ಅಲ್ಲು ಫ್ಯಾಮಿಲಿ ಜೊತೆ ಪವನ್ ಮುನಿಸಿಗೆ ಕಾರಣವೇನು? 2009ರ ಚುನಾವಣೆಯಲ್ಲಿ ಏನಾಗಿತ್ತು?
ತೆಲುಗು ನಟ ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಪವರ್ ಸ್ಟಾರ್ ಫ್ಯಾನ್ಸ್ ಮಾತ್ರ ಮೆಗಾ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ. ಆದರೆ ಅಲ್ಲು ಫ್ಯಾನ್ಸ್ ಮಾತ್ರ ಬೇಸರಗೊಂಡಿದ್ದಾರೆ. ಕಾರಣ ಮೆಗಾ ಫ್ಯಾನ್ಸ್ ಟ್ರೋಲಿಂಗ್. ಇನ್ನು 'ಪುಷ್ಪ-2' ಚಿತ್ರಕ್ಕೂ ಇದರಿಂದ ಸಮಸ್ಯೆ ಎದುರಾಗುವ ಲೆಕ್ಕಾಚಾರ ನಡೀತಿದೆ.
ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ವೈಸಿಪಿ ಅಭ್ಯರ್ಥಿ ಪರ ಅಲ್ಲು ಅರ್ಜುನ್ ಪ್ರಚಾರಕ್ಕೆ ಹೋಗಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ. ಸ್ನೇಹಿತ ಎನ್ನುವ ಕಾರಣಕ್ಕೆ ನಂದ್ಯಾಲ ಕ್ಷೇತ್ರದ ವೈಸಿಪಿ ಅಭ್ಯರ್ಥಿ ಶಿಲ್ಪಾ ರವಿರೆಡ್ಡಿ ಪರ ಸ್ಟೈಲಿಶ್ ಸ್ಟಾರ್ ಮತ ಯಾಚಿಸಿದ್ದರು. ಇದು ಸಹಜವಾಗಿಯೇ ಜನಸೇನಾನಿಗಳನ್ನು ಕೆರಳಿಸಿತ್ತು. ಜನಸೇನಾ ಪಕ್ಷದ ಎದುರಾಳಿ ಪಕ್ಷದ ಅಭ್ಯರ್ಥಿಗೆ ಪವನ್ ಫ್ಯಾಮಿಲಿ ಸದಸ್ಯನೇ ಬೆಂಬಲ ಸೂಚಿಸಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.

ಪವನ್ ಸಹೋದರ ನಾಗಬಾಬು ಸಹ ಈ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಚಿರಂಜೀವಿ ತಮ್ಮ ಹೆಂಡತಿ ಅಣ್ಣ, ಸೋದರಳಿ ಎಂದು ಅಲ್ಲು ಅರವಿಂದ್ ಹಾಗೂ ಅಲ್ಲು ಅರ್ಜುನ್ ಜೊತೆ ಒಳ್ಳೆ ಬಾಂಧವ್ಯ ಉಳಿಸಿಕೊಂಡಿದ್ದಾರೆ. ಆದರೆ ಪವನ್ ಕಲ್ಯಾಣ್ ಮಾತ್ರ ಬಹಳ ಹಿಂದಿನಿಂದಲೂ ಅಲ್ಲು ಫ್ಯಾಮಿಲಿಯಿಂದ ದೂರವೇ ಉಳಿದಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಚಿರು ಮನೆಗೆ ಪವನ್ ಬಂದಿದ್ದರು. ಭರ್ಜರಿ ಸಂಭ್ರಮಾಚರಣೆ ನಡೀತು. ಈ ವೇಳೆ ಅಲ್ಲು ಫ್ಯಾಮಿಲಿ ಸದಸ್ಯರು ಗೈರಾಗಿದ್ದರು. ಇನ್ನು ಡಿಸಿಎಂ ಆಗಿ ಪವನ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಾಯಿಧರಂತೇಜ್ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್‌ನ ಅನ್‌ಫಾಲೋ ಮಾಡಿದ್ದಾರೆ.
ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಭಿನ್ನಾಭಿಪ್ರಾಯಗಳಿರುವುದು ನಿಜ. ಇದು ಪರೋಕ್ಷವಾಗಿ ಆಗಾಗ್ಗೆ ಹೊರ ಬರುತ್ತಿದೆ. ಆದರೆ ಎರಡೂ ಫ್ಯಾಮಿಲಿ ಇದನ್ನು ಒಪ್ಪಲು ಸಿದ್ಧರಿಲ್ಲ. ನಾವು ಚೆನ್ನಾಗಿಯೇ ಇದ್ದೀನಿ ಇದೆಲ್ಲ ಬರೀ ವದಂತಿ ಅಷ್ಟೇ ಎನ್ನುತ್ತಾರೆ. ಆದರೆ ಈಗ ಯಾಕೋ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತಾಗುತ್ತದೆ. ಚಿರಂಜೀವಿ 'ಪ್ರಜಾರಾಜ್ಯಂ' ಪಕ್ಷ ಕಟ್ಟಿದಾಗ ಭಾವ ಅಲ್ಲು ಅರವಿಂದ್ ಬೆನ್ನಿಗೆ ನಿಂತಿದ್ದರು. ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಎಲ್ಲದರಲ್ಲೂ ಜೊತೆಗಿದ್ದರು. ಅಲ್ಲು ಸಹ ಆಗ ಪ್ರಚಾರ ಮಾಡಿದ್ದರು.
2009ರ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಚಿರು ನೇತೃತ್ವದ 'ಪ್ರಜಾರಾಜ್ಯಂ' ಪಕ್ಷ ಹೀನಾಯವಾಗಿ ಸೋತಿತ್ತು. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಲ್ಲು ಫ್ಯಾಮಿಲಿ ಮುಂದೆ ನಿಂತಿತ್ತು. ಹಾಗಾಗಿ ಹಣ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರು. ಇದರಿಂದ ಪಕ್ಷ ಹೀನಾಯವಾಗಿ ಸೋತಿತ್ತು ಎನ್ನುವ ಆರೋಪವಿದೆ. ಬಳಿಕ ಚಿರು ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿಬಿಟ್ಟರು. ಈ ಸಮಯದಲ್ಲಿ ಬಾವ ಅರವಿಂದ್ ಜೊತೆಗೆ ನಿಂತಿದ್ದರು. 'ಪ್ರಜಾರಾಜ್ಯಂ' ಅಧ್ಯಾಯ ಮುಗಿಯಲು ಅಲ್ಲು ಅರವಿಂದ್ ಕಾರಣ ಎನ್ನುವ ಗುಮಾನಿ ಇದೆ. ಪವನ್ ಕಲ್ಯಾಣ್‌ಗೂ ಈ ವಿಚಾರದಲ್ಲಿ ಬೇಸರವಿದೆ. ಹಾಗಾಗಿ ಜನಸೇನಾ ವಿಷಯದಲ್ಲಿ ಅಲ್ಲು ಫ್ಯಾಮಿಲಿಯನ್ನು ಪವನ್ ದೂರವೇ ಇಟ್ಟಿದ್ದಾರೆ ಎನ್ನಲಾಗ್ತಿದೆ.

