RC 15: ವೈಜಾಗ್ ಬೀಚ್ ರೋಡ್‌ನಲ್ಲಿ ರಾಮ್ ಚರಣ್-ಶಂಕರ್ ಸಿನಿಮಾ, ಫೋಟೊಗಳು ವೈರಲ್!
'ದಿಲ್' ರಾಜು ನಿರ್ಮಾಣದಲ್ಲಿ, ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ, ರಾಮ್ ಚರಣ್ ತೇಜ ಅಭಿನಯದಲ್ಲಿ ಬರುತ್ತಿರುವ ಚಿತ್ರ 'RC15'. 'ಆರ್ ಆರ್ ಆರ್' ಚಿತ್ರದ ನಂತರ ರಾಮ್ ಚರಣ್ ಅಭಿನಯಿಸುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದು. '2.0' ಅಂತಹ ದೊಡ್ಡ ಯಶಸ್ಸಿನ ನಂತರ ಶಂಕರ್ ನಿರ್ದೇಶಿಸುತ್ತಿರುವ ಸಿನಿಮಾವಿದು. ಇನ್ನು ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬ್ಯಾನರ್, ಅಂದ್ರೆ 'ದಿಲ್' ರಾಜು ಬಂಡವಾಳ ಹೂಡಿದ್ದಾರೆ. ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಹಿಂದಿ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ಲಾನಿಂಗ್ ಮಾಡಿಕೊಂಡಿದೆ.
ಇತ್ತ ಶಂಕರ್ ಇರಬಹುದು, ಅತ್ತ ರಾಜಮೌಳಿ ಇರಬಹುದು ತಮ್ಮ ಚಿತ್ರದ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ಒಂದೊಂದು ದೃಶ್ಯ ಕೂಡ ಒಂದು ದೃಶ್ಯ ಕಾವ್ಯದಂತೆ ಮೂಡಿ ಬರಲು ಸಾಕಷ್ಟು ಸಾಹಸ ಮಾಡುತ್ತಾರೆ. ಸಾಕಷ್ಟು ಸಮಯ ಕೂಡ ತೆಗೆದುಕೊಂಡು ಸಿನಿಮಾ ಮಾಡುತ್ತಾರೆ. ತಮ್ಮ ಸಿನಿಮಾದ ಒಂದೊಂದು ಫ್ರೇಮ್ ಕೂಡ ತೆರೆಯ ಮೇಲೆ ನೋಡಿ ಪ್ರೇಕ್ಷಕರು ಆನಂದಿಸಬೇಕು ಅಂತ ಬಯಸುತ್ತಾರೆ. ಹೀಗಾಗಿಯೇ ಯಾವುದೇ ಕಾರಣಕ್ಕೂ ಕೂಡ ಚಿತ್ರದ ಚಿತ್ರೀಕರಣದ ಒಂದೇ ಒಂದು ದೃಶ್ಯ ಕೂಡ ಲೀಕ್ ಆಗದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೂ ಕಣ್ತಪ್ಪಿಸಿ ಅನೇಕ ಸಂದರ್ಭಗಳಲ್ಲಿ ಕೆಲವೊಂದು ಫೋಟೊಗಳು ಲೀಕ್ ಆಗಿವೆ. ಆಗಾಗ ಅದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಪ್ರಸ್ತುತ ಶಂಕರ್ ನಿರ್ದೇಶಿಸುತ್ತಿರುವ 'RC 15' ಸಿನಿಮಾ ಅನೇಕ ಬಾರಿ ಇಂತಹ ಸಮಸ್ಯೆಗೆ ಸಿಲುಕುತ್ತಲೇ ಇದೆ.

