ರಶ್ಮಿಕಾ ಮಂದಣ್ಣರ ಹಾಡಿ ಹೊಗಳಿದ ಹಿರಿಯ ನಟಿಯರು
ಅತಿ ಕಡಿಮೆ ಅವಧಿಯಲ್ಲಿಯೇ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ರಂಗದಲ್ಲಿ ಹಲವು ಎತ್ತರಗಳನ್ನು ಏರಿದ್ದಾರೆ. ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ ಈ ನಟಿ ತೆಲುಗು, ತಮಿಳು ಈಗ ಹಿಂದಿಯಲ್ಲಿಯೂ ಮಿಂಚುತ್ತಿದ್ದಾರೆ.
ಹೋದ ಚಿತ್ರರಂಗಗಳೆಲ್ಲ ಹೊಗಳಿಕೆ ಪಡೆಯುತ್ತಿರುವ ರಶ್ಮಿಕಾ ಕಾಲಿಟ್ಟ ಚಿತ್ರರಂಗಗಳೆಲ್ಲ ನೆಚ್ಚಿನ ನಟಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಹಿಂದಿಯ ಹಿರಿಯ ನಟಿ ನೀನಾ ಗುಪ್ತಾ ರಶ್ಮಿಕಾರನ್ನು ಬಹುವಾಗಿ ಹೊಗಳಿದ್ದರು. ಇದೀಗ ದಕ್ಷಿಣ ಭಾರತ ಚಿತ್ರರಂಗದ ಇಬ್ಬರು ಹಿರಿಯ ನಟಿಯರು ರಶ್ಮಿಕಾರನ್ನು ಅಕ್ಷರಷಃ ಹಾಡಿ ಹೊಗಳಿದ್ದಾರೆ.
ತೆಲುಗಿನ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಹಾಗೂ ಊರ್ವಶಿ ಸಹ ನಟಿಸಿದ್ದಾರೆ. ಇಬ್ಬರೂ ಸೇರಿ ರಶ್ಮಿಕಾ ಮಂದಣ್ಣರೊಂದಿಗೆ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಇಬ್ಬರೂ ಹಿರಿಯ ನಟಿಯರು ರಶ್ಮಿಕಾರ ಕುರಿತು ಹಾಡು ಹಾಡಿದ್ದಾರೆ.

ತೆಲುಗು ಹಾಡಿಗೆ ಡಬ್‌ಸ್ಮ್ಯಾಷ್
ಹಳೆಯ ತೆಲುಗು ಸಿನಿಮಾದ ಹಾಡೊಂದಕ್ಕೆ ಡಬ್‌ಸ್ಮ್ಯಾಷ್ ಮಾಡಿದ್ದು, ಹಿರಿಯ ನಟಿ ಸಾವಿತ್ರಿ ನಟಿಸಿದ್ದ ಸಿನಿಮಾದ 'ನವರಾತಿರಿ, ನವರಾತಿರಿ ಹಾಡಿಗೆ ಡಬ್‌ಸ್ಮ್ಯಾಷ್ ಮಾಡಿದ್ದಾರೆ. ಹಾಡಿನಲ್ಲಿ ಮಗಳನ್ನು ಹೊಗಳುವ ಸಾಲುಗಳಿವೆ. ಆ ಸಾಲುಗಳನ್ನು ರಶ್ಮಿಕಾರನ್ನು ಕುರಿತು ಇಬ್ಬರು ನಟಿಯರು ಹಾಡಿದ್ದಾರೆ. ಇಬ್ಬರು ಹಿರಿಯ ನಟಿಯರ ನಡುವೆ ನಿಂತಿರುವ ರಶ್ಮಿಕಾ ಮುದ್ದಾಗಿ ನಗುತ್ತಾ ಹಿರಿಯ ನಟಿಯರ ಹೊಗಳಿಕೆಗಳನ್ನು ಆನಂದಿಸುತ್ತಿದ್ದಾರೆ.

