ಭಾರತದಲ್ಲೇ ಬಹಳ ದುಬಾರಿ ನಟಿ ರಶ್ಮಿಕಾ ಮಂದಣ್ಣನಾ? ಆಕೆ ಹೇಳಿದ್ದೇನು?
ಬಹುನಿರೀಕ್ಷಿತ 'ಪುಷ್ಪ'-2 ಸಿನಿಮಾ ಬಿಡುಗಡೆಗೆ 5 ದಿನಗಳು ಮಾತ್ರ ಬಾಕಿಯಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. 12 ಸಾವಿರ ಸ್ಕ್ರೀನ್‌ಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಮತ್ತೊಮ್ಮೆ ಪುಷ್ಪರಾಜ್- ಶ್ರೀವಲ್ಲಿ ಜೋಡಿ ಮೋಡಿ ನೋಡಿ ಸಿನಿರಸಿಕರು ಕಾಯುವಂತಾಗಿದೆ.
ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಕುತೂಹಲ ಮೂಡಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಮೊದಲ ಭಾಗದಲ್ಲಿ ಗಳಿಸಿದ ಅಷ್ಟೂ ಹಣ ಸುರಿದು ಸೀಕ್ವೆಲ್ ಕಟ್ಟಿಕೊಡಲಾಗುತ್ತದೆ. ಅದಕ್ಕೆ ತಕ್ಕಂತೆ ಬಜೆಟ್, ಸಂಭಾವನೆ ಎಲ್ಲವೂ ಹೆಚ್ಚಾಗಿದೆ.

ನೀರಿನಂತೆ ಹಣ ಸುರಿದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 'ಪುಷ್ಪ'-2 ಸಿನಿಮಾ ನಿರ್ಮಿಸಿದೆ. ಐದಾರು ವರ್ಷಗಳ ಕಾಲ ಅಲ್ಲು ಅರ್ಜುನ್ ಇದೊಂದು ಚಿತ್ರಕ್ಕೆ ತಮ್ಮ ಸಮಯ ಮೀಸಲಿಟ್ಟಿದ್ದರು. ಹಾಗಾಗಿ ಭಾರೀ ಸಂಭಾವನೆಯನ್ನೇ ಸ್ಟೈಲಿಶ್ ಸ್ಟಾರ್ ಜೇಬಿಗಿಳಿಸಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ಸಿನಿಮಾ ದೊಡ್ಡದಾಗಿದೆ. ಅದೇ ರೀತಿ ಕಲಾವಿದರು, ತಂತ್ರಜ್ಞರ ಸಂಭಾವನೆ ಕೂಡ ಜಾಸ್ತಿ ಆಗಿದೆ.
ಅಲ್ಲು ಅರ್ಜುನ್ ರೀತಿಯಲ್ಲೇ ಶ್ರೀವಲ್ಲಿಯಾಗಿ ಮಿಂಚಿರುವ ರಶ್ಮಿಕಾಗೂ ಭರ್ಜರಿ ಸಂಭಾವನೆ ಸಿಕ್ಕಿದೆ. ಚಿತ್ರಕ್ಕಾಗಿ ಕೊಡಗಿನ ಕುವರಿ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿದೆ. 'ಪುಷ್ಪ'-2 ಬಳಿಕ ರಶ್ಮಿಕಾ ಭಾರತದ ಅತ್ಯಂತ ದುಬಾರಿ ನಟಿ ಎನ್ನುವ ಚರ್ಚೆ ಶುರುವಾಗಿದೆ. ಇದೇ ಪ್ರಶ್ನೆಯನ್ನು ಆಕೆಯ ಮುಂದಿಟ್ಟರೆ ಸುಳ್ಳು ಎಂದು ಹೇಳಿದ್ದಾರೆ.

ಸದ್ಯ ರಶ್ಮಿಕಾ 'ಪುಷ್ಪ'-2 ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಿರಿಕ್ ಬೆಡಗಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪತ್ರಕರ್ತರೊಬ್ಬರು ಮೇಡಂ 'ಪುಷ್ಪ'-2 ಬಳಿಕ ನೀವೇ ಅತ್ಯಂತ ದುಬಾರಿ ನಟಿ ಅಂತೆ ಹೌದಾ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ಮಂದಣ್ಣ "ಇಲ್ಲ ಅದನ್ನು ನಾನು ಒಪ್ಪಲ್ಲ. ಯಾಕಂದರೆ ಅದು ನಿಜವಲ್ಲ" ಎಂದು ಹೇಳಿದ್ದಾರೆ.
ರಶ್ಮಿಕಾ ನೇರವಾಗಿ 'ಪುಷ್ಪ'-2 ಚಿತ್ರದ ಸಂಭಾವನೆ ಬಗ್ಗೆ ಮಾತನಾಡಲಿಲ್ಲ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಾನಲ್ಲ, ನಾನು ಇನ್ನು ಆ ಮಟ್ಟಿಗೆ ಚಿತ್ರವೊಂದಕ್ಕೆ ಸಂಭಾವನೆ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ರಶ್ಮಿಕಾ ಹೇಳಿಕೆ ವೀಡಿಯೋ ವೈರಲ್ ಆಗುತ್ತಿದೆ. ಒಟ್ಟಾರೆ 'ಪುಷ್ಪ'-2 ಕ್ರೇಜ್‌ಗೆ ತಕ್ಕಂತೆ ಕಿರಿಕ್ ಬೆಡಗಿ ಸಂಭಾವನೆ ಪಡೆದಿರುವುದು ನಿಜ ಎನ್ನಲಾಗ್ತಿದೆ.
1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ 'ಪುಷ್ಪ'-2 ಸಿನಿಮಾ ತೆರೆಗೆ ತರಲಾಗುತ್ತಿದೆ. ಈಗಾಗಲೇ ಚಿತ್ರದ ಸೆನ್ಸಾರ್ ಮುಗಿದಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ 300 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇನ್ನು ಸಿನಿಮಾ 1000 ಕೋಟಿ ರೂ.ಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ.
3 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ 350 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೀಗ ಸೀಕ್ವೆಲ್ ಸರದಿ. ಕರ್ನಾಟಕದಲ್ಲಿ ಕೂಡ ದೊಡ್ಡದಾಗಿ ಸಿನಿಮಾ ತೆರೆಗೆ ಬರಲಿದೆ. ಕೆ. ಜಿ ರಸ್ತೆಯ 3 ಚಿತ್ರಮಂದಿರಗಳಲ್ಲಿ ಪುಷ್ಪರಾಜ್ ದರ್ಬಾರ್ ನಡೆಯಲಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಶೀಘ್ರದಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 6 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