ಲೀಕ್ ಆಗುತ್ತಲೇ ಇವೆ ಫೋಟೊಗಳು
ನಿರ್ದೇಶಕ ಶಂಕರ್ ತನ್ನ ಸಿನಿಮಾದ ಒಂದೇ ಒಂದು ಫೋಟೊ ಹಾಗೂ ಪಾತ್ರದ ಲುಕ್ ಲೀಕ್ ಆಗದಂತೆ ಎಚ್ಚರ ವಹಿಸುತ್ತಾರೆ. ಆದರೂ ಸಹ 'RC 15' ಚಿತ್ರದ ಶೂಟಿಂಗ್‌ಗೆ ಸಂಬಂಧಪಟ್ಟ ಕೆಲವೊಂದು ಫೋಟೊಗಳು ಲೀಕ್ ಆಗುತ್ತಲೇ ಇವೆ. ಮೊದಲು ಚೆನ್ನೈಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದ ದೊಡ್ಡ ಆಕ್ಷನ್ ಸನ್ನಿವೇಶದ ದೃಶ್ಯವೊಂದು ವೈರಲ್ ಆಯ್ತು. ಬಳಿಕ ರಾಜಮಂಡ್ರಿ ಏರ್‌ಪೋರ್ಟ್‌ನಲ್ಲಿ ಕೆಲವೊಂದು ಫೋಟೊಗಳು ಲೀಕ್ ಆಯ್ತು. ಆ ಸಮಯದಲ್ಲಿ ಕೂಡ ರಾಮಚರಣ್ ಲುಕ್ ನೋಡಿ ಕ್ಯಾರೆಕ್ಟರ್ ಬಗ್ಗೆ ಅಭಿಮಾನಿಗಳು ತಮ್ಮದೇ ಆದ ಲೆಕ್ಕಾಚಾರ ಹಾಕಿದ್ದರು. ಇತ್ತೀಚೆಗಷ್ಟೇ ಅಮೃತಸರದ ಕಾಲೇಜ್ ಒಂದರಲ್ಲಿ ಹಾಡಿನ ದೃಶ್ಯವೊಂದರ ಚಿತ್ರೀಕರಣದ ಫೋಟೊಗಳು ವೈರಲ್ ಆಗಿವೆ.

ಶಂಕರ್- ರಾಮ್‌ಚರಣ್ ಕಮಿಟ್‌ಮೆಂಟ್ ಏನು?
ಶಂಕರ್ ಮತ್ತು ರಾಮ್ ಚರಣ್ ತೇಜ ಇಬ್ಬರೂ ಕೂಡ ಪೂರ್ತಿಯಾಗಿ ತಮ್ಮ ಕಾಲ್ ಶೀಟ್ ಅನ್ನು ಇದೇ ಚಿತ್ರಕ್ಕೆಂದು ಮೀಸಲಿಟ್ಟಿದ್ದಾರೆ. ಪ್ರಸ್ತುತ ಶಂಕರ್ 'RC15' ಚಿತ್ರದ ಜೊತೆಗೆ ಹಿಂದಿಯಲ್ಲಿ 'ಅನ್ನಿಯನ್' ಚಿತ್ರದ ರಿಮೇಕ್ ಮತ್ತು ಕಮಲಹಾಸನ್ ಅಭಿನಯದ 'ಇಂಡಿಯನ್ -2' ಚಿತ್ರಗಳನ್ನು ಸಹ ಕೈಗೆತ್ತಿಕೊಂಡಿದ್ದಾರೆ. ಇನ್ನೊಂದೆಡೆ ರಾಮ್ ಚರಣ್ ಅಭಿನಯದಲ್ಲಿ 'ಜರ್ಸಿ' ಚಿತ್ರದ ನಿರ್ದೇಶಕನ ಮುಂದಿನ ಚಿತ್ರ ಸೆಟ್ಟೇರಲಿದೆ. ಆ ಬಳಿಕ ಪ್ರಶಾಂತ್ ನೀಲ್ ಸಿನಿಮಾದ ಚಿತ್ರೀಕರಣ ಕೂಡ ನಡೆಯಬೇಕಿದೆ. ಹೀಗಾಗಿ ಇಬ್ಬರೂ ಕೂಡ ಬೇರೆ ಬೇರೆ ಚಿತ್ರಗಳಿಗೆ ಕಮಿಟ್ ಆಗಿರುವುದರಿಂದ RC 15 ಚಿತ್ರವನ್ನು ಆದಷ್ಟು ಬೇಗ ಮಾಡ ಮುಗಿಸಬೇಕಾದ ಒತ್ತಡದಲ್ಲಿದ್ದಾರೆ. ಈ ಕಾರಣಕ್ಕೆ ಬಿಡುವಿಲ್ಲದ ಶೆಡ್ಯೂಲ್‌ಗಳಲ್ಲಿ ಪ್ರಸ್ತುತ RC 15ರ ಚಿತ್ರೀಕರಣ ನಡೆಯುತ್ತಿದೆ.

