"ಮತ್ತದೇ ಹುಚ್ಚಾಟ.. ಅಂತಹವರಿಗೆ ಕ್ಷಮಿಸಲಾಗದ ಶಿಕ್ಷೆ ನೀಡಬೇಕು"; ರಶ್ಮಿಕಾ ಮಂದಣ್ಣ ಅಸಮಾಧಾನ
ಕನ್ನಡ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಇತ್ತೀಚೆಗೆ ಆಕೆಯ ಮದುವೆ ಬಗ್ಗೆ ಭಾರೀ ಚರ್ಚೆ ನಡೀತು. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲೇ ಇಲ್ಲ. ಎರಡು ವರ್ಷಗಳ ಹಿಂದೆ ರಶ್ಮಿಕಾ ಡೀಪ್‌ಫೇಕ್ ವೀಡಿಯೋ ವೈರಲ್ ಆಗಿದ್ದು ಗೊತ್ತೇಯಿದೆ. ಈ ಬಗ್ಗೆ ಪ್ರಧಾನಿ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದರು.
ಸದ್ಯ AI ಜಮಾನದಲ್ಲಿ ಯಾವುದು ಸತ್ಯ, ಯಾವುದು ಫೇಕ್ ಎಂದು ಹೇಳುವುದು ಕಷ್ಟ ಎನ್ನುವಂತಾಗಿದೆ. ಕಿಡಿಗೇಡಿಗಳು ಮತ್ತೆ ರಶ್ಮಿಕಾ ಮಂದಣ್ಣ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಆಕೆಯ ಫೇಕ್ AI ಫೋಟೊಗಳನ್ನು ಕ್ರಿಯೇಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರಶ್ಮಿಕಾ ಈ ಬಗ್ಗೆ CyberDost I4C ಗಮನಕ್ಕೆ ತಂದಿದ್ದಾರೆ. ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

AI ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಸೆಲೆಬ್ರೆಟಿಗಳು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟಿಯರಾದ ಕೀರ್ತಿ ಸುರೇಶ್ ಹಾಗೂ ಗಿರಿಜಾ ಓಕ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ತಮ್ಮ ಫೋಟೊ ಮಾರ್ಪ್ ಮಾಡಿ ವೈರಲ್ ಮಾಡಿದ್ದ ಬಗ್ಗೆ ಕೀರ್ತಿ ಬೇಸರ ವ್ಯಕ್ತಪಡಿಸಿದ್ದರು. ಇದೀಗ ರಶ್ಮಿಕಾ ಮಂದಣ್ಣ ಕೂಡ ನೋವು ತೋಡಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದ ಆಕೆಯ ಫೇಕ್ ಫೋಟೊಗಳನ್ನು ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡುತ್ತಿದ್ದಾರೆ. ಅದು ಆಕೆಯ ಗಮನಕ್ಕೆ ಬಂದಿದೆ.
ರಶ್ಮಿಕಾ ಟ್ವೀಟ್ ಮಾಡಿ "ಸತ್ಯವನ್ನು ಸೃಷ್ಟಿಸಲು ಸಾಧ್ಯವಾದಾಗ, ವಿವೇಚನೆಯು ನಮ್ಮ ದೊಡ್ಡ ರಕ್ಷಣೆಯಾಗುತ್ತದೆ. ಪ್ರಗತಿಗೆ AI ಒಂದು ಶಕ್ತಿಯಾಗಿದೆ. ಆದರೆ ಅಶ್ಲೀಲತೆಯನ್ನು ಸೃಷ್ಟಿಸಲು ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಲು ಅದರ ದುರುಪಯೋಗವು ಕೆಲವರಲ್ಲಿ ಆಳವಾದ ನೈತಿಕ ಕುಸಿತವನ್ನು ಸೂಚಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.
