'ಪುಷ್ಪ 2'ನಲ್ಲಿ ಶ್ರೀವಲ್ಲಿ ಪಾತ್ರ ಹೇಗಿರಬೇಕು? ಅಭಿಮಾನಿ ಆಸೆಗೆ ದನಿಗೂಡಿಸಿದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಇದೀಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸ್ಟಾರ್ ನಟರೊಟ್ಟಿಗೆ ಸಾಲು-ಸಾಲಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ 'ಗುಡ್ ಬೈ', ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿರುವ 'ಮಿಷನ್ ಮಜ್ನು' ಬಾಲಿವುಡ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇದರ ಜೊತೆಗೆ ತಮಿಳಿನಲ್ಲಿ ನಟ ವಿಜಯ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇವುಗಳ ನಡುವೆ, ರಶ್ಮಿಕಾಗೆ ಭಾರಿ ದೊಡ್ಡ ಜನಪ್ರಿಯತೆ ಗಳಿಸಿಕೊಟ್ಟ 'ಪುಷ್ಪ' ಸಿನಿಮಾದ ಮುಂದಿನ ಭಾಗದ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ಎರಡು ದಿನಗಳ ಹಿಂದಷ್ಟೆ 'ಪುಷ್ಪ 2' ಸಿನಿಮಾದ ಮುಹೂರ್ತ ನಡೆದಿದ್ದು, ಚಿತ್ರೀಕರಣ ಆರಂಭವಾಗಲಿದೆ.
ಆದರೆ ಈ ನಡುವೆ ರಶ್ಮಿಕಾ ಅಭಿಮಾನಿಗಳು ಕೆಲವರು ಆನ್‌ಲೈನ್‌ನಲ್ಲಿ 'ಪುಷ್ಪ' ನಿರ್ದೇಶಕ ಸುಕುಮಾರ್‌ಗೆ ಮನವಿಯೊಂದನ್ನು ಸಲ್ಲಿಸಿದ್ದು, ಶ್ರೀವಲ್ಲಿ ಪಾತ್ರ ಹೇಗಿರಬೇಕು, ಸುಕುಮಾರ್ ಅದನ್ನು ತೆರೆಯ ಮೇಲೆ ಹೇಗೆ ಪ್ರೆಸೆಂಟ್ ಮಾಡಬೇಕು ಎಂಬ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಆಸೆಗೆ ರಶ್ಮಿಕಾ ಸಹ ದನಿ ಗೂಡಿಸಿದ್ದಾರೆ.

ಶ್ರೀವಲ್ಲಿ ಪಾತ್ರಕ್ಕೆ ಪ್ರಾಧಾನ್ಯತೆ ನೀಡಿ: ಅಭಿಮಾನಿಗಳ ಬೇಡಿಕೆ
'ಪುಷ್ಪ 2' ಸಿನಿಮಾದ ಮುಹೂರ್ತ ನಡೆದ ಚಿತ್ರಗಳನ್ನು ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದ್ದು. ಆ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ 'ರಶ್ಮಿಕಾ ಅಂದ್ರೆ ಇಷ್ಟ' ಹೆಸರಿನ ಟ್ವಿಟ್ಟರ್ ಪೇಜ್, ''ನಮ್ಮಿಂದ ಒಂದೇ ಮನವಿ. ದಯವಿಟ್ಟು ಶ್ರೀವಲ್ಲಿ ಪಾತ್ರವನ್ನು ಇನ್ನೂ ಚೂರು ಶಕ್ತಿಯುತವಾಗಿ, ಗಟ್ಟಿಯಾಗಿ ಚಿತ್ರಿಸಿ'' ಎಂದಿದ್ದಾರೆ. ಮುಂದುವರೆದು, ''ಸಿನಿಮಾದಲ್ಲಿ ಡಾಲಿ ಧನಂಜಯ್ ಪಾತ್ರ ಹೇಗಿರಲಿದೆ ಎಂಬ ಬಗ್ಗೆಯೂ ಕುತೂಹಲ ಇದೆ'' ಎಂದಿದ್ದಾರೆ.

