ಅತ್ಯಾಚಾರ ಆರೋಪಿ ಜಾನಿ ಮಾಸ್ಟರ್ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು?
ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಭಾರೀ ವಿವಾದದಲ್ಲಿ ಸಿಲುಕಿದ್ದಾರೆ. ಮಹಿಳಾ ಕೊರಿಯೋಗ್ರಫರ್ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಸಿರುವ ಗಂಭೀರ ಆರೋಪ ಅವರ ಮೇಲಿದೆ. ಈಗಾಗಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ರಿಮಾಂಡ್ ರಿಪೋರ್ಟ್‌ನಲ್ಲಿ ಆತ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗ್ತಿದೆ.
ಈಗಾಗಲೇ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಮೊದಲಿಗೆ ನಾನೇನು ತಪ್ಪು ಮಾಡಿಲ್ಲ, ತನ್ನನ್ನು ಹಣಿಯಲು ಇದು ಷಡ್ಯಂತ್ರ ಎಂದು ಜಾನಿ ಮಾಸ್ಟರ್ ಆರೋಪಿಸಿದ್ದರು. ಇನ್ನು ಪ್ರಕರಣದಲ್ಲಿ ಆತನ ಪತ್ನಿ ಆಯೇಷಾ ಕೂಡ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.

ಆಯೇಷಾ ತನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಕೇಸು ದಾಖಲಿಸಿ ಆಯೇಷಾ ಜೊತೆಗೆ ಮತ್ತಿಬ್ಬರನ್ನು ಆರೋಪಿಗಳಾಗಿ ಸೇರಿಸಲು ಪೊಲೀಸರು ಮುಂದಾಗಿದ್ದಾರೆ. ಹಾಗಾಗಿ ಆಯೇಷಾಗೂ ಬಂಧನದ ಭೀತಿ ಎದುರಾಗಿದೆ. ಜಾನಿ ಮಾಸ್ಟರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 40 ಪುಟಗಳ ದೂರನ್ನು ಸಂತ್ರಸ್ತ ಯುವತಿ ಸಲ್ಲಿಸಿದ್ದಾರೆ.
2019ರಲ್ಲಿ ಸಂತ್ರಸ್ತ ಯುವತಿಯನ್ನು ಜಾನಿ ಮಾಸ್ಟರ್ ತಮ್ಮ ಡ್ಯಾನ್ಸ್ ತಂಡಕ್ಕೆ ಸೇರಿಸಿಕೊಂಡಿದ್ದರು. ಕೆಟ್ಟ ದೃಷ್ಟಿಯಿಂದಲೇ ಆಕೆಗೆ ಅವಕಾಶ ಕೊಟ್ಟಿದ್ದರು ಎನ್ನಲಾಗ್ತಿದೆ. 2020ರಲ್ಲಿ ಮುಂಬೈ ಹೋಟೆಲ್‌ವೊಂದರಲ್ಲಿ ಸಂತ್ರಸ್ತರ ಮೇಲೆ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ. ಆಗ ಯುವತಿಯ ವಯಸ್ಸು 16 ವರ್ಷ ಎಂದು ರಿಮಾಂಡ್ ರಿಪೋರ್ಟ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ. ಹಾಗಾಗಿ ಪೋಕ್ಸೊ ಪ್ರಕರಣ ಅಡಿ ದೂರು ದಾಖಲಾಗಿದೆ.
ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು ಹಾಗೂ ಹಿಂದಿ ಸಿನಿಮಾಗಳಿಗೂ ಜಾನಿ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಸೂಪರ್ ಹಿಟ್ ಹಾಡುಗಳಿಗೆ ನಾಯಕ-ನಾಯಕಿಯರನ್ನು ಕುಣಿಸಿದ್ದಾರೆ. ತಮ್ಮ ಡ್ಯಾನ್ಸ್‌ಗಾಗಿ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂತಹ ಜಾನಿ ಮಾಸ್ಟರ್ ಇದೀಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.

