ಹೋಳಿ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕೊಟ್ಟ ಗ್ಲೋಬಲ್ ಸ್ಟಾರ್ ರಾಮ್‌ಚರಣ್
ಟಾಲಿವುಡ್ ನಟ ರಾಮ್‌ಚರಣ್ ನಟನೆಯ 16ನೇ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಬುಚ್ಚಿಬಾಬು ನಿರ್ದೇಶನದಲ್ಲಿ ಚರಣ್ ಹೊಸ ಸಿನಿಮಾ ಶುರುವಾಗಿದೆ. ಇನ್ನು 'RRR' ಸಿನಿಮಾ ಎರಡು ವರ್ಷ ಪೂರೈಸಿದ ಸಂಭ್ರಮದಲ್ಲೇ ಮತ್ತೊಂದು ಕ್ರೇಜಿ ನ್ಯೂಸ್ ಅಭಿಮಾನಿಗಳಿಗೆ ಸಿಕ್ಕಿದೆ.
'RRR' ಬಳಿಕ ಶಂಕರ್ ನಿರ್ದೇಶನದ 'ಗೇಮ್‌ಚೇಂಜರ್' ಚಿತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ ರಿಲೀಸ್ ಡೇಟ್ ಮಾತ್ರ ಘೋಷಣೆ ಆಗಲಿಲ್ಲ. ಪದೇ ಪದೆ ಸಿನಿಮಾ ಚಿತ್ರೀಕರಣ ತಡವಾಗುತ್ತಾ ಬರುತ್ತಿದೆ. ಇನ್ನು ಕಾಯೋದು ಬೇಡ ಎಂದು ಚರಣ್ ಹೊಸ ಸಿನಿಮಾ ಆರಂಭಿಸಿದ್ದಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಸ್ಟಾರ್ ನಟರು ಪ್ರತಿ ಚಿತ್ರಕ್ಕೆ ಎರಡ್ಮೂರು ವರ್ಷ ವ್ಯಯಿಸುತ್ತಿದ್ದಾರೆ. ಹಾಗಾಗಿ ಹೊಸ ಸಿನಿಮಾಗಳು ಘೋಷಣೆ ಆದರೂ ಯಾವಾಗ ತೆರೆಗೆ ಬರುತ್ತದೆ ಎನ್ನುವ ಗ್ಯಾರೆಂಟಿ ಇರುವುದಿಲ್ಲ.

'ಗೇಮ್‌ಚೇಂಜರ್' ಬೆನ್ನಲ್ಲೇ ಮೆಗಾ ಪವರ್ ಸ್ಟಾರ್ 'RC16' ಚಿತ್ರದಲ್ಲಿ ನಟಿಸಲಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು ಶಿವಣ್ಣ ಕೂಡ ಮುಖ್ಯ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಬಾಬಿ ಡಿಯೋಲ್ ಕೂಡ ತಾರಾಗಣಕ್ಕೆ ಸೇರಿಕೊಳ್ಳಲಿದ್ದಾರೆ. ಸದ್ಯ RC16 ಮುಹೂರ್ತ ಬೆನ್ನಲ್ಲೇ ಸುಕುಮಾರ್ ನಿರ್ದೇಶನದದಲ್ಲಿ RC17 ಸಿನಿಮಾ ಕೂಡ ಘೋಷಣೆ ಆಗಿದೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿದ್ದು ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಬಂಡವಾಳ ಹೂಡಲಿದೆ.
ಈ ಹಿಂದೆ ರಾಮ್‌ಚರಣ್ ಹಾಗೂ ಸುಕುಮಾರ್ ಕಾಂಬಿನೇಷನ್‌ನಲ್ಲಿ 'ರಂಗಸ್ಥಳಂ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. 6 ವರ್ಷಗಳ ಹಿಂದೆ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿಟ್ಟಿಬಾಬು ಪಾತ್ರದಲ್ಲಿ ಮೆಗಾಪವರ್ ಸ್ಟಾರ್ ಮೋಡಿ ಮಾಡಿದ್ದರು. ಹೆಚ್ಚು ಕಮ್ಮಿ ಅದೇ ತಂಡ ಹೊಸ ಚಿತ್ರಕ್ಕೆ ಜೊತೆಯಾಗುತ್ತಿದೆ. ಸೆಟ್ಟೇರುವ ಮುನ್ನ RC17 ಸಿನಿಮಾ ಕುತೂಹಲ ಮೂಡಿಸುತ್ತಿದೆ.

ಸದ್ಯ 'ಪುಷ್ಪ' ಸೀಕ್ವೆಲ್‌ಗಾಗಿ ಸುಕುಮಾರ್ ಕೆಲಸ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ' 2 ವರ್ಷಗಳ ಹಿಂದೆ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿತ್ತು. ಮುಂದುವರೆದ ಭಾಗ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಆ ಬಳಿಕ ಸುಕ್ಕು RC17 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಮುಂದಿನ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ಚರಣ್- ಸುಕ್ಕು ಜೋಡಿಯ ಹೊಸ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಬಹಳ ಹಿಂದೆಯೇ ಈ ಸಿನಿಮಾ ಬಗ್ಗೆ ನಿರ್ದೇಶಕ ರಾಜಮೌಳಿ ಮಾತನಾಡಿದ್ದರು. 'RRR' ಸಿನಿಮಾ ಪ್ರಮೋಷನ್ ವೇಳೆ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದರು. ರಾಮ್‌ಚರಣ್ ಹಾಗೂ ಸುಕುಮಾರ್ ಮುಂದಿನ ಸಿನಿಮಾ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅದು ಅದ್ಭುತ ಸಿನಿಮಾ ಆಗುತ್ತದೆ. ಯಾಕಂದರೆ ಆ ಕಥೆಯ ಬಗ್ಗೆ ನನ್ನ ಜೊತೆಗೂ ಚರ್ಚಿಸಿದ್ದರು ಎಂದು ಜಕ್ಕಣ್ಣ ಹೇಳಿದ್ದರು.
"ಸುಕುಮಾರ್ ಜೊತೆ ಚರಣ್ ಮಾಡುವ ಸಿನಿಮಾ ಬಗ್ಗೆ ನನಗೆ ಗೊತ್ತು. ಬಹಳ ಹೊಸತಾಗಿ ಇರುತ್ತದೆ. ಚಿತ್ರದಲ್ಲಿ ರಾಮ್‌ಚರಣ್ ಇಂಟ್ರೊಡಕ್ಷನ್ ಸೀನ್ ಮನಸ್ಸಿಗೆ ನಾಟುವಂತೆ ಇರುತ್ತದೆ. ನಾನು ಯಾಕೆ ಹೇಳ್ತಿದ್ದೀನಿ ಎನ್ನುವುದು ಮುಂದೆ ನೀವು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ" ಎಂದು ಮೌಳಿ ಹೇಳಿದ್ದರು. RC17 ಘೋಷಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಜಕ್ಕಣ್ಣ ಹೇಳಿಕೆ ವೈರಲ್ ಮಾಡುತ್ತಿದ್ದಾರೆ.


Click it and Unblock the Notifications