ಅಭಿಮಾನಿಯ ಟ್ವೀಟ್‌ಗೆ ರಶ್ಮಿಕಾ ಪ್ರತಿಕ್ರಿಯೆ
ಅಭಿಮಾನಿಯ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಮಂದಣ್ಣ, ''ನನಗೂ ಇದೇ ಭರವಸೆ ಇದೆ. ಏನಾಗುತ್ತದೋ ನೋಡೋಣ'' ಎಂದಿದ್ದಾರೆ. ಮೊದಲ ಭಾಗದಲ್ಲಿ ಶ್ರೀವಲ್ಲಿ ಪಾತ್ರ ಹಿಟ್ ಆಯಿತಾದರೂ ರಶ್ಮಿಕಾರ ಆ ಪಾತ್ರಕ್ಕೆ ಕತೆಯಲ್ಲಿ ತೀರ ಮಹತ್ವದ ಸ್ಪೇಸ್ ಇರಲಿಲ್ಲ ಬದಲಿಗೆ, ಹಾಡಿಗೆ, ಲವ್ ಆಂಗಲ್‌ಗೆ ಮತ್ತು ತುಸು ಗ್ಲಾಮರ್‌ಗೆ ಮಾತ್ರವೇ ರಶ್ಮಿಕಾ ಪಾತ್ರವನ್ನು ಬಳಸಿಕೊಳ್ಳಲಾಗಿತ್ತು.

ಶ್ರೀವಲ್ಲಿ ಪಾತ್ರ ನಿಧನ?
'ಪುಷ್ಪ 2' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣರ ಶ್ರೀವಲ್ಲಿ ಪಾತ್ರ ನಿಧನ ಹೊಂದುತ್ತದೆ ಎಂಬ ಮಾತುಗಳ ಸಹ ಕೇಳಿ ಬಂದಿತ್ತು. ಪುಷ್ಪನ ದುಶ್ಮನ್‌ಗಳು ಆತನ ಮೇಲೆ ಸೇಡು ತೀರಿಸಿಕೊಳ್ಳಲು ಶ್ರೀವಲ್ಲಿಯ ಜೀವ ತೆಗೆಯುತ್ತಾರೆ. ಆ ನಂತರ ಮತ್ತೊಬ್ಬ ನಾಯಕಿಯ ಎಂಟ್ರಿ ಸಿನಿಮಾದಲ್ಲಿ ಆಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಹಾಗೆಲ್ಲ ಏನೂ ಇಲ್ಲ ಎಂದು ಸ್ವತಃ ಮೈತ್ರಿ ಮೂವಿ ಮೇಕರ್ಸ್‌ನವರು ಸ್ಪಷ್ಟನೆ ನೀಡಿದರು.

ಮುಹೂರ್ತಕ್ಕೆ ಬಾರದ ಅಲ್ಲು ಅರ್ಜುನ್
'ಪುಷ್ಪ 2' ಸಿನಿಮಾದ ಮುಹೂರ್ತ ನೆರವೇರಿದ್ದು, ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಆಗಲಿ ರಶ್ಮಿಕಾ ಮಂದಣ್ಣ ಆಗಲಿ ಆಗಮಿಸಿರಲಿಲ್ಲ. ಸರಳವಾಗಿಯೇ ಮುಹೂರ್ತ ಸಮಾರಂಭ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷ ಏಪ್ರಿಲ್ ತಿಂಗಳ ವೇಳೆಗೆ ಸಿನಿಮಾ ಬಿಡುಗಡೆ ಆಗಲಿದೆ. 'ಪುಷ್ಪ 2' ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಟನಾ ಜುಗಲ್ ಬಂಧಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.


Click it and Unblock the Notifications