ವೈಜಾನ್‌ನಲ್ಲಿ ಶೂಟಿಂಗ್
ಪ್ರಸ್ತುತ ಅಂದರೆ ಗುರುವಾರದಿಂದ ರಾಮ್ ಚರಣ್- ಶಂಕರ್ ಸಿನಿಮಾ ಶೂಟಿಂಗ್ ವೈಜಾಗ್ ಬೀಚ್‌ನಲ್ಲಿ ನಡೆಸುತ್ತಿದೆ. ಈ ವಿಷಯ ತಿಳಿದು ರಾಮ್ ಚರಣ್ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ಇದರೊಂದಿಗೆ ರಾಮ್ ಚರಣ್ ಲುಕ್ ಮತ್ತೆ ಲೀಕ್ ಆಗಿದೆ. ಟ್ರಾಫಿಕ್ ಪೊಲೀಸರು ಲಂಚ ಪಡೆಯುತ್ತಿರುವಾಗ ರಾಮ್ ಚರಣ್ ಜೊತೆ ವಾಗ್ವಾದಕ್ಕಿಳಿದಿರುವ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ರಾಮ್ ಚರಣ್ ಹಾಗೂ ಪೊಲೀಸರ ಮುಖಾ-ಮುಖಿ ದೃಶ್ಯಗಳ ಫೋಟೊಗಳನ್ನು ಅಭಿಮಾನಿಗಳು ವೈರಲ್ ಮಾಡಿದ್ದಾರೆ.

RC-15 ಪೋಟೊಗಳು ವೈರಲ್
ಸಿನಿಮಾ ಚಿತ್ರೀಕರಣದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಚಿತ್ರದಲ್ಲಿ ರಾಮ್ ಚರಣ್ ಸಂಪೂರ್ಣ ಕೋಪ ಹಾಗೂ ಮುಗ್ಧನಾಗಿ 2 ವ್ಯಕ್ತಿತ್ವಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಈಗ ರಾಮ್ ಚರಣ್ ಲುಕ್ ಮತ್ತೆ ಹಾಟ್ ಟಾಪಿಕ್ ಆಗುತ್ತಿದೆ. ಶೂಟಿಂಗ್ ಶುರುವಿನಲ್ಲಿ ಕೆಲವರು ರಾಮ್ ಚರಣ್ ಅವರನ್ನು ತಮ್ಮ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಅವರ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಟ್ಟಿನಲ್ಲಿ ರಾಮ್ ಚರಣ್ ಲುಕ್ ಆಗಾಗ ಲೀಕ್ ಆಗುತ್ತಲೇ ಇರುತ್ತದೆ. ರಾಜಮಂಡ್ರಿಯಲ್ಲಿ ನಡೆದ ಶೂಟಿಂಗ್ ವೇಳೆ ಇದೇ ರೀತಿಯ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಲೀಕ್ ಆಗಿವೆ. ಅಮೃತಸರದಲ್ಲೂ ಕಾಲೇಜು ದೃಶ್ಯಗಳು ಸೋರಿಕೆಯಾಗಿದ್ದವು. ಪ್ರತಿ ಬಾರಿಯೂ ರಾಮ್ ಚರಣ್ ಲುಕ್ ಸೋರಿಕೆಯಾಗುತ್ತಲೇ ಇದೆ. ಈ ಫೋಟೊಗಳನ್ನು ನೋಡಿ ರಾಮ್ ಚರಣ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಶಂಕರ್ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದು, ಚಿತ್ರ ದಾಖಲೆ ಸೃಷ್ಟಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ


Click it and Unblock the Notifications











