₹35 ಲಕ್ಷದ ದುಬಾರಿ ಗಿಫ್ಟ್ ಕೊಟ್ಟು ರವಿ ಬಸ್ರೂರು ಕಾಲಿಗೆ ಬಿದ್ದ ತೆಲುಗು ನಟ ವಿಶ್ವಕ್ ಸೇನ್
ಕನ್ನಡದ ಪ್ರತಿಭೆ ರವಿ ಬಸ್ರೂರು ಈಗ ಭಾರತೀಯ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರ್ತಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಸಂಗೀತದಿಂದ ಸಿನಿಮಾಗಳನ್ನು ಗೆಲ್ಲಿಸುತ್ತಿದ್ದಾರೆ. ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ರವಿ ಟ್ಯೂನ್‌ಗಳಿಗಾಗಿ ಕಾಯುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಕೂಡ ಕುಂದಾಪುರದ ಪ್ರತಿಭೆಗೆ ಬಹುಪರಾಕ್ ಸಿಗ್ತಿದೆ. ರವಿ ಬಸ್ರೂರು ಸಂಗೀತ ಮೆಚ್ಚಿ ತೆಲುಗು ನಟ ವಿಶ್ವಕ್ ಸೇನ್ ದುಬಾರಿ ಉಡುಗೊರೆ ಕೊಟ್ಟಿದ್ದಾರೆ.
ವಿಶ್ವಕ್ ಸೇನ್ ನಟನೆಯ 'ಕಲ್ಟ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ನಡೀತು. ವೇದಿಕೆಯಲ್ಲಿ ಇಡೀ ಚಿತ್ರತಂಡ ಹಾಜರಿತ್ತು. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತದ ಮೇಲೆ ರವಿ ಶ್ರದ್ಧೆ, ಪ್ರೀತಿ ಕಂಡು ವಿಶ್ವಕ್ ಸೇನ್ ಅಚ್ಚರಿಗೊಂಡಿದ್ದಾರೆ. ಹಾಗಾಗಿ ಪ್ರೀತಿಯಿಂದ ರೋಲೆಕ್ಸ್ ಗೋಲ್ಡ್ ವಾಚ್ ಉಡುಗೊರೆ ನೀಡಿದ್ದಾರೆ. ತಮ್ಮ ಪ್ರತಿಭೆ ಗುರ್ತಿಸಿದ ನಟನಿಗೆ ರವಿ ಧನ್ಯವಾದ ತಿಳಿಸಿದ್ದಾರೆ. ನಾನು ಎಂದೆಂದೂ ಆಬಾರಿ ಎಂದಿದ್ದಾರೆ.

ನಟ ವಿಶ್ವಕ್ ಸೇನ್ ವೇದಿಕೆ ಏರಿ ಇಡೀ ಚಿತ್ರತಂಡದ ಬಗ್ಗೆ ಮಾತನಾಡಿದ್ದಾರೆ. ಕೊನೆಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಸರದಿ ಬಂದಾಗ ಗಿಫ್ಟ್ ಕೊಟ್ಟು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. 'ಕಲ್ಟ್' ಚಿತ್ರಕ್ಕೆ ಸಂಭಾಷಣೆಕಾರ ತರುಣ್ ಭಾಸ್ಕರ್ ಹಾಗೂ ಸಂಗೀತ ನಿರ್ದೇಶಕ 2 ಕಣ್ಣುಗಳು. ನನ್ನ ಸಿನಿಮಾಗಳಿಗೆ ಒಳ್ಳೆ ಸಂಗೀತ ಇರಬೇಕು ಅಂದುಕೊಳ್ತಿದ್ದೆ. ಆದರೆ ಈ ಚಿತ್ರದ ಸಂಗೀತ ಕೇಳಿ ನಾನು ಕಳೆದುಹೋದೆ. ನಿಮಗೆ ಗಿಫ್ಟ್ ಕೊಡಬೇಕು. ನಾನು 2 ವರ್ಷ ಕಾದು ತರಿಸಿದ ವಾಚ್ ಇದು ಎಂದು ರೋಲೆಕ್ಸ್ ವಾಚ್ ರವಿ ಬಸ್ರೂರು ಕೈಗೆ ತೊಡಿಸಿದ್ದಾರೆ.
