ಯಶ್ ಹಾದಿಯಲ್ಲಿ ರಿಷಬ್ ಶೆಟ್ಟಿ; 'ಜೈ ಹನುಮಾನ್' ಚಿತ್ರಕ್ಕೆ ನಿರ್ಮಾಪಕನಾಗಿ ಭಾರೀ ಡೀಲ್
ಇತ್ತೀಚೆಗೆ ರಿಷಬ್ ಶೆಟ್ಟಿ ನಡೆ ಬಹಳ ಕುತೂಹಲ ಮೂಡಿಸಿದೆ. ಇನ್‌ಸ್ಟಾಗ್ರಾಮ್ ಹೊಂಬಾಳೆ ಫಿಲ್ಮ್ಸ್, ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಎಲ್ಲರನ್ನು ಅನ್‌ಫಾಲೋ ಮಾಡಿ ಪರೋಕ್ಷವಾಗಿ ಸಂದೇಶ ರವಾನಿಸಿದ್ದರು. ಈ ಬಗ್ಗೆ ಚರ್ಚೆ ಹೆಚ್ಚಾಗುತ್ತಿದ್ದಂತೆ ಯಾವುದೇ ರಗಳೆ ಬೇಡ ಎಂದು ಎಲ್ಲರನ್ನು ಅನ್‌ಫಾಲೋ ಮಾಡಿಬಿಟ್ಟರು. ಸದ್ಯ ಪತ್ನಿ ಪ್ರಗತಿ ಶೆಟ್ಟಿ ಖಾತೆಯನ್ನು ಮಾತು ಫಾಲೋ ಮಾಡುತ್ತಿದ್ದಾರೆ.
'ಕಾಂತಾರ- 1' ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಚಿತ್ರದ ಮುಹೂರ್ತ ನೆರವೇರಿತ್ತು. ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ವೇದಿಕೆ ಸಿದ್ಧವಾಗ್ತಿದೆ. ಸದ್ಯ ಈ ಚಿತ್ರದ ನಿರ್ಮಾಣಕ್ಕೂ ರಿಷಬ್ ಶೆಟ್ಟಿ ಕೈಜೋಡಿಸಿದ್ದಾರೆ ಎನ್ನಲಾಗ್ತಿದೆ. ಆ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ಪ್ರಶಾಂತ್ ವರ್ಮಾ ನಿರ್ದೇಶನದ 'ಜೈಹನುಮಾನ್' ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ರಿಷಬ್ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಾಣಾ ದಗ್ಗುಬಾಟಿ ನಟಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ತೇಜ ಸಜ್ಜಾ ಕೂಡ ತಾರಾಗಣದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದೆ. ಐಮ್ಯಾಕ್ಸ್ ತ್ರಿಡಿಯಲ್ಲಿ ಸಿನಿಮಾ ತೆರೆಗೆ ತರಲಾಗ್ತಿದೆ. ಎಂ. ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಇದು ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಸಿನಿಮಾ ಎನ್ನುವುದು ಪಕ್ಕಾ ಆಗಿದೆ.
ಎರಡು ವರ್ಷಗಳ ಹಿಂದೆ ಬಂದಿದ್ದ ತೆಲುಗಿನ 'ಹನುಮಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿತ್ತು. ಆ ಚಿತ್ರದ ಕತೆಗೆ ಈಗ 'ಜೈಹನುಮಾನ್' ಕಥೆಯನ್ನು ಲಿಂಕ್ ಮಾಡಿ ಸಿನಿಮಾ ಮಾಡಲಾಗ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಚಿತ್ರದ ಕಾಸ್ಟ್ಯೂಮ್ಸ್ ಡಿಸೈನರ್ ಆಗುವ ಸಾಧ್ಯತೆ ದಟ್ಟವಾಗಿದೆ. ಮೈತ್ರಿ ಮೂವಿ ಮೇಕರ್ಸ್ ಜೊತೆ ರಿಷಬ್ ಶೆಟ್ಟಿ ಚಿತ್ರ ನಿರ್ಮಾಣಕ್ಕೆ ಸಾಥ್ ಕೊಡುತ್ತಿದ್ದಾರೆ.

ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈಗಾಗಲೇ ರಿಷಬ್ ಒಂದಷ್ಟು ಸಿನಿಮಾಗಳನ್ನು ಆರಂಭಿಸಿದ್ದಾರೆ. ಯಗಾದಿ ಸಂಭ್ರಮದಲ್ಲಿ '2ನೇ ಅಧ್ಯಾಯ ಶುರು' ಎಂದು ಹೇಳಿ ಕುತೂಹಲ ಮೂಡಿಸಿದ್ದರು. ಇದೀಗ 'ಜೈಹನುಮಾನ್' ರೀತಿಯ ದೊಡ್ಡ ಚಿತ್ರ ನಿರ್ಮಾಣಕ್ಕೆ ಜೊತೆಯಾಗಿರುವುದು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಯಶ್ ಸೇರಿದಂತೆ ಕೆಲ ನಟರು ತಾವು ನಟಿಸುವ ಸಿನಿಮಾಗಳ ಜೊತೆಗೆ ನಿರ್ಮಾಣಕ್ಕೂ ಕೈ ಜೋಡಿಸುತ್ತಿದ್ದಾರೆ. ತಮ್ಮ ಸಂಭಾವನೆಯನ್ನೇ ಬಂಡವಾಳವಾಗಿಸಿ ಸಿನಿಮಾ ಗೆದ್ದ ಬಳಿಕ ಪಾಲು ಪಡೆಯುತ್ತಾರೆ. ಈ ಮೂಲಕ ದೊಡ್ಡಮಟ್ಟದ ಆದಾಯ ಗಳಿಸುತ್ತಿದ್ದಾರೆ. ಅದೇ ಹಾದಿಯಲ್ಲಿ ರಿಷಬ್ ಸಾಗುತ್ತಿದ್ದಾರೆ.
'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲದೇ ಯಶ್ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಅದೇ ರೀತಿ ಈಗ ರಿಷಬ್ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. 'ಜೈಹನುಮಾನ್' ಚಿತ್ರಕ್ಕಾಗಿ ಡಿವೈನ್ ಸ್ಟಾರ್ 80 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಅದೇ ಹಣವನ್ನು ನಿರ್ಮಾಣಕ್ಕೆ ಬಳಸುತ್ತಿರುವ ಊಹಾಪೋಹ ಶುರುವಾಗಿದೆ.
'ಜೈಹನುಮಾನ್' ಚಿತ್ರದ ಸಂಭಾವನೆ ವಿಚಾರದಲ್ಲಿ ಎರಡು ಆಯ್ಕೆಗಳನ್ನು ರಿಷಬ್ ಶೆಟ್ಟಿ ಅವರಿಗೆ ಕೊಡಲಾಗಿತ್ತು ಎಂದು ಫಿಲ್ಮ್ ನಗರ್‌ನಲ್ಲಿ ಗುಲ್ಲಾಗಿತ್ತು. 20 ಕೋಟಿ ರೂ. ಸಂಭಾವನೆ ಜೊತೆಗೆ ಲಾಭದಲ್ಲಿ 33% ರಷ್ಟು ಪಾಲು ಕೊಡುವುದು, ಅಥವಾ ಸಿನಿಮಾ ಹಿಟ್ ಆಗಲಿ, ಬಿಡಲಿ 80 ಕೋಟಿ ರೂ. ಸಂಭಾವನೆ ಪಡೆಯುವುದು. ರಿಷಬ್ ಮೊದಲ ಆಯ್ಕೆಯನ್ನೇ ಒಪ್ಪಿಕೊಂಡಿದ್ದಾರೆ ಎನ್ನುವ ಚರ್ಚೆ ನಡೆದಿತ್ತು. ಅದೇ ನಿಜವಾಗಿರುವ ಅಂದಾಜಿದೆ. ಹೀಗಾಗಿ ಚಿತ್ರದ ನಿರ್ಮಾಣದಲ್ಲೂ ಪಾಲು ಪಡೆದಂತೆ ಆಗಿದೆ.
ರಿಷಬ್ ಶೆಟ್ಟಿ ಸಿನಿಮಾ ನಿರ್ದೇಶಕರು ಆಗಿರುವುದರಿಂದ ಯಾವ ಸಿನಿಮಾ ಭವಿಷ್ಯ ಏನಾಗಬಹುದು ಎಂದು ಊಹಿಸಬಲ್ಲರು. 'ಜೈಹನುಮಾನ್' ಕಥೆ ಕೇಳಿ ಒಪ್ಪಿದ್ದಾರೆ. ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗುವ ಅಂದಾಜು ಸಿಕ್ಕಿದೆ. ಹಾಗಾಗಿಯೇ ಇಂತಾದೊಂದು ವ್ಯವಹಾರ ಖುದುರಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











