ಮೆಗಾಸ್ಟಾರ್ ಚಿರಂಜೀವಿ 'ಆಚಾರ್ಯ' ಸಿನಿಮಾದಲ್ಲಿ ಕನ್ನಡದ ನಟಿ?
ಟಾಲಿವುಡ್ ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಸಿನಿಮಾ ಎಂದರೆ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರ. ಪ್ರತಿ ಹಂತದಲ್ಲೂ 'ಆಚಾರ್ಯ' ಸಿನಿಮಾ ಸದ್ದು ಮಾಡುತ್ತಲೇ ಇದೆ. ಸಿನಿಮಾದಿಂದ ನಟಿ ತ್ರಿಷಾ ಹೊರ ನಡೆದ ಬಳಿಕ ನಾಯಕಿ ವಿಚಾರವಾಗಿ 'ಆಚಾರ್ಯ' ಸಿನಿಮಾ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿತ್ತು.
ಇದೀಗ ನಟ ಚಿರಂಜೀವಿ ಜೊತೆ ಕಾಜಲ್ ಅಗರವಾಲ್ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ಜೊತೆಗೆ ಸಿನಿಮಾದಿಂದ ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸಹ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ರಶ್ಮಿಕಾ ಅಭಿನಯಿಸುತ್ತಿದ್ದಾರಂತೆ. ವಿಶೇಷ ಅಂದರೆ ರಶ್ಮಿಕಾ, ರಾಮ್ ಚರಣ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆಚಾರ್ಯ ಸಿನಿಮಾದಲ್ಲಿ ನಟ ರಾಮ್ ಚರಣ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಆಕ್ಷನ್ ದೃಶ್ಯದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ಗೆ ನಾಯಕಿಯ ಹುಡುಕಾಟದಲ್ಲಿರುವ ಚಿತ್ರತಂಡ ರಶ್ಮಿಕಾರನ್ನ ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ.

ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಸ್ಟೈಲಿಶ್ ಸ್ಟಾರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ 'ಆಚಾರ್ಯ' ಸಿನಿಮಾದ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಒಂದು ವೇಳೆ ರಶ್ಮಿಕಾ ಆಚಾರ್ಯ ಸಿನಿಮಾಗೆ ಆಯ್ಕೆಯಾದರೆ, ಮೊದಲ ಬಾರಿಗೆ ಚಿರಂಜೀವಿ ಮತ್ತು ರಾಮ್ ಚರಣ್ ಇಬ್ಬರು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.


Click it and Unblock the Notifications