ಜಾನಿ ಮಾಸ್ಟರ್ ಬಂಧನದ ಬಗ್ಗೆ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ನಡೀತಿದೆ. ಕೆಲವರು ಆತ ತಪ್ಪು ಮಾಡಿರುವುದಿಲ್ಲ ಎಂದು ಬೆಂಬಲ ಸೂಚಿಸಿದ್ದಾರೆ. ಮತ್ತೆ ಕೆಲವರು ಆತ ತಪ್ಪು ಮಾಡಿರುವುದಕ್ಕೆ ಜೈಲು ಸೇರಿದ್ದಾರೆ. ಸುಖಾ ಸುಮ್ಮನೆ ಜೈಲು ಸೇರಲ್ಲ ಎನ್ನುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಅಂತೂ ಜಾನಿ ಮಾಸ್ಟರ್ ಬಹಳ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಕಿರುತೆರೆಯ ಡ್ಯಾನ್ಸ್ ಶೋಗಳಲ್ಲಿ ತೀರ್ಪುಗಾರರಾಗಿಯೂ ಭರ್ಜರಿ ಸಂಭಾವನೆ ಸಿಗುತ್ತಿತ್ತು.
ಕನ್ನಡದಲ್ಲಿ 'ರಾಜಕುಮಾರ' ಚಿತ್ರದ 'ಅಪ್ಪು ಡ್ಯಾನ್ಸ್ ಡ್ಯಾನ್ಸ್', 'ನಟಸಾರ್ವಭೌಮ' ಚಿತ್ರದ 'ಓಪನ್ ದ ಬಾಟಲ್', 'ವಿಕ್ರಾಂತ್ ರೋಣ' ಚಿತ್ರದ 'ರಾರಾ ರಕ್ಕಮ್ಮ' ರೀತಿಯ ಸೂಪರ್ ಹಿಟ್ ಗೀತೆಗಳಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದರು. ಇನ್ನು ಒಂದು ಸಾಂಗ್ ಕೊರಿಯೋಗ್ರಫಿಗೆ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದರು. ದೊಡ್ಡ ಸಿನಿಮಾ, ಚಿಕ್ಕ ಸಿನಿಮಾಗಳಿಗೆ ಸಂಭಾವನೆಯಲ್ಲಿ ಏರಿಳಿತ ಆಗುತ್ತಿತ್ತು.
ಒಂದು ಸಾಂಗ್ ಕೊರಿಯೋಗ್ರಫಿ ಮಾಡಲು 50 ಲಕ್ಷ ರೂ. ಸಂಭಾವನೆಯನ್ನು ಜಾನಿ ಮಾಸ್ಟರ್ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಕೆಲವೊಮ್ಮೆ ಚಿತ್ರದ ಐದಾರು ಸಾಂಗ್ಸ್‌ಗೆ ಡ್ಯಾನ್ಸ್ ಕಂಪೋಸ್ ಮಾಡಿ 2.5 ಕೋಟಿ ರೂ. ಸಂಭಾವನೆ ಪಡೆದ ಉದಾಹರಣೆಗಳು ಇದೆಯಂತೆ. ಆದರೆ ಅಷ್ಟು ಸಂಭಾವನೆ ಕೊಟ್ಟರೆ ಅದಕ್ಕೆ ನ್ಯಾಯ ಒದಗಿಸುತ್ತಿದ್ದರು. ತಮ್ಮ ಡ್ಯಾನ್ಸ್ ಮೂಲಕ ಕಮಾಲ್ ಮಾಡುತ್ತಿದ್ದರು ಎನ್ನಲಾಗ್ತಿದೆ. ಚಿಕ್ಕ ಸಿನಿಮಾಗಳಲ್ಲಿ ಒಂದು ಹಾಡಿಗೆ 10 ರಿಂದ 15 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು.
ಸಾಕಷ್ಟು ಹಾಡುಗಳಿಗೆ ಜ್ಯೂನಿಯರ್ ಡ್ಯಾನ್ಸರ್ ಆಗಿ ಸಹಾಯಕ ಕೊರಿಯೋಗ್ರಫರ್ ಆಗಿ ಶೇಖ್ ಜಾನಿ ಬಾಷಾ ಕೆಲಸ ಮಾಡಿದ್ದರು. 2009ರಲ್ಲಿ ಬಂದ 'ದ್ರೋಣ' ಚಿತ್ರದಿಂದ ಜಾನಿ ಕೊರಿಯೋಗ್ರಫರ್ ಆಗಿದ್ದರು. ಜಾನಿ ಮಾಸ್ಟರ್ ವೃತ್ತಿ ಜೀವನಕ್ಕೆ ನಟ ರಾಮ್‌ಚರಣ್ ಬೆಂಬಲ ಸಿಕ್ಕಿತ್ತು. ತಮ್ಮ ಸಿನಿಮಾಗಳಲ್ಲಿ ಒಂದು ಹಾಡಿಗಾದರೂ ಅವಕಾಶ ಕೊಡುತ್ತಿದ್ದರು.


Click it and Unblock the Notifications