ಇಂತಹ ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು ಎಂದು ರಶ್ಮಿಕಾ ಆಗ್ರಹಿಸಿದ್ದಾರೆ. "ನೆನಪಿಡಿ, ಇನ್ನು ಮುಂದೆ ಇಂಟರ್ನೆಟ್‌ನಲ್ಲಿ ಬರೋದೆಲ್ಲಾ ನಿಜವಲ್ಲ. ಅದು ಯಾವುದನ್ನಾದರೂ ಕಟ್ಟುಕಥೆ ಮಾಡಬಹುದಾದ ಕ್ಯಾನ್ವಾಸ್ ಆಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳುವ ಬದಲು ಘನತೆ ಮತ್ತು ಪ್ರಗತಿಪರ ಸಮಾಜವನ್ನು ನಿರ್ಮಿಸಲು AI ಅನ್ನು ಬಳಸೋಣ. ಅಜಾಗರೂಕತೆಯ ಬದಲು ಜವಾಬ್ದಾರಿಯನ್ನು ಆರಿಸಿಕೊಳ್ಳಿ. ಜನರು ಮನುಷ್ಯರಂತೆ ವರ್ತಿಸಲು ಸಾಧ್ಯವಾಗದಿದ್ದರೆ, ಅವರಿಗೆ ಕಠಿಣ ಮತ್ತು ಕ್ಷಮಿಸಲಾಗದ ಶಿಕ್ಷೆಯನ್ನು ನೀಡಬೇಕು ಎಂದು CyberDost I4C ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಡೀಪ್‌ಫೇಕ್ ವೀಡಿಯೋ, AI ಮಾರ್ಪ್ ಫೋಟೊಗಳು ಹೊಸದೇನು ಅಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಇಂತಹ ಸಾಕಷ್ಟು ಕಂಟೆಂಟ್ ವೈರಲ್ ಆಗುತ್ತಿರುತ್ತದೆ. ರಶ್ಮಿಕಾ ಮಂದಣ್ಣ ತಮ್ಮ ಡೀಪ್‌ಫೇಕ್ ವೀಡಿಯೋ ಬಗ್ಗೆ ಮಾತನಾಡುವ ಮುನ್ನ ಅಶ್ಲೀಲವಾಗಿ ಕೆಲ ನಟಿಯರ ಫೇಕ್ ಫೋಟೊ, ವೀಡಿಯೋಗಳನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದರು. ಇಂದಿಗೂ ಮಾಡುತ್ತಲೇ ಇದ್ದಾರೆ. ಇಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದು ಸೈಬರ್ ಪೊಲೀಸರಿಗೆ ನಿಜಕ್ಕೂ ಸವಾಲಿನ ಕೆಲಸ.
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವೀಡಿಯೋ ಸಂಬಂಧ ಆಂಧ್ರ ಪ್ರದೇಶದ 24 ವರ್ಷದ ಬಿ.ಟೆಕ್ ಪದವೀಧರನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ತನ್ನ ಫ್ಯಾನ್‌ಪೇಜ್ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದ. ಗುಂಟೂರು ಮೂಲದ ಬಂಧಿತ ಆರೋಪಿ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿ ಎಂದು ವಿಚಾರಣೆ ವೇಳೆ ಗೊತ್ತಾಗಿತ್ತು.
ಸದ್ಯ ರಶ್ಮಿಕಾ 'ಕಾಕ್‌ಟೇಲ್- 2' ಚಿತ್ರದಲ್ಲಿ ನಟಿಸ್ತಿದ್ದಾರೆ. ರಶ್ಮಿಕಾ ನಟನೆಯ 'ಥಮ್ಮಾ' ಹಾಗೂ 'ದಿ ಗರ್ಲ್‌ಫ್ರೆಂಡ್' ಚಿತ್ರಗಳು ಇತ್ತೀಚೆಗೆ ತೆರೆಕಂಡಿತ್ತು. ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಈ ವಾರ ಎರಡೂ ಸಿನಿಮಾಗಳು ಓಟಿಟಿಗೆ ಬರ್ತಿವೆ.


Click it and Unblock the Notifications











