ್ಕೆ 'ಜೈ ಹನುಮಾನ್' ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ. ರಿಷಬ್ ಶೆಟ್ಟಿ ಬಳಿಕ ತೆಲುಗು ನಟ ರಾಣಾ ದಗ್ಗುಬಾಟಿ ಕೈ ಜೋಡಿಸಿದ್ದಾರೆ. ಜೈ ಜೈ ಹನುಮಾನ್ ಎಂದು ಬರೆದು ಮೂವರು ಒಟ್ಟಿಗೆ ಇರುವ ಫೋಟೊವನ್ನು ನಿರ್ದೇಶಕರು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಾರೆ ಎನ್ನಲಾಗ್ತಿದೆ. ಹಾಗಿದ್ದರೆ ರಾಣಾ ಯಾವ ಪಾತ್ರ ಮಾಡ್ತಾರೆ? ಎನ್ನುವ ಚರ್ಚೆ ಶುರುವಾಗಿದೆ. ರಾವಣ ಅಥವಾ ಶ್ರೀರಾಮ? ಯಾವ ಪಾತ್ರಕ್ಕೆ ರಾಣಾ ಬಣ್ಣ ಹಚ್ಚುತ್ತಾರೆ ಎನ್ನುವ ಕುತೂಹಲ ಮೂಡಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡದೇ ಕುತೂಹಲವನ್ನು ಉಳಿಸಿಕೊಂಡಿದೆ. ಬಲ್ಲಾಳ ದೇವ ಶ್ರೀರಾಮನಾಗಿ ನಟಿಸುವುದು ಬಹುತೇಖ ಖಚಿತ ಎನ್ನಲಾಗ್ತಿದೆ. ಅಥವಾ ರಿಷಬ್ ಶೆಟ್ಟಿ ಪಾತ್ರಕ್ಕೆ ರಾಣಾ ಧ್ವನಿ ಮಾತ್ರ ಕೊಡ್ತಾರಾ? ಎನ್ನುವ ಊಹಾಪೋಹವೂ ಶುರುವಾಗಿದೆ.

ರಾಣಾ ಕಂಚಿನ ಕಂಠಕ್ಕೆ ಭಾರೀ ಡಿಮ್ಯಾಂಡ್ ಇದೆ. ಕೆಲ ಸಿನಿಮಾಗಳಲ್ಲಿ ತಮ್ಮ ಬೇಸ್ ವಾಯ್ಸ್‌ನಿಂದಲೇ ಗಮನ ಸೆಳೆದಿದ್ದಾರೆ. ಹಾಗಾಗಿ ಕೇವಲ ಚಿತ್ರದಲ್ಲಿ ಕಂಠದಾನ ಕಲಾವಿದನಾಗಿ ಮಾತ್ರ ರಾಣಾ ಕೆಲಸ ಮಾಡ್ತಾರಾ? ಎನ್ನುವ ಚರ್ಚೆ ಕೂಡ ನಡೀತಿದೆ. ಕೆಲವರ ಪ್ರಕಾರ ಚಿತ್ರದಲ್ಲಿ ಹನುಮಂತನಾಗಿ ರಾಣಾ ನಟಿಸ್ತಾರೆ ಎನ್ನಲಾಗ್ತಿದೆ. ಹಾಗಿದ್ದರೆ ರಿಷಬ್ ಪಾತ್ರ ಏನು? ಎನ್ನುವ ಕುತೂಹಲ ಮೂಡುತ್ತದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ 'ಜೈ ಹನುಮಾನ್' ಸಿನಿಮಾ ನಿರ್ಮಾಣವಾಗಲಿದೆ. 'ಬಾಹುಬಲಿ' ಸರಣಿ ಬಳಿಕ ರಾಣಾಗೆ ದೊಡ್ಡ ಬ್ರೇಕ್ ಸಿಗಲಿಲ್ಲ. ಈ ಚಿತ್ರ ಆ ಕೊರಗನ್ನು ನೀಗಿಸುತ್ತಾ ಕಾದು ನೋಡಬೇಕಿದೆ. 2026ರಲ್ಲಿ 'ಜೈ ಹನುಮಾನ್' ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ. ಇನ್ನು ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಪ್ರಭಾಸ್ ನಟೆನೆಯ ಸಿನಿಮಾ ಸಹ ಇರುತ್ತದೆ ಎನ್ನುವ ಗುಸುಗುಸು ಶುರುವಾಗಿದೆ.
'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದು ಕನ್ನಡ ಸಿನಿರಸಿಕರಿಗೂ ಖುಷಿಯಾಗಿದೆ. ಆದರೆ ಸಂಪೂರ್ಣವಾಗಿ ತೆಲುಗು ಚಿತ್ರರಂಗದತ್ತ ಹೋಗಬೇಡಿ. ಕನ್ನಡದಲ್ಲೂ ಸಿನಿಮಾ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್-ರಾಣಾ ಜುಗಲ್ಬಂದಿ ಕುತೂಹಲ ಮೂಡಿಸಿದೆ.


Click it and Unblock the Notifications











