ಹಾಡು-ಸುತ್ತಾಡು ; ಹೇಗಿತ್ತು ಜಪಾನ್ ನಲ್ಲಿ ರಶ್ಮಿಕಾ ಮಂದಣ್ಣ ದಿನಚರಿ ?
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದವರು ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಹಿಂತಿರುಗಿ ನೋಡದ ಮಟ್ಟಿಗೆ ಯಶಸ್ಸಿನ ಪಯಣದತ್ತ ಸಾಗಿದ ರಶ್ಮಿಕಾ, ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿಯೇ ಬೇಡಿಕೆ ಸೃಷ್ಟಿಸಿಕೊಂಡವರು.
ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಮಿರ ಮಿರ ಮಿಂಚುತ್ತಿರುವ ರಶ್ಮಿಕಾ ನಟಿಸಿರುವ ಬಹುತೇಕ ಚಿತ್ರಗಳೆಲ್ಲವೂ ಬ್ಲಾಕ್ ಬಸ್ಟರ್ ಜತೆಗೆ ಸ್ಟಾರ್ ನಟರದ್ದೇ.

ಇಂಥಾ ರಶ್ಮಿಕಾ ಮಂದಣ್ಣ ಅವರನ್ನ ಆರಾಧಿಸುವವರು, ಭಾರತದಲ್ಲಿ ಅಗಣಿತ ಸಂಖ್ಯೆಯಲ್ಲಿ ಇದ್ದಾರೆ. ವಿಶೇಷ ಅಂದರೆ ಇದೀಗ ಈ ಅಭಿಮಾನದ ವ್ಯಾಪ್ತಿ ವಿಸ್ತಾರಗೊಂಡು, ಜಪಾನ್ ವರೆಗೆ ತಲುಪಿದೆ. ರಶ್ಮಿಕಾ ಮಂದಣ್ಣ ಅವರಿಗೆಯೇ ಅರಿವು ಇಲ್ಲದಂತೆ ಅವರ ಅಭಿಮಾನಿ ಬಳಗ ಜಪಾನ್ ನಲ್ಲಿ ಸೃಷ್ಟಿಯಾಗಿದೆ ಎಂಬ ವಿಚಾರ ನಿಮಗೆ ಈಗಾಗಲೇ ಗೊತ್ತೇ ಇರಬೇಕು.
ಯಾಕೆಂದರೆ.. ಕಳೆದ ತಿಂಗಳಷ್ಟೇ ರಶ್ಮಿಕಾ ಮಂದಣ್ಣ, ಜಪಾನ್‌ನ ಟೋಕಿಯೊದಲ್ಲಿ ನಡೆದ ಪ್ರತಿಷ್ಠಿತ 'ಕ್ರಂಚೈರೋಲ್ ಅನಿಮೆ ಅವಾರ್ಡ್ಸ್' 2024 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಸಿಕ್ಕ ಸ್ವಾಗತಕ್ಕೆ ಮೂಕವಿಸ್ಮಿತರಾಗಿದ್ದರು. ರಶ್ಮಿಕಾ ಮಂದಣ್ಣ ಅವರನ್ನ ಅವರ ಅಭಿಮಾನಿಗಳು ಬರ ಮಾಡಿಕೊಂಡ ವಿಡಿಯೋ ಆಗ ವೈರಲ್ ಆಗಿತ್ತು ಕೂಡ.
ಸದ್ಯದ ಸಮಾಚಾರ ಏನೆಂದರೆ ಜಪಾನ್ ನಲ್ಲಿ ಕಂಡ ಬದುಕಿನ ಚಿತ್ರಗಳನ್ನ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹರವಿಕೊಂಡು ಕುಂತಿದ್ದಾರೆ. ಜಪಾನ್ ನಲ್ಲಿ ಕಳೆದ ಸುಂದರ ದಿನಗಳನ್ನ ಮತ್ತು ಸುಮಧುರ ಕ್ಷಣಗಳನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಹಂಚಿಕೊಂಡ ಈ ವಿಡಿಯೋದಲ್ಲಿಅವರ ದಿನನಿತ್ಯದ ದಿನಚರಿ ಸೆರೆಯಾಗಿದೆ. ಜಪಾನ್ ನಲ್ಲಿ ಸಿಕ್ಕ ಆತ್ಮೀಯವಾದ ಸ್ವಾಗತ ಮತ್ತು ಅಭಿಮಾನದ ಬೇಡಿಕೆ ಮತ್ತು ಪ್ರದರ್ಶನದಿಂದ ಆರಂಭವಾಗುವ ವಿಡಿಯೋದಲ್ಲಿ, ರಶ್ಮಿಕಾ ಮಂದಣ್ಣ ತಮ್ಮ ಊಟ-ತಿಂಡಿಯಿಂದ ಹಿಡಿದು, ತಾವು ಉಳಿದುಕೊಂಡ ಸ್ಥಳದ ವಿಚಾರವನ್ನೂ ಎಳೆ ಎಳೆಯಾಗಿ ಹಂಚಿಕೊಂಡಿದ್ದಾರೆ.
ಇನ್ನೂ.. ಸೆಲೆಬ್ರೀಟಿ ಎಂದ ಮೇಲೆ ಅಕ್ಕ-ಪಕ್ಕ ಸಹಾಯಕರು ಇರಬೇಕು. ಇಲ್ಲಿಯೂ ಇವರೆಲ್ಲ ಇದ್ದಾರೆ. ರಶ್ಮಿಕಾ ಮಂದಣ್ಣ ಜೊತೆ ಜಪಾನ್‌ನ ಸುಂದರ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಹರಟೆ ಹೊಡೆದಿದ್ದಾರೆ. ರೆಸ್ಟೋರೆಂಟ್ ನಲ್ಲಿ ಹಾಡನ್ನ ಹಾಡಿ ಸಂಭ್ರಮಿಸಿದ್ದಾರೆ. ಗೊತ್ತಿಲ್ಲ..ಇವರಲ್ಲಿ ಕೆಲವರು ರಶ್ಮಿಕಾ ಅವರ ಸ್ನೇಹಿತರು ಇದ್ದರೂ ಇರಬಹುದು.
ಉಳಿದಂತೆ ಸುಖದ ಸುಪ್ಪತ್ತಿಗೆಯಲ್ಲಿರುವ ತಾರೆಯರು, ಕಣ್ತುಂಬ ನಿದ್ದೆ ಮಾಡ್ತಾರೆ ಅನ್ನುವುದು ಅನೇಕರಲ್ಲಿರುವ ಕಲ್ಪನೆ. ಬೇರೆ ಅವರ ವಿಚಾರ ಗೊತ್ತಿಲ್ಲ. ಆದರೆ.. ಜಪಾನ್‌ನಲ್ಲಂತೂ ರಶ್ಮಿಕಾಗೆ ನಿದ್ದೆ ಮಾಡುವ ಸೌಭಾಗ್ಯ ಸಿಕ್ಕಿಲ್ಲ. ಮಲಗಲು ಇವರ ಸಹಾಯಕರು/ಸ್ನೇಹಿತರು ಬಿಟ್ಟಿಲ್ಲ

