Yash- Ravi Teja: ಯಶ್ ಕುರಿತು ರವಿತೇಜಾ ಉಡಾಫೆ ಮಾತು: ರಾಕಿಭಾಯ್ ಫ್ಯಾನ್ಸ್ ಕೆಂಡಾಮಂಡಲ
ಸ್ಟಾರ್ ನಟ-ನಟಿಯರು ಸಂದರ್ಶನಗಳಲ್ಲಿ ಮಾತನಾಡುವಾಗ ಕೆಲವೊಮ್ಮೆ ಎಡವಟ್ಟು ಮಾಡಿಕೊಳ್ಳುತ್ತಾರೆ. ಈ ಹಿಂದೆ ಸಾಕಷ್ಟು ಬಾರಿ ಇಂತಹ ಘಟನೆಗಳು ನಡೆದಿವೆ. 'KGF' ಸಿನಿಮಾ ಹಾಗೂ ಯಶ್ ಬಗ್ಗೆ ಕೂಡ ಕೆಲವರು ಉಡಾಫೆ ಮಾತುಗಳನ್ನು ಆಡಿರುವವರು ಇದ್ದಾರೆ. ಇದೀಗ ತೆಲುಗು ನಟ ರವಿತೇಜ ಕೂಡ ಇದೇ ರೀತಿ ಮಾತನಾಡಿ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ 'KGF' ಸರಣಿ ಬರೆದ ದಾಖಲೆಗಳು ಒಂದೆರಡಲ್ಲ. ಪ್ರಶಾಂತ್ ನೀಲ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಯಶ್ ಹೀರೊ ಆಗಿ ಅಬ್ಬರಿದರು. ಹೊಂಬಾಳೆ ಸಂಸ್ಥೆ ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ತೆರೆಗೆ ತಂದು ಗೆದ್ದಿತ್ತು. ಈ ಚಿತ್ರಕ್ಕಾಗಿ ಯಶ್ ಏಳೆಂಟು ವರ್ಷ ಮುಡಿಪಾಗಿಟ್ಟಿದ್ದರು. ಯಶ್ ಪರಿಶ್ರಮ, ನಂಬಿಕೆ, ಹಠದಿಂದಲೇ 'KGF' ಸಿನಿಮಾ ಅಷ್ಟು ದೊಡ್ಡಮಟ್ಟದಲ್ಲಿ ಗೆಲ್ತು ಅನ್ನೋದು ಎಲ್ಲರಿಗೂ ಗೊತ್ತೇಯಿದೆ.

'ಬಾಹುಬಲಿ' ಸರಣಿ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆ ಮಟ್ಟಿಗೆ ಸಕ್ಸಸ್ ಕಂಡ ಸಿನಿಮಾ 'KGF'. ಬರೀ ಕನ್ನಡದಲ್ಲಿ ಮಾತ್ರ ಮಾಡೋಣ ಎಂದುಕೊಂಡಿದ್ದ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದವರು ಯಶ್. ಇನ್ನು ರಾಕಿಭಾಯ್ ಆಗಿ ರಾಕಿಂಗ್ ಸ್ಟಾರ್ ಪರ್ಫಾರ್ಮನ್ಸ್‌ನ ಬಾಲಿವುಡ್ ಸೂಪರ್ ಸ್ಟಾರ್‌ಗಳೇ ಮೆಚ್ಚಿ ಕೊಂಡಾಡಿದ್ದಾರೆ. ಸಿನಿಮಾ ನೋಡಿ ಅಕ್ಕಪಕ್ಕದ ಇಂಡಸ್ಟ್ರಿ ಫಿಲ್ಮ್ ಮೇಕರ್ಸ್ ಯಶ್ ಅಭಿಮಾನಿಗಳಾಗಿಬಿಟ್ಟಿದ್ದಾರೆ. ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ. ಬಾಲಿವುಡ್ ಮಂದಿ ಕೂಡ ಯಶ್ ಜೊತೆ ಸಿನಿಮಾ ಮಾಡೋಕೆ ಹರಸಾಹಸ ಪಡುತ್ತಿದ್ದಾರೆ.
