ಹನುಮಂತನಾಗಿ ಶ್ರೀರಾಮನ ರಕ್ಷಣೆಗೆ ನಿಂತ ರಿಷಬ್ ಶೆಟ್ಟಿ; ಹೊಸ ಸಿನಿಮಾ ಘೋಷಣೆ
ಕನ್ನಡ ರಿಷಬ್ ಶೆಟ್ಟಿ ತೆಲುಗು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ರಿಷಬ್ ತೆಲುಗು ಚಿತ್ರದಲ್ಲಿ ನಟಿಸುವ ಬಗ್ಗೆ ಗುಸು ಗುಸು ಕೇಳಿಬಂದಿತ್ತು. ಅದು ಈಗ ನಿಜವಾಗಿದೆ. ಪೋಸ್ಟರ್ ಸಮೇತ ಹೊಸ ಸಿನಿಮಾ ಘೋಷಣೆ ಆಗಿದೆ. ವಿಶೇಷ ಅಂದ್ರೆ ಹನುಮಂತನ ಪಾತ್ರದಲ್ಲಿ ರಿಷಬ್ ಮಿಂಚಿದ್ದಾರೆ.
ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಸಿನಿಮಾ ಈ ವರ್ಷದ ಆರಂಭದಲ್ಲಿ ಸೂಪರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಗೆದ್ದಿತ್ತು. ಬಳಿಕ ಆ ಚಿತ್ರದ ಸೀಕ್ವೆಲ್ ಘೋಷಣೆ ಆಗಿತ್ತು. 'ಜೈ ಹನುಮಾನ್' ಹೆಸರಿನಲ್ಲಿ ಪ್ರಶಾಂತ್ ವರ್ಮಾ ಸಿನಿಮಾ ಮಾಡುವುದಾಗಿ ಹೇಳಿದ್ದರು. ಇದೀಗ ಆ ಚಿತ್ರಕ್ಕೆ ಹನುಮಂತ ಸಿಕ್ಕಾಗಿದೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ 'ಜೈ ಹನುಮಾನ್' ಸಿನಿಮಾ ನಿರ್ಮಾಣವಾಗಲಿದೆ. ಹನುಮಂತನ ವೇಷದಲ್ಲಿ ರಿಷಬ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದೆ. ಶ್ರೀರಾಮನ ಮೂರ್ತಿಯನ್ನು ಎದೆಗಪ್ಪಿ ಹಿಡಿದ ಹನುಮಂತನ ಅವತಾರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಪೋಸ್ಟರ್ ಹಂಚಿಕೊಂಡಿರುವ ರಿಷಬ್ ಶೆಟ್ಟಿ "ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ. ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ.
'ಜೈ ಹನುಮಾನ್' ಚಿತ್ರ ಘೋಷಣೆ ಆದಾಗ ಯಾರು ಹನುಮಂತನ ಪಾತ್ರ ಮಾಡುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಮೆಗಾಸ್ಟಾರ್ ಚಿರಂಜೀವಿ, ರಾಮ್‌ಚರಣ್ ತೇಜಾ ಹೆಸರುಗಳು ಕೇಳಿಬಂದಿತ್ತು. ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಎಲ್ಲರನ್ನು ಬಿಟ್ಟು ಆ ಪಾತ್ರ ಕನ್ನಡ ನಟ ರಿಷಬ್ ಶೆಟ್ಟಿ ಅವರನ್ನು ಹುಡುಕಿ ಬಂದಿದೆ. ಈಗಾಗಲೇ ಒಂದು ತೆಲುಗು ಚಿತ್ರದಲ್ಲಿ ರಿಷಬ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಾರಿ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಜೈ ಹನುಮಾನ್' ಸಿನಿಮಾ ನಿರ್ಮಾಣವಾಗಲಿದೆ. ಪ್ರಶಾಂತ್ ವರ್ಮಾ 'ಹನುಮಾನ್' ಸಿನಿಮಾ ಸರಣಿಯಲ್ಲಿ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದರಲ್ಲಿ 'ಜೈ ಹನುಮಾನ್' ಸಿನಿಮಾ ಕೂಡ ಒಂದು. ಮುಂದೆ ಮತ್ತಷ್ಟು ಕಥೆಗಳನ್ನು ಈ ಪ್ರಪಂಚದಲ್ಲಿ ಹೇಳುವ ಲೆಕ್ಕಾಚಾರದಲ್ಲಿದ್ದಾರೆ. 'ಹನುಮಾನ್' ಚಿತ್ರದಲ್ಲಿ ತೇಜಾ ಸಜ್ಜಾ ಹೀರೊ ಆಗಿ ನಟಿಸಿದ್ದರು.
ಯಾವುದೇ ನಿರೀಕ್ಷೆ ಇಲ್ಲದೇ ಬಂದ 'ಹನುಮಾನ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ವರ್ಷ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿತ್ತು. ಹಾಗಾಗಿ ಸಹಜವಾಗಿಯೇ ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಈ ಬಾರಿ ಬಹಳ ದೊಡ್ಡದಾಗಿ ಸಿನಿಮಾ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತಿದೆ. ಸದ್ಯ ರಿಷಬ್ ಶೆಟ್ಟಿ 'ಕಾಂತಾರ- 1' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹುಟ್ಟೂರಲ್ಲಿ ಸೆಟ್ ನಿರ್ಮಾಣ ಮಾಡಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ.
'ಕಾಂತಾರ'-1 ಚಿತ್ರ ಪಾತ್ರಕ್ಕಾಗಿ ಉದ್ದನೆಯ ಗಡ್ಡ, ಕೂದಲು ಬಿಟ್ಟು ರಗಡ್ ಲುಕ್‌ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. 'ಜೈ ಹನುಮಾನ್' ಚಿತ್ರದಲ್ಲೂ ಅದೇ ಲುಕ್ ಇರಲಿದೆ. ಹಾಗಾಗಿಯೇ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಅದನ್ನು ಗಮನಿಸಬಹುದು. ಐಮ್ಯಾಕ್ಸ್ ಥ್ರಿಡಿ ವರ್ಷನ್‌ನಲ್ಲಿ ಈ ಸಿನಿಮಾ ಮೂಡಿ ಬರಲಿದೆ.


Click it and Unblock the Notifications