ರಶ್ಮಿಕಾಳದ್ದು ಸ್ವಚ್ಛವಾದ ಹೃದಯ: ನೀನಾ
ರಶ್ಮಿಕಾ ಮಂದಣ್ಣ ಕೆಲವು ದಿನಗಳ ಹಿಂದಷ್ಟೆ ಬಾಲಿವುಡ್‌ನ 'ಗುಡ್‌ಬೈ' ಸಿನಿಮಾದಲ್ಲಿ ನಟಿಸಿ ಮರಳಿದ್ದಾರೆ. ಆ ಸಿನಿಮಾದಲ್ಲಿ ರಶ್ಮಿಕಾರ ಸಹನಟಿಯಾಗಿದ್ದ ನೀನಾ ಗುಪ್ತಾ ಸಹ ರಶ್ಮಿಕಾ ಮಂದಣ್ಣರನ್ನು ಬಹುವಾಗಿ ಹೊಗಳಿದ್ದರು. ''ಆಕೆ ಸಣ್ಣ ಮಗುವಿದ್ದಂತೆ. ಚಿತ್ರೀಕರಣದ ಮೊದಲ ದಿನದಿಂದಲೇ ನಾನು ಆಕೆಯನ್ನು ಬಹಳ ಇಷ್ಟ ಪಡಲು ಆರಂಭಿಸಿದೆ. ಆಕೆ ನಿಜವಾಗಿಯೂ ನನ್ನ ಮಗಳು ಎನ್ನಿಸಲು ಆರಂಭವಾಯ್ತು. ನನಗಂತೂ ಆಕೆ ಬಹಳ ಇಷ್ಟವಾಗತೊಡಗಿದಳು. ಆಕೆಯ ಜೊತೆಗೆ ಸಮಯ ಕಳೆದಷ್ಟು ಆಕೆಯ ಮೇಲಿನ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ ಆ ರೀತಿಯ ಹುಡುಗಿ ಆಕೆ. ರಶ್ಮಿಕಾಳದ್ದು ಸ್ವಚ್ಛವಾದ ಹೃದಯ'' ಎಂದಿದ್ದರು ನೀನಾ ಗುಪ್ತಾ.

ನಾನು ಮತ್ತು ರಶ್ಮಿಕಾ ಗೆಳೆಯರು: ನೀನಾ ಗುಪ್ತಾ
ಮುಂದುವರೆದು, ''ಆಕೆ ಬಹಳ ಒಳ್ಳೆಯ ನಟಿ. ಬಹಳ ವಿನಯವಂತೆ, ಸರಳ ಜೀವಿ. ನಾವಿಬ್ಬರು ಕೆಲವೇ ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದರೂ ಸಹ. ನಾವಿಬ್ಬರೂ ಬಹಳ ಕಾಲದಿಂದಲೇ ಪರಿಚಿತರೇನೋ ಎನ್ನುವಷ್ಟು ಹತ್ತಿರವಾದೆವು. ಚಿತ್ರೀಕರಣದ ಸಂದರ್ಭದಲ್ಲಿ ನಾವಿಬ್ಬರೂ ಪರಸ್ಪರ ಬಹಳ ಹತ್ತಿರವಾದೆವು. ಸೆಟ್‌ನಲ್ಲಿ ಆಕೆ ಮತ್ತು ನಾನು ಅದ್ಭುತವಾದ ಗೆಳೆಯರಂತೆ ಇದ್ದೆವು. ಆಕೆಗೆ ದೊಡ್ಡ ಯಶಸ್ಸು ಭವಿಷ್ಯದಲ್ಲಿ ಕಾದಿದೆ'' ಎಂದಿದ್ದರು ನೀನಾ.

ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ
ರಶ್ಮಿಕಾ ಮಂದಣ್ಣ ಈಗ ಬಹುಬೇಡಿಕೆಯ ನಟಿ, ಹಿಂದಿಯಲ್ಲಿ 'ಮಿಷನ್ ಮಜ್ನು' ಹಾಗೂ 'ಗುಡ್ ಬೈ' ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. 'ಗುಡ್‌ಬೈ' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. 'ಮಿಷನ್ ಮಜ್ನು' ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿದ್ದಾರೆ. ತೆಲುಗಿನ ಬಹುನಿರೀಕ್ಷಿತ 'ಪುಷ್ಪ' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸಿದ್ದು, ಸಿನಿಮಾದಲ್ಲಿ ರಶ್ಮಿಕಾರ ಲುಕ್ ಪೋಸ್ಟರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಇದೀಗ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದರ ಬಳಿಕ ಒಂದು ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ.


Click it and Unblock the Notifications











