ವಿಜಯ್ ದೇವರಕೊಂಡ ಜೊತೆ ಎಂಗೇಜ್‌ಮೆಂಟ್ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ
ಕನ್ನಡ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ವಿಜಯ್ ದೇವರಕೊಂಡ ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಊಹಾಪೋಹ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ರಹಸ್ಯವಾಗಿ ಇಬ್ಬರ ಮದುವೆ ನಿಶ್ಚಿತಾರ್ಥ ನಡೆದಿದೆ. ಮುಂದಿನ ವರ್ಷ ಹಸಮಣೆ ಏರುತ್ತಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಮದುವೆ, ಎಂಗೇಜ್‌ಮೆಂಟ್ ಬಗ್ಗೆ ಈವರೆಗೆ ವಿಜಯ್ ಹಾಗೂ ರಶ್ಮಿಕಾ ಬಹಿರಂಗವಾಗಿ ಮಾತನಾಡಿಲ್ಲ. ಯಾವುದೇ ಫೋಟೊ, ವೀಡಿಯೋ ಕೂಡ ರಿವೀಲ್ ಆಗಿಲ್ಲ. ಸದ್ಯ ಕೊಡಗಿನ ಕುವರಿ ನಟಿಸಿದ ಸಿನಿಮಾಗಳು ಒಂದರ ಹಿಂದೆ ಒಂದು ಬಿಡುಗಡೆ ಆಗ್ತಿದೆ. 'ಥಮ್ಮ' ಬಳಿಕ 'ದಿ ಗರ್ಲ್ ಫ್ರೆಂಡ್' ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾ ಪ್ರಮೋಷನ್‌ನಲ್ಲಿ ಕಿರಿಕ್ ಬೆಡಗಿ ಬ್ಯುಸಿಯಾಗಿದ್ದಾರೆ. ಈ ನಡುವೆ ಎಂಗೇಜ್‌ಮೆಂಟ್ ಬಗ್ಗೆ ನೇರಾನೇರ ಪ್ರಶ್ನೆ ಎದುರಾಗಿದೆ.

ರಾಹುಲ್ ರವಿಂದ್ರನ್ ನಿರ್ದೇಶನದ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ 'ದಿ ಗರ್ಲ್ ಫ್ರೆಂಡ್' ಮುಂದಿನ ವಾರ ತೆರೆಗೆ ಬರ್ತಿದೆ. ಕನ್ನಡ ನಟ ದೀಕ್ಷಿತ್ ಶೆಟ್ಟಿ ಹೀರೊ ಆಗಿ ನಟಿಸಿರುವುದು ವಿಶೇಷ. ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿ 5 ಭಾಷೆಗಳಲ್ಲಿ ಸಿಬಿಮಾ ತೆರೆಗಪ್ಪಳಿಸಲಿದೆ. ಅಲ್ಲು ಅರವಿಂದ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮದ ಬಳಿಕ ಅಭಿಮಾನಿಗಳ ಜೊತೆ ಚಿತ್ರತಂಡ ಮಾತನಾಡಿದೆ.
ಈ ವೇಳೆ ಸಾಕಷ್ಟು ಪ್ರಶ್ನೆಗಳು ಎದುರಾಗಿದೆ. ಈ ನಡುವೆ ಒಬ್ಬರು ಮಾತನಾಡಿ "ಮೇಡಂ ನಿಮಗೂ ವಿಜಯ್ ದೇವರಕೊಂಡಗೂ ಎಂಗೇಜ್‌ಮೆಂಟ್ ಆಯ್ತಂತೆ.. ನಿಜವೇ, ಕ್ಲಾರಿಟಿ ಕೊಡಿ" ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ "ನಿಮಗೆ ಏನು ಅನಿಸುತ್ತದೆ?" ಎಂದು ಮರುಪ್ರಶ್ನೆ ಹಾಕಿದ್ದಾರೆ. ಕೂಡಲೇ ಎಲ್ಲರೂ "ಹೌದು" ಎಂದು ಕಿರುಚಿದ್ದಾರೆ. ನಮಗೆ ನಿಮ್ಮ ಉತ್ತರ ಬೇಕು ಎಂದಾಗ "ಯಾವಾಗ ಹೇಳಬೇಕೋ, ಆಗ ಹೇಳ್ತೀನಿ" ಎಂದು ನಕ್ಕಿದ್ದಾರೆ. ಪ್ಲೀಸ್ ಹೇಳಿ ಮೇಡಂ ಅಂದಿದ್ದಕ್ಕೆ "ನಿಮಗೆ ಏನು ಅನ್ನಿಸುತ್ತೋ ಅದೇ" ಎಂದು ರಶ್ಮಿಕಾ ಸುಳಿವು ಕೊಟ್ಟಿದ್ದಾರೆ.
ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ರಶ್ಮಿಕಾ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ರಕ್ಷಿತ್ ಶೆಟ್ಟಿ ಜೊತೆ ಪ್ರೀತಿಸಿ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡರು. 'ಚಲೋ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಗೀತಾಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದರು. ಬಳಿಕ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್‌ಮೆಂಟ್ ಮುರಿದು ಬಿತ್ತು. ಆ ನಂತರ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾದರು. ಬಾಲಿವುಡ್‌ಗೆ ಲಗ್ಗೆ ಇಟ್ಟು ಗೆದ್ದರು.
ವಿಜಯ್ ಹಾಗೂ ರಶ್ಮಿಕಾ ನಡುವೆ ಬಹಳ ಆತ್ಮೀಯ ಸ್ನೇಹ ಇದೆ. ಇಬ್ಬರೂ ಫ್ರೆಂಡ್, ಫ್ಯಾಮಿಲಿ ಜೊತೆ ಊರೂರು ಸುತ್ತುವುದು, ಹಬ್ಬ ಹರಿದಿನಗಳನ್ನು ಆಚರಿಸುತ್ತಿರುತ್ತಾರೆ. ಹಾಗಾಗಿ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಹರಡಿತ್ತು. ಆದರೆ ಈ ಬಗ್ಗೆ ಇಬ್ಬರೂ ಮಾತನಾಡಲೇ ಇಲ್ಲ. ಇದೆಲ್ಲದರ ನಡುವೆ ಮೂರು ವಾರಗಳ ಹಿಂದೆ ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು.
ರಶ್ಮಿಕಾ ಮಂದಣ್ಣ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಕಳೆದೊಂದು ವರ್ಷದಲ್ಲಿ ಆಕೆ ನಟಿಸಿದ 3 ಸಿನಿಮಾಗಳು ಸೂಪರ್ ಹಿಟ್ ಆಗಿದೆ. 'ಪುಷ್ಪ'-2 ಸಿನಿಮಾ 1700 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ, 'ಛಾವ' ಬರೋಬ್ಬರಿ 800 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ನಡುವೆ ಬಂದಿದ್ದ 'ಸಿಕಂದರ್' ಚಿತ್ರ ಸೋತಿತ್ತು. ಇತ್ತೀಚೆಗೆ ಬಂದ 'ಥಮ್ಮ' ಸಿನಿಮಾ ಕೂಡ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಚರ್ಚೆ ನಡೀತಿದೆ.


Click it and Unblock the Notifications











