12 ದಿನಗಳಲ್ಲಿ 96 ಕೋಟಿ ಬಾಚಿದ ಶ್ರೀಲೀಲಾ ನಟನೆಯ 2ನೇ ತೆಲುಗು ಚಿತ್ರ!
ಕಿಸ್ ಎಂಬ ಕನ್ನಡ ಚಿತ್ರದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ. ಕಳೆದ ವರ್ಷ ಬಿಡುಗಡೆಗೊಂಡ ಪೆಳ್ಳಿ ಸಂದಡಿ ಎಂಬ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ ಶ್ರೀಲೀಲಾ ಮೊದಲ ಚಿತ್ರದಲ್ಲಿಯೇ ಸಿನಿ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಶ್ರೀಲೀಲಾ ಡಾನ್ಸ್, ಎಕ್ಸ್‌ಪ್ರೆಷನ್ ಹಾಗೂ ನಟನೆಗೆ ಮನ ಸೋತಿದ್ದ ತೆಲುಗು ಸಿನಿ ಪ್ರೇಕ್ಷಕರು ಈಕೆಗೆ ಮತ್ತಷ್ಟು ಅವಕಾಶಗಳು ಲಭಿಸಲಿವೆ ಎಂದು ಊಹಿಸಿದ್ದರು.
ಪ್ರೇಕ್ಷಕರ ಈ ಊಹೆ ಈಗ ನಿಜವಾಗಿದ್ದು ಶ್ರೀಲೀಲಾ ಸದ್ಯ ಕೈನಲ್ಲಿ ಏಳೆಂಟು ಸಿನಿಮಾಗಳನ್ನು ಹೊಂದಿದ್ದಾರೆ. ಇನ್ನು ಶ್ರೀಲೀಲಾ ನಟನೆಯ ಎರಡನೇ ತೆಲುಗು ಚಿತ್ರ ಧಮಾಕಾ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಗೊಂಡಿದ್ದು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಹೌದು, ರವಿತೇಜಾ ಹಾಗೂ ಶ್ರೀಲೀಲಾ ನಟನೆಯ ಧಮಾಕಾ ಚಿತ್ರ 12 ದಿನಗಳಲ್ಲಿ 96 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಹೀಗೆ ವೇಗವಾಗಿ ನೂರು ಕೋಟಿ ಕ್ಲಬ್ ಸೇರುತ್ತಿರುವ ಈ ಚಿತ್ರದಲ್ಲಿ ಅಂತಹ ಕಂಟೆಂಟ್ ಇದೆಯಾ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಈ ಚಿತ್ರದಲ್ಲಿ ಮಹಾ ಕಂಟೆಂಟ್ ಏನೂ ಇಲ್ಲ. ಚಿತ್ರ ಪಕ್ಕಾ ತೆಲುಗು ಮಸಾಲ ಕಥೆಯನ್ನು ಹೊಂದಿದ್ದು, ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಆಗಿದೆ. ಇಂತಹ ಮನರಂಜನೆ ಇರುವ ತೆಲುಗು ಕಮರ್ಷಿಯಲ್ ಚಿತ್ರವನ್ನು ವೀಕ್ಷಿಸಿ ಹಲವು ವರ್ಷಗಳೇ ಕಳೆದಿದ್ದ ಕಾರಣ ತೆಲುಗು ಸಿನಿ ರಸಿಕರು ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಇನ್ನು ವಿಶೇಷವಾಗಿ ಚಿತ್ರದ ನಟ ರವಿತೇಜಾ ಹಾಗೂ ನಟಿ ಶ್ರೀಲೀಲಾ ಹಾಡುಗಳಲ್ಲಿ ಸಿಕ್ಕಾಪಟ್ಟೆ ಜೋಶ್‌ನಿಂದ ಹೆಜ್ಜೆ ಹಾಕಿರುವುದೂ ಸಹ ಜನರು ಥಿಯೇಟರ್‌ಗೆ ಬರಲು ಕಾರಣ ಎನ್ನಬಹುದು. ಹೌದು, ಚಿತ್ರದಲ್ಲಿ ಕಾಮಿಡಿ ಜೊತೆ ಹಾಡುಗಳ ಸ್ಟೆಪ್ಸ್ ಸಖರ್ ಕ್ಲಿಕ್ ಆಗಿವೆ. ಶ್ರೀಲೀಲಾ ಡಾನ್ಸ್‌ಗೆ ಈಕೆಗೆ ಕಾಂಪಿಟಿಷನ್ ನೀಡುವ ಯಾವ ನಟಿಯೂ ಇಂಡಸ್ಟ್ರಿಯಲ್ಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಇನ್ನು ಚಿತ್ರತಂಡ ಕೂಡ ಚಿತ್ರದ ಯಾವುದೇ ಹಾಡಿನ ಒಂದೇ ಒಂದು ವಿಡಿಯೊವನ್ನೂ ಬಿಟ್ಟುಕೊಟ್ಟಿಲ್ಲ.


Click it and Unblock the Notifications











