ದೀಕ್ಷಿತ್, ರಶ್ಮಿಕಾ ನಟನೆಯ 'ದಿ ಗರ್ಲ್ ಫ್ರೆಂಡ್' ಚಿತ್ರದ ಆ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ
ರಾಹುಲ್ ರವಿಂದ್ರನ್ ನಿರ್ದೇಶನದ 'ದಿ ಗರ್ಲ್ ಫ್ರೆಂಡ್' ಸಿನಿಮಾ ಈ ವಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಲಾಗ್ತಿದೆ. ಸದ್ಯ ಚಿತ್ರಕ್ಕೆ ಸೆನ್ಸಾರ್ ಮುಗಿಸಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.
ದೀಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಇಂಟೆನ್ಸ್ ಲವ್ ಸ್ಟೋರಿ ಸಿನಿಮಾ ಇದು. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಕಾಲಾವಧಿ 2 ಗಂಟೆ 18 ನಿಮಿಷ ಎನ್ನುವುದು ಗೊತ್ತಾಗಿದೆ. ಲವ್, ಎಮೋಷನ್ ಜೊತೆ ಬೋಲ್ಡ್ ವಿಚಾರಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಹಾಗಾಗಿ ಅಸಭ್ಯ ಪದಗಳನ್ನು ಬಳಸಲಾಗಿದ್ದು ಅದಕ್ಕೆ ಸೆನ್ಸಾರ್ ಕತ್ತರಿ ಪ್ರಯೋಗಿಸಿದೆ.

ಕನ್ನಡ ಕಲಾವಿದರಿಬ್ಬರು ಲೀಡ್ ರೋಲ್‌ಗಳಲ್ಲಿ ನಟಿಸಿದ್ದು ತಮಿಳುನಾಡು ಮೂಲದ ನಿರ್ದೇಶಕ ರಾಹುಲ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ತೆಲುಗು ಚಿತ್ರ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿರುವುದು ವಿಶೇಷ. ಹೇಶಮ್ ಅಬ್ದುಲ್ ವಹಾಬ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು, ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ.
'ದಿ ಗರ್ಲ್‌ಫ್ರೆಂಡ್' ಚಿತ್ರದ ಸೆನ್ಸಾರ್ ಸರ್ಟಿಫಿಕೇಟ ಕಾಪಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಚಿತ್ರದ 29 ನಿಮಿಷ 37 ಸೆಕೆಂಡ್ ಸಮಯದಲ್ಲಿ ಬರುವ ಲಿಪ್‌ಲಾಕ್ ದೃಶ್ಯ ತೆಗೆಯುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. 1 ಗಂಟೆ 28 ನಿಮಿಷದಲ್ಲಿ ಬಳಸಿರುವ ಕೆಟ್ಟ ಪದವನ್ನು ಮ್ಯೂಟ್ ಮಾಡಲು ಹೇಳಿದೆ. ಸಬ್‌ಟೈಟಲ್‌ನಲ್ಲಿ ಕೂಡ ಅದನ್ನು ತೆಗೆಯುವಂತೆ ತಿಳಿಸಿದ್ದಾರೆ. 1 ಗಂಟೆ 59ನೇ ನಿಮಿಷದಲ್ಲಿ ಬಾಗಿಲಿನ ಮೇಲೆ ಇರುವ ಮಹಿಳೆಯರ ರೇಖಾಚಿತ್ರಗಳ ದೃಶ್ಯಗಳನ್ನು ತೆಗೆಯಲು ಸೂಚಿಸುವುದು ಗೊತ್ತಾಗುತ್ತಿದೆ.

ಮಕ್ಕಳನ್ನು ಚಿತ್ರೀಕರಣಕ್ಕೆ ಬಳಸಿಕೊಂಡಿದ್ದು ಅವರ ಪೋಷಕರ ಅನುಮತಿ ಪತ್ರ ಕೇಳಲಾಗಿದೆ. 1 ಗಂಟೆ 13ನೇ ನಿಮಿಷದಲ್ಲಿ ಮತ್ತೊಂದು ಪದವನ್ನು ಮ್ಯೂಟ್ ಮಾಡಲು ಹೇಳಿ ಸಬ್‌ಟೈಟಲ್ಸ್‌ನಲ್ಲಿ ಕೂಡ ತೆಗೆಯಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಅದನ್ನೆಲ್ಲಾ ಚಿತ್ರತಂಡ ಒಪ್ಪಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ರಶ್ಮಿಕಾ ಈ ಸಿನಿಮಾ ಮೇಲೆ ಬಹಳ ಭರವಸೆಯಿಂದ ಇದ್ದಾರೆ. ಒಂದರ್ಥದಲ್ಲಿ ಆಕೆಯ ಪಾತ್ರದ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಇನ್ನು ಅನು ಇಮಾನ್ಯುಯೆಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೀಕ್ಷಿತ್ ಹಾಗೂ ರಶ್ಮಿಕಾ ನಡುವೆ ಲಿಪ್ ಲಾಕ್ ದೃಶ್ಯ ಇತ್ತಾ? ಅಥವಾ ದೀಕ್ಷಿತ್ - ಅನು ನಡುವೆ ಆ ಚುಂಬನ ದೃಶ್ಯ ಇತ್ತಾ ಎನ್ನುವುದು ಗೊತ್ತಾಗಿಲ್ಲ. ರಾವು ರಮೇಶ್, ರೋಹಿಣಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಸಲ್ಮಾನ್ ಖಾನ್ ಜತೆ ನಟಿಸಿದ 'ಸಿಕಂದರ್' ಬಿಟ್ಟು ಇನ್ನುಳಿದ 3 ಸಿನಿಮಾಗಳು ಗೆದ್ದಿದೆ. 'ಪುಷ್ಪ- 2' ಹಾಗೂ 'ಛಾವ' ಚಿತ್ರಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿ ದಾಖಲೆ ಬರೆದಿತ್ತು. ಕುಂದಾಪುರ ಮೂಲದ ದೀಕ್ಷಿತ್ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ 'ದಸರಾ' ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಮಾಡಿ ಗೆದ್ದಿದ್ದರು. ಈಗ 'ದಿ ಗರ್ಲ್‌ಫ್ರೆಂಡ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಕಾಯುತ್ತಿದ್ದಾರೆ.


Click it and Unblock the Notifications