ಇನ್ನೂ ಮೇಕಪ್‌ಗಾಗಿ ರಶ್ಮಿಕಾ ಮಂದಣ್ಣ, ಎಷ್ಟು ಗಂಟೆಗಳ ಕಾಲ ಕನ್ನಡಿ ಮುಂದೆ ಕುಳಿತಿದ್ದರು ಅನ್ನುವುದಕ್ಕೆ ಇಲ್ಲಿ ಉತ್ತರ ಇಲ್ಲ. ಆದರೆ..ರಶ್ಮಿಕಾ ಮೇಕಪ್ ಸಿಂಪಲ್ ಅಲ್ಲ ಅನ್ನುವುದು, ವಿಡಿಯೋ ನೋಡಿದರೆ ಮೇಲ್ನೋಟಕ್ಕೆ ಗೊತ್ತಾಗುತ್ತೆ. ಇದನ್ನ ಹೊರತು ಪಡಿಸಿದರೆ, ರಶ್ಮಿಕಾ ಮಂದಣ್ಣ ಜಪಾನ್‌ನಲ್ಲಿ ಕೆಲ ಫೋಟೋಗಳನ್ನ ಕ್ಲಿಕಿಸಿಕೊಂಡಿದ್ದರು. ಆ ಫೋಟೋ ಹಿಂದೆ ಇವರ ತಂಡ ಹಾಕಿರುವ ಶ್ರಮವನ್ನ ನೀವು ಈ ವಿಡಿಯೋದಲ್ಲಿ ನೋಡಬಹುದು
ಉಳಿದಂತೆ 'ಕ್ರಂಚೈರೋಲ್ ಅನಿಮೆ ಅವಾರ್ಡ್ಸ್' 2024ನ ಸುಂದರವಾದ ದೃಶ್ಯಾವಳಿಗಳೂ ಕೂಡ ಈ ವಿಡಿಯೋದಲ್ಲಿವೆ. ಒಟ್ನಲ್ಲಿ ಹಲವಾರು ವರ್ಷಗಳಿಂದ ನಾನು ಹೋಗಬೇಕೆಂದುಕೊಂಡಿದ್ದ ಸ್ಥಳ ಜಪಾನ್. ನನ್ನ ಬಾಲ್ಯದಿಂದಲೂ ನಾನು ಇದನ್ನು ಆಸೆ ಪಟ್ಟಿದ್ದೆ ಎಂದು ಹಿಂದೆ ಹೇಳಿದ್ದ ರಶ್ಮಿಕಾ, ತಮ್ಮ ಜಪಾನ್ ಪ್ರವಾಸದ ಪ್ರತಿಯೊಂದು ಕ್ಷಣಗಳನ್ನ ಸೆರೆಹಿಡಿದುಕೊಂಡು ಬಂದಿದ್ದಾರೆ. ಅಭಿಮಾನಿಗಳಿಗಾಗಿ ತಮ್ಮ ಜಪಾನ್ ಟ್ರಿಪ್‌ನ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ಅವರ ಯುಟ್ಯೂಬ್ ಮೂಲಕ ಜಪಾನ್ ಜಗತ್ತು ಕಣ್ತುಂಬಿಕೊಳ್ಳಲು ಇವರ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.


Click it and Unblock the Notifications











