'ಕಿರಿಕ್ ಪಾರ್ಟಿ' ನನ್ನ 2ನೇ ಸಿನಿಮಾ; ರಶ್ಮಿಕಾ ಮತ್ತೆ ಆ ವಿಷಯ ನೆನಪಿಸಿಕೊಂಡಿದ್ದೇಕೆ?
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೆಲವೊಮ್ಮೆ ತಮ್ಮ ಹೇಳಿಕೆಗಳಿಂದ ಇಕ್ಕಟ್ಟಿಗೆ ಸಿಲುಕಿರುವುದು ಇದೆ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಸಾನ್ವಿ ಆಗಿ ಮೋಡಿ ಮಾಡಿದ ಚೆಲುವೆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಇವತ್ತು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಟಿಯರಿಗೆ ಕೂಡ ಸೆಡ್ಡು ಹೊಡೆಯುತ್ತಿದ್ದಾರೆ.
'ಕಿರಿಕ್ ಪಾರ್ಟಿ' ರಶ್ಮಿಕಾ ನಟಿಸಿದ ಮೊದಲ ಸಿನಿಮಾ ಎನ್ನುವುದು ಎಲ್ಲರಿಗೂ ಗೊತ್ತೇಯಿದೆ. ಆದರೆ ಅದಕ್ಕೂ ಮುನ್ನ ಒಂದು ಚಿತ್ರಕ್ಕೆ ನಾಯಕಿಯಾಗಿ ಆಕೆ ಆಯ್ಕೆ ಆಗಿದ್ದರು. ಒಂದಷ್ಟು ದಿನ ಆ ಚಿತ್ರದ ತಯಾರಿಯಲ್ಲಿ ಭಾಗವಹಿಸಿದ್ದರು. ಆದರೆ ಸೆಟ್ಟೇರುವ ಮುನ್ನ ಆ ಸಿನಿಮಾ ನಿಂತು ಹೋಗಿತ್ತು.

ಸದ್ಯ ರಶ್ಮಿಕಾ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ವಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆ ಚಿತ್ರ ತೆರೆಗೆ ಬರಲಿದೆ. ಕನ್ನಡ ನಟ ದೀಕ್ಷಿತ್ ಶೆಟ್ಟಿ ಜೋಡಿಯಾಗಿ ರಶ್ಮಿಕಾ ನಟಿಸಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬರ್ತಿದೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ.
'ದಿ ಗರ್ಲ್‌ಫ್ರೆಂಡ್' ಚಿತ್ರದ ಪ್ರಚಾರದ ವೇಳೆ ತಮ್ಮ ಚಿತ್ರರಂಗ ಪ್ರವೇಶದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಮೊದಲ ದಿನ ಕ್ಯಾಮರಾ ಮುಂದೆ ನಿಂತಾಗ ಮುಂದೊಂದು ದಿನ ನೀವು ಈ ಹಂತಕ್ಕೆ ಬೆಳೆಯುತ್ತೀರಾ? ಎಂದು ಅನ್ನಿಸಿತ್ತಾ ಎನ್ನುವ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ. 'ಕಿರಿಕ್ ಪಾರ್ಟಿ' ಮುನ್ನ ನಾನು ಒಂದು ಸಿನಿಮಾದಲ್ಲಿ ನಟಿಸಬೇಕಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ರಶ್ಮಿಕಾ ಮಾತನಾಡಿ "ಕಿರಿಕ್ ಪಾರ್ಟಿಗೂ ಮುನ್ನ ನಾನು ಕ್ಯಾಮರಾ ಎದುರಿಸಿದ್ದೆ. 'ಗೆಳೆಯರೇ ಗೆಳತಿಯರೇ' ಎಂಬ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದೆ. ನಾಲ್ಕೈದು ತಿಂಗಳು ಆ ಚಿತ್ರದ ತಯಾರಿಯಲ್ಲಿ ಭಾಗವಹಿಸಿದ್ದೆ. ಆದರೆ ಅದು ಸೆಟ್ಟೇರಲಿಲ್ಲ. ಆ ಸಿನಿಮಾ ನಿಂತು ಹೋಯಿತು. ಶೂಟಿಂಗ್ ನಡೆಯಲಿಲ್ಲ, ಸಿದ್ಧತೆ ಹಂತದಲ್ಲೇ ನಿಂತು ಹೋಯಿತು" ಎಂದು ತಿಳಿಸಿದ್ದಾರೆ.
ನಟನೆಯನ್ನು ಯಾಕೆ ಅಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದನ್ನು ರಶ್ಮಿಕಾ ವಿವರಿಸಿದ್ದಾರೆ. "ಕಿರಿಕ್ ಪಾರ್ಟಿ ನನ್ನ ಎರಡನೇ ಸಿನಿಮಾ. ನಟಿಯಾಗುವುದು ಬಹಳ ಸುಲಭ ಅಂದುಕೊಂಡಿದ್ದೆ. ನಟಿಯಾದರೆ ಆ ಫೀಲ್ ಹೇಗಿರುತ್ತೋ ಎಂದುಕೊಂಡೆ ಚಿತ್ರರಂಗಕ್ಕೆ ಬಂದೆ. 'ಕಿರಿಕ್ ಪಾರ್ಟಿ' ಸಿನಿಮಾ ಬಿಡುಗಡೆ ಆಗಿತ್ತು. ಫ್ಯಾನ್ಸ್ ಶೋ ಮುಗಿಸಿ ಹೊರಗೆ ಬಂದೆವು. ಆಡಿಟೋರಿಯಂ ಪೂರ್ತಿ ನನ್ನ ಪಾತ್ರದ ಹೆಸರು ಸಾನ್ವಿ ಜೋಸೆಫ್ ಎಂದು ಕೂಗುತ್ತಿದ್ದರು. ಆ ಕ್ಷಣ ನನ್ನ ನಿರ್ಧಾರ ಬದಲಿಸಿಕೊಂಡಿದ್ದೆ. ಬೇರೆ ಯಾವುದರ ಕಡೆಗೂ ಗಮನ ಕೊಡದೇ ನಟನೆಯತ್ತ ದೃಷ್ಟಿ ನೆಟ್ಟಿದೆ. 'ಕಿರಿಕ್ ಪಾರ್ಟಿ' ಚಿತ್ರದ ಆ ಪಾತ್ರ, ಆ ಕ್ಷಣ ಮತ್ತೆ ಮತ್ತೆ ಬೇಕು ಎನಿಸಿ ಅದೇ ಹಂಬಲದಿಂದ ಹೊರಟು ಇಂದು ಇಲ್ಲಿದ್ದೀನಿ" ಎಂದಿದ್ದಾರೆ.
'ಕಿರಿಕ್ ಪಾರ್ಟಿ' ಬಳಿಕ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದ ರಶ್ಮಿಕಾ ಬಳಿ 'ಚಲೋ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ನಂತರ ಬಂದ 'ಗೀತಾಗೋವಿಂದಂ' ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಅದೃಷ್ಟ ಆಕೆಯ ಕೈ ಹಿಡಿಯಿತು. ಬಿಗ್‌ಬಿ ಜೊತೆಗೂ ತೆರೆ ಹಂಚಿಕೊಂಡರು. ಬಹಳ ಸಕ್ಸಸ್‌ಫುಲ್ ನಟಿ ಎನಿಸಿಕೊಂಡಿರುವ ರಶ್ಮಿಕಾ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ತೆಲುಗು ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಎಂಗೇಜ್‌ಮೆಂಟ್ ಗುಟ್ಟಾಗಿ ನಡೆದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.


Click it and Unblock the Notifications