ವಿಶ್ವಕ್ ಸೇನ್ ಪ್ರೀತಿಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂತಸಗೊಂಡರು. ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. "25 ವರ್ಷಗಳಿಂದ ನಾನು ಕೆಲಸ ಮಾಡ್ತಿದ್ದೀನಿ. ಮೊದಲ ಬಾರಿಗೆ ನನ್ನ ಆತ್ಮವನ್ನು ನನ್ನೊಳಗಿನ ಕೆಲಸವನ್ನು ವಿಶ್ವಕ್ ಸೇನ್ ಗೌರವಿಸಿದ್ದಾರೆ. ಇದು ಬರೀ ವಾಚ್ ಮಾತ್ರವಲ್ಲ. ಎಲ್ಲಾ ಸಂಗೀತ ನಿರ್ದೇಶಕರಿಗೆ ಸಲ್ಲಿಸಿದ ಗೌರವ. ಜೀವನವೇ ಬೇಡ ಎಂದು 2 ಬಾರಿ ಸಾಯಲು ನಿರ್ಧರಿಸಿದ್ದೆ. 2ನೇ ಬಾರಿ ಒಬ್ಬ ವ್ಯಕ್ತಿ ನನ್ನನ್ನು ರಕ್ಷಿಸಿದ್ದರು. ಅಂದು ಕೆಲಸ ಮಾಡಲು ಒಂದು ಕೀಬೋರ್ಡ್ ಬೇಕು ಎಂದು ಕೇಳಿದ್ದೆ. ಆ ವ್ಯಕ್ತಿ ನನ್ನ ಮಾತು ಕೇಳಿ 35 ಸಾವಿರ ಕೊಟ್ಟು ಸಹಾಯ ಮಾಡಿದ್ದರು. ಅವರ ಹೆಸರು, ರವಿ. ನನ್ನ ಹೆಸರಲ್ಲ. ಆ ದಿನ ನನ್ನ ಹೆಸರು ಬದಲಿಸಿಕೊಂಡೆ" ಎಂದು ರವಿಬಸ್ರೂರು ನೆನಪಿಸಿಕೊಂಡಿದ್ದಾರೆ.
ಅಂದು ನನ್ನ ಮಾತು ಕೇಳಿ ಕೀಬೋರ್ಡ್ ಖರೀದಿಸಲು ಆ ರವಿ ಹಣದ ಸಹಾಯ ಮಾಡಿದ್ದರು. ಇವತ್ತು ನಟ ವಿಶ್ವಕ್ ಸೇನ್ ನನ್ನ ಪ್ರತಿಭೆ ಗುರ್ತಿಸಿದ್ದಾರೆ. ಈ ಇಬ್ಬರು ವ್ಯಕ್ತಿಗಳನ್ನು ನಾನು ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ ಎಂದು ರವಿ ಬಸ್ರೂರು ವಿವರಿಸಿದ್ದಾರೆ. ವಿಶ್ವಕ್ ಸೇನ್ ಕಥೆ, ಚಿತ್ರಕಥೆ ಬರೆದು 'ಕಲ್ಟ್' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. 'KGF' ಸರಣಿ ಬಳಿಕ ದೊಡ್ಡ ದೊಡ್ಡ ಸಿನಿಮಾಗಳಿಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿ ಗೆದ್ದಿದ್ದಾರೆ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೂ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಜೋಡಿಯ 'ಡ್ರ್ಯಾಗನ್' ಚಿತ್ರದಲ್ಲಿ ರವಿ ಮ್ಯೂಸಿಕ್ ಸದ್ದು ಮಾಡಲಿದೆ. ಇನ್ನುಳಿದಂತೆ ಮಲಯಾಳಂನ 'ಟಿಕಿ ಟಕ', 'ಕಾಲಿಯಾನ್' ಸೇರಿದಂತೆ ಹಲವು ಸಿನಿಮಾಗಳಿಗೆ ರವಿ ಬಸ್ರೂರು ಟ್ಯೂನ್ ಹಾಕ್ತಿದ್ದಾರೆ.


Click it and Unblock the Notifications











