ರಶ್ಮಿಕಾ ಮಂದಣ್ಣ ಈಗ 'ದಿಯಾ' ದೀಕ್ಷಿತ್ ಶೆಟ್ಟಿ 'ಗರ್ಲ್‌ಫ್ರೆಂಡ್'
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ 'ಅನಿಮಲ್' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಸಿನಿಮಾ 5 ದಿನಕ್ಕೆ 480 ಕೋಟಿ ರೂ. ಗಳಿಕೆ ಕಂಡು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಶ್ಮಿಕಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವ ಬಗ್ಗೆಯೂ ಚರ್ಚೆ ಆಗುತ್ತಿದೆ.
ಸ್ಯಾಂಡಲ್‌ವುಡ್ ಬಿಟ್ಟು ರಶ್ಮಿಕಾ ಮಂದಣ್ಣ ಸದ್ದು ಟಾಲಿವುಡ್ ಬಾಲಿವುಡ್‌ನಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಆಗೊಮ್ಮೆ ಈಗೊಮ್ಮೆ ತಮಿಳು ಸಿನಿಮಾದಲ್ಲೂ ನಟಿಸುತ್ತಾರೆ. ಸದ್ಯ ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಿರಿಕ್ ಬೆಡಗಿ ನಟಿಸ್ತಿದ್ದಾರೆ.

ಬಾಲಿವುಡ್‌ನಲ್ಲಿ ರಶ್ಮಿಕಾ ನಟನೆಯ 'ಮಿಷನ್ ಮಜ್ನು' ಹಾಗೂ 'ಗುಡ್‌ಬೈ' ಅಷ್ಟಾಗಿ ಗೆಲ್ಲಲಿಲ್ಲ. 'ಅನಿಮಲ್' ಸಿನಿಮಾ ಮೇಲೆ ರೋಶ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ರೈಲರ್ ರಿಲೀಸ್ ಆಗುವರೆಗೂ ಸಿನಿಮಾ ಅಷ್ಟೇನು ಕುತೂಹಲ ಮೂಡಿಸಿರಲಿಲ್ಲ. ಟ್ರೈಲರ್ ಸೂಪರ್ ಹಿಟ್ ಆಗಿ ಸಿನಿಮಾ ಹೈಪ್ ಕ್ರಿಯೇಟ್ ಮಾಡಿತ್ತು. ಅದಕ್ಕೆ ತಕ್ಕಂತೆ ಈಗ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ.
'ಅನಿಮಲ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಹೊಸ ಸಿನಿಮಾದಲ್ಲಿ ನಟಿಸೋಕೆ ಆರಂಭಿಸಿದ್ದಾರೆ. 'ದಿ ಗರ್ಲ್‌ಫ್ರೆಂಡ್' ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಅಲ್ಲು ಅರವಿಂದ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ ರಾಹುಲ್ ರವೀಂದ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ದಿ ಗರ್ಲ್‌ಫ್ರೆಂಡ್' ಚಿತ್ರದ ಮೊದಲ ದಿನದ ಚಿತ್ರೀಕರಣ ವಿಡಿಯೋ ಹಂಚಿಕೊಂಡು ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡದ 'ದಿಯಾ' ಚಿತ್ರದಲ್ಲಿ ನಟಿಸಿ ಗೆದ್ದಿದ್ದ ನಟ ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಇತ್ತೀಚೆಗೆ ತೆಲುಗಿನ 'ದಸರಾ' ಚಿತ್ರದಲ್ಲಿ ದೀಕ್ಷಿತ್ ನಟ ನಾನಿ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದೀಕ್ಷಿತ್ ನಟನೆ ತೆಲುಗು ಪ್ರೇಕ್ಷಕರ ಮನಗೆದ್ದಿತ್ತು. ಅದರ ಬೆನ್ನಲ್ಲೇ ಈಗ 'ಗರ್ಲ್‌ಫ್ರೆಂಡ್' ಸಿನಿಮಾ ಅವಕಾಶ ಸಿಕ್ಕಿದೆ.

ಕನ್ನಡದಲ್ಲಿ 'ಬ್ಲಿಂಕ್', 'ಕೆಟಿಎಂ', 'ಶೀಘ್ರವೇಮ ಕಲ್ಯಾಣ ಪ್ರಾಪ್ತಿರಸ್ತು', 'ಸ್ಟ್ರಾಬೆರಿ' ಹಾಗೂ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಚಿತ್ರಗಳಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. 15 ದಿನಗಳ ಹಿಂದೆಯಷ್ಟೆ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಮುಹೂರ್ತ ನೆರವೇರಿತ್ತು. ಇದೀಗ ಸಿನಿಮಾ ಚಿತ್ರೀಕರಣ ಸಹ ಆರಂಭವಾಗಿದೆ. ಮೊದಲ ದಿನ ದೀಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.
ಇನ್ನು 'ಪುಷ್ಪ'-2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಮತ್ತೆ ಶ್ರೀವಲ್ಲಿಯಾಗಿ ಅಭಿಮಾನಿಗಳ ಮನಗೆಲ್ಲಲು ಬರುತ್ತಿದ್ದಾರೆ. ಮುಂದಿನ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಈ ಸೀಕ್ವೆಲ್ ಸಿನಿಮಾ ತೆರೆಗೆ ಬರಲಿದೆ. 'ರೈನ್‌ಬೋ' ಎನ್ನುವ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಕಿರಿಕ್ ಬೆಡಗಿ ನಟಿಸುತ್ತಿದ್ದಾರೆ.
'ರೈನ್‌ಬೋ' ಚಿತ್ರಕ್ಕೆ ಸಮಂತಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆಕೆ ಅನಾರೋಗ್ಯಕ್ಕೆ ತುತ್ತಾದ ಬಳಿಕ ಆ ಅವಕಾಶ ಕೊಡಗಿನ ಚೆಲುವೆ ಪಾಲಾಗಿತ್ತು. ತೆಲುಗು, ತಮಿಳಿನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನು ನಿತಿನ್ ನಟನೆಯ 'ಎಕ್ಸ್‌ಟ್ರಾಡಿನರಿಮ್ಯಾನ್' ಚಿತ್ರಕ್ಕೂ ಮೊದಲಿಗೆ ರಶ್ಮಿಕಾ ಆಯ್ಕೆ ಆಗಿದ್ದರು. ಆದರೆ ಆಕೆ ಆ ಸಿನಿಮಾದಿಂದ ಹೊರ ಬಂದು ಶ್ರೀಲೀಲಾ ನಟಿಸುವಂತಾಯಿತು. ಆ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ.
ತಮಿಳಿನಲ್ಲಿ ಧನುಷ್ ನಟನೆಯ 50ನೇ ಚಿತ್ರಕ್ಕೂ ರಶ್ಮಿಕಾ ನಾಯಕಿಯಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಅನಿಮಲ್' ಸಿನಿಮಾ ಸಕ್ಸಸ್ ಬಳಿಕ ರೋಶ್ ಮತ್ತಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸೋ ಸಾಧ್ಯತೆಯಿದೆ. ಸದ್ಯಕ್ಕೆ ಒಂದಷ್ಟು ಕತೆಗಳನ್ನು ಕೇಳುತ್ತಿರುವ ಚೆಲುವೆ ಶೀಘ್ರದಲ್ಲೇ ಮುಂದಿನ ಬಾಲಿವುಡ್ ಸಿನಿಮಾ ಘೋಷಿಸಲಿದ್ದಾರೆ.


Click it and Unblock the Notifications