ಯಶ್ ಪರಿಶ್ರಮ, ಸಾಧನೆ ಬಗ್ಗೆ ಹೊಸದಾಗಿ ಬಿಡಿಸಿ ಹೇಳುವುದು ಬೇಕಾಗಿಲ್ಲ. ಆದರೆ ತೆಲುಗು ನಟ ಹಿಂದಿ ಸಂದರ್ಶನವೊಂದರಲ್ಲಿ ಯಶ್ ಬಗ್ಗೆ ನೀಡಿರುವ ಹೇಳಿಕೆ ಅಭಿಮಾನಿಗಳನ್ನು ಕೆರಳಿಸಿದೆ. 'ಟೈಗರ್ ನಾಗೇಶ್ವರ್‌ರಾವ್' ಸದ್ಯ ರವಿತೇಜಾ ನಟಿಸಿದ್ದಾರೆ. ದಸರಾ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಪ್ರಚಾರದಲ್ಲಿ ರವಿತೇಜ ಬ್ಯುಸಿಯಾಗಿದ್ದಾರೆ. ಹಿಂದಿ ಮಾಧ್ಯಮಗಳಿಗೂ ಸಂದರ್ಶನ ನೀಡುತ್ತಿದ್ದಾರೆ.
ಇತ್ತೀಚೆಗೆ ಹಿಂದಿ ಸಂದರ್ಶನದ ರ್ಯಾಪಿಡ್ ಫೈಯರ್ ರೌಂಡ್‌ನಲ್ಲಿ ಯಶ್ ಬಗ್ಗೆ ರವಿತೇಜಾ ಉಡಾಫೆಯಿಂದ ಮಾತನಾಡಿದ್ದಾರೆ. ಇದು ರಾಕಿಂಗ್ ಸ್ಟಾರ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ರವಿತೇಜಾನ ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ. ರವಿತೇಜಾ ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೆ ಕೆಲವರು ಕರ್ನಾಟಕದಲ್ಲಿ ನಿಮ್ಮ 'ಟೈಗರ್ ನಾಗೇಶ್ವರ ರಾವ್' ಸಿನಿಮಾ ಕತೆ ಏನಾಗುತ್ತಾ ನೋಡ್ತಾ ಇರಿ ಎಂದಿದ್ದಾರೆ.
ಸಂದರ್ಶನದಲ್ಲಿ ಸ್ಟಾರ್ ನಟರ ಹೆಸರು ಹೇಳಿ ಅವರ ಬಗ್ಗೆ ಮಾತನಾಡುವಂತೆ ನಿರೂಪಕಿ ಹೇಳಿದ್ದಾಳೆ. ಮೊದಲಿಗೆ ರಾಮ್‌ಚರಣ್ ಹೆಸರು ಹೇಳಿದಾಗ ರಾಮ್‌ಚರಣ್ ಡ್ಯಾನ್ಸ್ ಸೂಪರ್ ಎಂದು ರವಿತೇಜಾ ಹೇಳಿದ್ದಾರೆ. ಪ್ರಭಾಸ್ ಹೆಸರು ಬಂದಾಗ ಅವರ ಅಪಿಯರೆನ್ಸ್ ಹಾಗೂ ಡಾರ್ಲಿಂಗ್ ಎಂದಿದ್ದಾರೆ. ರಾಜಮೌಳಿ ಹೆಸರು ಬಂದಾಗ ಅವರ ವಿಷನ್ ಸೂಪರ್ ಎಂದಿದ್ದಾರೆ. ಆದರೆ ಯಶ್ ಹೆಸರು ಕೇಳಿ "ನಾನು ಯಶ್ ಅವರ 'KGF' ಸಿನಿಮಾ ಮಾತ್ರ ನೋಡಿದ್ದೀನಿ" ಎಂದಿದ್ದಾರೆ.
ರವಿತೇಜಾ ಅಷ್ಟೇ ಹೇಳಿದ್ದರೂ ಪರವಾಗಿಲ್ಲ. ಮಾತು ಮುಂದುವರೆಸಿ "KGF' ಸಿನಿಮಾ ಸಿಗುವುದಕ್ಕೆ ಯಶ್ ಬಹಳ ಲಕ್ಕಿ" ಎಂದು ಉಡಾಫೆಯಿಂದ ಹೇಳಿದಂತೆ ಕಾಣುತ್ತದೆ. ಈ ಮಾತು ರಾಕಿಂಗ್ ಸ್ಟಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಶ್ ಅವರ ಹಿಂದಿನ ಸಿನಿಮಾಗಳ ಸಾಧನೆ, 'KGF' ಚಿತ್ರವನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸಲು ಪಟ್ಟ ಪರಿಶ್ರಮದ ಬಗ್ಗೆ ರವಿತೇಜಾ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.


Click it and Unblock the Notifications











