ಜಪಾನ್ ದೇಶಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿ; ಭರ್ಜರಿ ಸ್ವಾಗತ ಕಂಡು ಕಿರಿಕ್ ಬೆಡಗಿ ಶಾಕ್
ಸೌತ್ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲೂ ರಶ್ಮಿಕಾ ಮಂದಣ್ಣ ಕ್ರೇಜ್ ಜೋರಾಗಿದೆ. ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆಗೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ಕೊಡಗಿನ ಕುವರಿ. ಇಲ್ಲಿ ರೋಶ್ ಹವಾ ಮುಗಿಯಲ್ಲ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಿರಿಕ್ ಬೆಡಗಿ ಮಿಂಚುತ್ತಿದ್ದಾರೆ.
'ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿಯಾಗಿ ನಟಿಸಿ ರಶ್ಮಿಕಾ ಮಂದಣ್ಣ ವಿದೇಶಗಳಲ್ಲಿ ಕೂಡ ಕ್ರೇಜ್ ಸಂಪಾದಿಸಿದ್ದಾರೆ. ಜಪಾನ್‌ನಲ್ಲಿ ಸಹ ಆಕೆಗೆ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಇತ್ತೀಚೆಗೆ ಸೌತ್ ಸಿನಿಮಾಗಳು ಅಲ್ಲಿ ಭಾರೀ ಸದ್ದು ಮಾಡುತ್ತಿರುವುದು ಗೊತ್ತೇಯಿದೆ. ಇನ್ನು ಜಪಾನ್‌ನ ಟಾಪ್ ಫ್ಯಾಶನ್ ಬ್ರಾಂಡ್ 'ಒನಿಟ್ಸುಕಾ ಟೈಗರ್'ಗೆ ಕಳೆದ ವರ್ಷ ರಶ್ಮಿಕಾ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದರು. ಈ ಬ್ರ್ಯಾಂಡ್‌ಗೆ ಸಂಬಂಧಿಸಿದ ಅನೇಕ ಪ್ರಮೋಷನ್ ಫ್ಯಾಷನ್ ಈವೆಂಟ್‌ಗಳಲ್ಲಿ ಭಾಗವಹಿಸುವ ಮೂಲಕ ರಶ್ಮಿಕಾ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಇಟಲಿಯಲ್ಲಿ ನಡೆದ ಫ್ಯಾಷನ್ ಈವೆಂಟ್‌ಗೆ ಕೊಡಗಿನ ಬೆಡಗಿ ಅತಿಥಿಯಾಗಿ ಹೋಗಿದ್ದು ಗೊತ್ತೇಯಿದೆ.

ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 'ಕ್ರಂಚೈರೋಲ್ ಅನಿಮೆ ಅವಾರ್ಡ್ಸ್' 2024 ರಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ. ಈ ಕಾರ್ಯಕ್ರಮಕ್ಕಾಗಿ ರಶ್ಮಿಕಾ ಜಪಾನ್‌ಗೆ ತೆರಳಿದ್ದರು. ಆಕೆ ಟೋಕಿಯೋ ವಿಮಾನ ನಿಲ್ದಾಣದಲ್ಲಿ ಹೋಗಿ ಇಳಿದ ತಕ್ಷಣ, ಅಲ್ಲಿನ ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿದೆ. ಜಪಾನ್‌ನಲ್ಲಿರುವ ರಶ್ಮಿಕಾ ಅಭಿಮಾನಿಗಳು ಆಕೆಯ ಫೋಟೋಗಳಿಂದ ವಿನ್ಯಾಸಗೊಳಿಸಲಾದ ಪೋಸ್ಟರ್‌ಗಳನ್ನು ತೋರಿಸಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಜಪಾನ್ ಅಭಿಮಾನಿಗಳು ತಮ್ಮ ಮೇಲೆ ತೋರಿದ ಪ್ರೀತಿಗೆ ರಶ್ಮಿಕಾ ಸಂತಸ ಮಂದಣ್ಣ ವ್ಯಕ್ತಪಡಿಸಿದ್ದಾರೆ. ಕೆಲಹೊತ್ತು ಅದನ್ನು ನೋಡುತ್ತಾ ನಿಂತು ಬಿಟ್ಟಿದ್ದಾರೆ. ಬಳಿಕ ಥ್ಯಾಂಕ್ಸ್ ಎಂದು ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಅವರು ಕೊಟ್ಟ ಬೊಕ್ಕೆ, ಪೋಸ್ಟರ್ಸ್ ಪಡೆದು ಖುಷಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದು (ಮಾರ್ಚ್ 2) ಟೋಕಿಯೊದಲ್ಲಿ 'ಕ್ರಂಚೈರೋಲ್ ಅನಿಮೆ' ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇತ್ತೀಚೆಗೆ 'ಕೆಜಿಎಫ್' ಸರಣಿ ಚಿತ್ರಗಳು, 'RRR' ಹಾಗೂ 'ರಂಗಸ್ಥಳಂ' ಸಿನಿಮಾಗಳು ಜಪಾನ್ ದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿತ್ತು. ದಶಕಗಳ ಹಿಂದೆ ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ಅಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ರಾಜಮೌಳಿ ನಿರ್ದೇಶನದ 'RRR' ಆ ದಾಖಲೆ ಮುರಿದು ಸಂಚಲನ ಸೃಷ್ಟಿಸಿತ್ತು. ತಾರಕ್- ರಾಮ್‌ಚರಣ್‌ಗೂ ಜಪಾನ್‌ನಲ್ಲಿ ದೊಡ್ಡ ಅಭಿಮಾನಿ ಬಳಗವಿದೆ.
ರಶ್ಮಿಕಾ ಮಂದಣ್ಣ ಸಿನಿಮಾಗಳ ವಿಚಾರಕ್ಕೆ ಬಂದರೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಅನಿಮಲ್' ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗದಷ್ಟು ಪುರುಸೊತ್ತಿಲ್ಲದೇ ನಟಿಸುತ್ತಿದ್ದಾರೆ. ಈ ವಿಚಾರವನ್ನು ಇತ್ತೀಚೆಗೆ ಆಕೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಅಲ್ಲು ಅರ್ಜುನ್ ಜೊತೆ 'ಪುಷ್ಪ'-2 ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಮತ್ತೆ ಶ್ರೀವಲ್ಲಿಯಾಗಿ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಧನುಷ್- ನಾಗಾರ್ಜುನ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ.
ರಶ್ಮಿಕಾ ಮಂದಣ್ಣ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. 'ರೈನ್‌ಬೋ' ಎನ್ನುವ ದ್ವಿಭಾಷಾ ಸಿನಿಮಾವೊಂದು ಕೈಯಲ್ಲಿದೆ. 'ದಿ ಗರ್ಲ್‌ಫ್ರೆಂಡ್' ಎನ್ನುವ ಮತ್ತೊಂದು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ದಿಯಾ' ಸಿನಿಮಾ ಖ್ಯಾತಿಯ ದೀಕ್ಷಿತ್ ಈ ಚಿತ್ರದಲ್ಲಿ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