ಅಣ್ಣ ಚಿರಂಜೀವಿ, ಅತ್ತಿಗೆ ಸುರೇಖಾರನ್ನು ಪವನ್ ಕಲ್ಯಾಣ್ ತಂದೆ-ತಾಯಿ ಸ್ಥಾನದಲ್ಲಿಟ್ಟಿದ್ದಾರೆ. ಆದರೆ ಅಲ್ಲು ಫ್ಯಾಮಿಲಿ ವಿಚಾರದಲ್ಲಿ ಮಾತ್ರ ಅಷ್ಟಕ್ಕಷ್ಟೆ. 'ಸರೈನೋಡು' ಸಿನಿಮಾ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ವೇದಿಕೆ ಏರಿ ಮಾತನಾಡುತ್ತಿದ್ದರು. ಈ ವೇಳೆ ಬನ್ನಿ ಎಲ್ಲರ ಬಗ್ಗೆ ಮಾತನಾಡುತ್ತಿದ್ದರು. ಆಗ ಪವನ್ ಫ್ಯಾನ್ಸ್ ಪವರ್ ಸ್ಟಾರ್ ಎಂದು ಜೈಕಾರ ಹಾಕುತ್ತಿದ್ದರು. ಇದರಿಂದ ಬೇಸರಗೊಂಡ ಅಲ್ಲು ಅರ್ಜುನ್ "ಅವರ ಬಗ್ಗೆ ಮಾತನಾಡಲ್ಲ ಬ್ರದರ್" ಎಂದಿದ್ದರು. ಇದು ಪವರ್ ಸ್ಟಾರ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿತ್ತು.
ಬಳಿಕ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್, ಪವನ್ ಭೇಟಿಯಾಗಿ ಆಲಿಂಗನ ಮಾಡಿದ್ದರೂ ಫ್ಯಾನ್ಸ್ ಬಿಡುತ್ತಿಲ್ಲ. ಇದೀಗ ಪವನ್ ಕಲ್ಯಾಣ್ ಚುನಾವಣೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ್ತೊಂದು ಕಡೆ ಬನ್ನಿ ಬೆಂಬಲ ಸೂಚಿಸಿದ್ದ ಶಿಲ್ಪಾ ರವಿರೆಡ್ಡಿ ಸೋತಿದ್ದಾರೆ. ಹಾಗಾಗಿ ಪವರ್ ಸ್ಟಾರ್ ಫ್ಯಾನ್ಸ್ ಗರಂ ಆಗಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾ ರಿಲೀಸ್ ಆದಾಗ ನೀಡಿಕೊಳ್ತೀವಿ ಎಂದು ಪವರ್ ಫ್ಯಾನ್ಸ್ ಸೋಶೀಯಲ್ ಮೀಡಿಯಾದಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.


Click it and Unblock the Notifications











