'ರಜಾಕರ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್; ಬಾಕ್ಸಾಫೀಸ್‌ನಲ್ಲಿ ಆರ್ಭಟ ಶುರು
ತೆಲುಗಿನ 'ರಜಾಕರ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಶುಕ್ರವಾರ ತೆರೆಗಪ್ಪಳಿಸಿದ ಈ ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ಬಾಬಿ ಸಿಂಹ, ತೇಜ್ ಸಪ್‌ರು, ರಾಜ್ ಅರ್ಜುನ್, ವೇದಿಕಾ, ಅನಸೂಯ ಭಾರಧ್ವಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಬಂದ ನಂತರ ಹಲವು ರಾಜಸಂಸ್ಥಾನಗಳನ್ನು ಸರ್ದಾರ್ ವಲ್ಲಭಾಯ್ ಪಟೇಲ್ ನೇತೃತ್ವದಲ್ಲಿ ದೇಶಕ್ಕೆ ಸೇರ್ಪಡೆಯಾಗುವ ಪ್ರಕ್ರಿಯೆ ನಡೆಯಿತು. ಆದರೆ ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಸಂಸ್ಥಾನಕ್ಕೆ ಮಾತ್ರ ಸ್ವಾತಂತ್ರ್ಯ ಸಿಗಲಿಲ್ಲ. ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ್ದ ಹೈದರಾಬಾದ್ ಸಂಸ್ಥಾನ ಪ್ರತ್ಯೇಕವಾಗಿ ಉಳಿಯಲು ತೀರ್ಮಾನಿಸಿತು. ಆದರೆ ಆ ಭಾಗರದ ಬಹುತೇಕರು ಭಾರತದ ಒಕ್ಕೂಟ ಸೇರಲು ಬಯಸಿದ್ದರು. ಅಂತಹವರ ಕೂಗು, ಹೋರಾಟ ಹಿಮ್ಮೆಟ್ಟಿಸಲು ರಜಾಕರರ ಸೇನೆ ರೂಪುಗೊಂಡಿತು.

ನಿಜಾಮರ ಆಳ್ವಿಕೆಯಲ್ಲಿ ರಜಾಕಾರರ ಕ್ರೌರ್ಯ ಎಲ್ಲೆ ಮೀರಿತ್ತು. ನಿಜಾಮರ ಆಡಳಿತದ ವಿರುದ್ಧ ಕೆಲಸ ಮಾಡಿದವರನ್ನು ನಿರ್ದಯವಾಗಿ ಗುಂಡಿಕ್ಕಿ ಕೊಂದರು. ತೆರಿಗೆ ವಿಧಿಸುವುದಲ್ಲದೇ ಜನರ ಆಸ್ತಿಪಾಸ್ತಿ ದೋಚಲು ಆರಂಭಿಸಿದರು. ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದರು. ಹಿಂದೂ ಸಂಪ್ರದಾಯಗಳ ಆಚರಣೆಗೆ ವಿರೋಧಿಸಿ ಬಲವಂತದ ಮತಾಂತರ ಶುರುವಾಯಿತು. ಆಗಸ್ಟ್ 27, 1948 ರಂದು ಖಾಸಿಂ ರಜ್ವಿ ನೇತೃತ್ವದಲ್ಲಿ 400 ರಜಾಕಾರರು ಬೈರನಪಲ್ಲಿಯನ್ನು ಸುತ್ತುವರೆದು ನರಮೇಧ ನಡೆಸಿದ್ದರು. ಈ ಘಟನೆಯಲ್ಲಿ ದುಕೊಂಡಿದ್ದಾರೆ. ತಮ್ಮ ವಿರುದ್ಧ ಕೆಲಸ ಮಾಡುತ್ತಿದ್ದವರನ್ನು ಗುಂಡಿಕ್ಕಿ ಕೊಂದರು. ಮಹಿಳೆಯರು, ಪುರುಷರು, ಮಕ್ಕಳು ಮತ್ತು ವೃದ್ಧರನ್ನು ಮನಬಂದಂತೆ ಗುಂಡು ಹಾರಿಸಲಾಯಿತು.
ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೂಡ ಹೋರಾಟಗಳು ನಡೆದವು. ಈ ಭಾಗದ ಜನರು ಭಾರತ ಒಕ್ಕೂಟ ಸೇರಲು ಮತ್ತೊಂದು ಸ್ವಾತಂತ್ರ ಹೋರಾಟವೇ ನಡೆಯಬೇಕಾಯಿತು. 13 ತಿಂಗಳ ಬಳಿಕ ಸರ್ದಾರ್ ವಲ್ಲಭಾಯ್ ಪಟೇಲ್ ಆಪರೇಷನ್ ಪೋಲೋ ಮೂಲಕ ಹೈದರಾಬಾದ್ ಸಂಸ್ಥಾನವನ್ನು ಭಾರತಕ್ಕೆ ಸೇರುವಂತೆ ಮಾಡಿದ್ದರು. ಈ ಎಲ್ಲಾ ವಿಚಾರಗಳನ್ನು ಸೇರಿಸಿ 'ರಜಾಕರ್' ಸಿನಿಮಾ ನಿರ್ಮಾಣವಾಗಿದೆ. ನಿಜಾಂ ಸಂಸ್ಥಾನದ ಖಾಸಗಿ ಸೈನ್ಯ ರಜಾಕಾರರ ಅನ್ಯಾಯ, ಅಕ್ರಮ, ದೌರ್ಜನ್ಯ, ಕ್ರೌರ್ಯವನ್ನು ತೆರೆಮೇಲೆ ತರಲಾಗಿದೆ.

ನೈಜ ಘಟನೆಗಳನ್ನು ಆಧರಿಸಿ ಯಟಾ ನಾರಾಯಣ ಚಿತ್ರಕಥೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಟಿ ಪ್ರೇಮಾ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಮುಖ್ಯವಾಗಿ ರಜಾಕಾರರ ಆರ್ಭಟ ದೌರ್ಜನ್ಯ, ಕ್ರೌರ್ಯ ಹೆಚ್ಚಾಗಿದ್ದ ಭಾಗಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.
600ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ರಜಾಕರ್' ಸಿನಿಮಾ ಬಿಡುಗಡೆಯಾಗಿದೆ. ಅಂದಾಜು 45 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಮೊದಲ ದಿನವೇ ಸಿನಿಮಾ ಅಂದಾಜು 1.75 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರಿಂದ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುವ ಸುಳಿವು ಸಿಗುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಐತಿಹಾಸಿಕ ಕಥಾಹಂದರದ ಸಿನಿಮಾಗಳು ಹೆಚ್ಚಾಗುತ್ತಿದೆ. ಅದರಲ್ಲೂ ರಜಾಕಾರರ ಕುರಿತು ಈ ಸಿನಿಮಾ ವಿಭಿನ್ನ ಪ್ರಯತ್ನ ಎನ್ನಬಹುದು.
ಭೀಮ್ ಸಿಸಿರೊಲಿಯೊ ಸಂಗೀತ, ಛಾಯಾಗ್ರಹಣ 'ರಜಾಕರ್' ಚಿತ್ರಕ್ಕಿದೆ. ಸಿನಿಮಾ ಮೇಕಿಂಗ್, ಗ್ರಾಫಿಕ್ಸ್, ಕಲಾವಿದರ ಅಭಿನಯ ಎಲ್ಲದರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











