ತೆಲುಗು ಮಾತನಾಡಲ್ಲ ಎಂದು ಹೇಳಿದ್ದ ದೀಪಿಕಾ ಪಡುಕೋಣೆ, ಅಲ್ಲು ಅರ್ಜುನ್‌ಗೆ ನಾಯಕಿಯಾಗಿದ್ಹೇಗೆ ?
ಸಾಮಾನ್ಯವಾಗಿ ಮದುವೆಯಾದ ನಂತರ ನಾಯಕಿಯರು ಅವಕಾಶಗಳ ಕೊರತೆಯನ್ನು ಎದುರಿಸುತ್ತಾರೆ. ಇನ್ನು ಮಗು ಆದರೆ ಮುಗೀತು. ಸ್ಟಾರ್ ಹೀರೋಯಿನ್‌ಗಳ ಪಾಲಿಗೆ ಚಿತ್ರರಂಗದ ಬಾಗಿಲು ಬಹುತೇಕ ಮುಚ್ಚಿದಂತೆಯೇ. ಪೋಷಕ ಪಾತ್ರಗಳಿಗೆ ಆ ನಂತರ ಇವರನ್ನು ಸೀಮಿತಗೊಳಿಸಲಾಗುತ್ತೆ. ಆದರೆ, ಇದಕ್ಕೆ ತದ್ವಿರುದ್ದ ಎನ್ನುವಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮದುವೆಯಾದ ನಂತರ ಕೂಡ ತಮ್ಮ ಬೇಡಿಕೆಯನ್ನು ಹಾಗೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗ್ತಾರೆ. ಮಗು ಆದ ಮೇಲೆ ಕೂಡ ನಾಯಕಿಯ ಪಾತ್ರಗಳಲ್ಲಿಯೇ ಮುಂದುವರೆಯುತ್ತಾರೆ. ಉದಾಹರಣೆಗೆ ದೀಪಿಕಾ ಪಡುಕೋಣೆ.
ಹೌದು, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಅನೇಕರು ಚಿತ್ರರಂಗಕ್ಕೆ ದೀಪಿಕಾ ಪಡುಕೋಣೆ ಗುಡ್ ಬೈ ಹೇಳ್ತಾರೆ ಎಂದು ಅಂದುಕೊಂಡಿದ್ದರು. ಆದರೆ. ಡಿಪ್ಪಿ ಮಾತ್ರ ಮಗುವಿಗೆ ಜನ್ಮ ನೀಡಿದ ನಾಲ್ಕೈದು ತಿಂಗಳಿನಲ್ಲಿಯೇ ಮರಳಿ ಚಿತ್ರರಂಗಕ್ಕೆ ಬಂದರು. ಹಲವು ಕಥೆಗಳನ್ನು ಕೇಳಿದರು. ತೀರಾ ಮೊನ್ನೆ ಮೊನ್ನೆಯಷ್ಟೇ ಸಂದೀಪ್ ರೆಡ್ಡಿ ವಂಗಾ ಜೊತೆ ವಿವಾದ ಮಾಡಿಕೊಂಡು ಸುದ್ದಿಯೂ ಆದರು. ಪ್ರಭಾಸ್ ಚಿತ್ರದಿಂದ ಹೊರ ಬಂದರು.

ಇಂಥಾ ದೀಪಿಕಾ ಪಡುಕೋಣೆ ಇದೀಗ ಅಲ್ಲು ಅರ್ಜುನ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೌದು, ಅಸಲಿಗೆ ಅಲ್ಲು ಅರ್ಜುನ್ ಮತ್ತು ಅಟ್ಲಿ ಜೋಡಿಯ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ಆ ಸುದ್ದಿ ಈಗ ನಿಜವಾಗಿದ್ದು ಅಟ್ಲಿ ಮತ್ತು ಅಲ್ಲು ಅರ್ಜುನ್ ತಂಡವನ್ನು ದೀಪಿಕಾ ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಇನ್ನು ಬಕ್ರಿದ್ ಹಬ್ಬದ ಪ್ರಯುಕ್ತ ವಿಶೇಷವಾದ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ದೀಪಿಕಾ ಪಡುಕೋಣೆ ಅವರನ್ನು ಸ್ವಾಗತಿಸಿದ್ದು, ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರ ಲುಕ್ ಸದ್ಯ ಗಮನ ಸೆಳೆದಿದೆ. ದೀಪಿಕಾ ಪಡುಕೋಣೆಯ ಪಾತ್ರದ ಸುತ್ತ ಮುತ್ತ ಕುತೂಹಲವನ್ನು ಕೂಡ ಈ ವಿಡಿಯೋ ಹುಟ್ಟು ಹಾಕಿದೆ.
ಅಂದ್ಹಾಗೇ ತಾಯಿಯಾದ ನಂತರ ದೀಪಿಕಾ ಪಡುಕೋಣೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವ ಷರತ್ತನ್ನು ಈಗ ಹಾಕುತ್ತಿದ್ದಾರೆ. ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಮತ್ತು ದೀಪಿಕಾ ಪಡುಕೋಣೆ ನಡುವೆ ಕಿರಿಕ್ ಆಗಲು ದೀಪಿಕಾ ಅವರ ಈ ಷರತ್ತುಗಳೇ ಕಾರಣವಾಗಿದ್ದವು. ದೀಪಿಕಾಗೆ 20 ಕೋಟಿ ಸಂಭಾವನೆ ಕೊಡಲು ವಂಗಾ ತಕರಾರು ತೆಗೆದಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿದ್ದವು.
ಆದರೆ ಅಲ್ಲು ಅರ್ಜುನ್ ಮತ್ತು ಅಟ್ಲಿ ಚಿತ್ರಕ್ಕೆ ಹಣ ಹೂಡುತ್ತಿರುವ ಸನ್ ಪಿಕ್ಚರ್ಸ್ ದೀಪಿಕಾ ಅವರ ಈ ಷರತ್ತುಗಳನ್ನೆಲ್ಲ ಒಪ್ಪಿಕೊಂಡಿದೆ. ಈ ಕಾರಣಕ್ಕೆ ದೀಪಿಕಾ ಪಡುಕೋಣೆ ಖುಷಿ ಖುಷಿಯಾಗಿ ಇದೀಗ ಅಲ್ಲು ಅರ್ಜುನ್ 22ನೇ ಚಿತ್ರಕ್ಕೆ ನಾಯಕಿಯಾಗಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.
ಇನ್ನು ಅಟ್ಲಿ ಹಿಂದೆ ದೀಪಿಕಾ ಪಡುಕೋಣೆ ಅವರ ಜೊತೆ ಜವಾನ್ ಚಿತ್ರವನ್ನು ಮಾಡಿದ್ದರು. ಇನ್ನು ದೀಪಿಕಾ ವಿರುದ್ಧ ಆರೋಪ ಮಾಡಿದ್ದ ಸಂದೀಪ್ ರೆಡ್ಡಿ ವಂಗಾ ಆಕೆ ತೆಲುಗು ಮಾತನಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಮಾಡಿತ್ತು.
ಆದರೆ ಈಗ ದೀಪಿಕಾ ಪಡುಕೋಣೆ ತೆಲುಗಿನಲ್ಲಿಯೇ ಸಿದ್ಧವಾಗುತ್ತಿರುವ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಸಂದೀಪ್ ರೆಡ್ಡಿ ವಂಗಾ ವಿರುದ್ದ ಕಿಡಿ ಕಾರುತ್ತಿದ್ದಾರೆ. ತೆಲುಗು ಮಾತನಾಡಲ್ಲ ಎಂದು ದೀಪಿಕಾ ಹೇಳಿದ್ದಾರೆ ಎನ್ನುವ ಸಂದೀಪ್ ರೆಡ್ಡಿ ವಂಗಾ ಅವರ ಮಾತು ಶುದ್ದ ಸುಳ್ಳು ಅದಕ್ಕೆ ಸಾಕ್ಷಿಯೇ ಈ ಚಿತ್ರ ಎನ್ನುತ್ತಿದ್ದಾರೆ. ದೀಪಿಕಾ ಪಡುಕೋಣೆಯ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಸಂದೀಪ್ ರೆಡ್ಡಿ ವಂಗಾ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಅಲ್ಲು ಅರ್ಜುನ್-ಅಟ್ಲಿಯ ಚಿತ್ರ ತಂಡವನ್ನು ದೀಪಿಕಾ ಪಡುಕೋಣೆ ಸೇರಿಕೊಂಡಿದ್ದು ಹಂಚಿಕೊಳ್ಳಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











