ಸದ್ದಿಲ್ಲದೇ ಬಿಡುಗಡೆಗೆ ಸಜ್ಜಾಯ್ತು ರಿಷಬ್ ಶೆಟ್ಟಿ ನಟನೆಯ 'ಎ ಫಿಲ್ಮ್ ಬೈ ಗಿರಿ' ಸಿನಿಮಾ; ಇಲ್ಲಿದೆ ಟ್ರೈಲರ್
'ಕಾಂತಾರ' ಚಾಪ್ಟರ್-1 ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಆ ಬಳಿಕ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಡಿವೈನ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಿದ್ದಾರೆ. ಸದ್ಯಕ್ಕೆ 'ಜೈ ಹನುಮಾನ್' ಸಿನಿಮಾ ತೆರೆಗೆ ಬರಲ್ಲ. ಮುಂದಿನ ವರ್ಷ ಕೊನೆಗೆ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ.
ಪ್ಯಾನ್ ಇಂಡಿಯಾ ಹೀರೊ ಆಗಿ ರಿಷಬ್ ಶೆಟ್ಟಿ ಈಗ ಗುರ್ತಿಸಿಕೊಂಡಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಒಳ್ಳೆ ಕ್ರೇಜ್ ಇದೆ. ಹಾಗಾಗಿ ರಿಷಬ್ ಶೆಟ್ಟಿ ನಟನೆಯ ಕನ್ನಡ ಸಿನಿಮಾಗಳನ್ನು ತೆಲುಗಿಗೆ ಡಬ್ ಮಾಡಿ ಬಿಡುವ ಪ್ರಯತ್ನ ಮಾಡಲಾಗ್ತಿದೆ. ಈ ಹಿಂದೆ 'ಬೆಲ್ ಬಾಟಂ' ಸಿನಿಮಾ ತೆಲುಗಿಗೆ ಡಬ್ ಆಗಿತ್ತು. ಇದೀಗ ಮತ್ತೊಂದು ಸಿನಿಮಾ ಅದೇ ಹಾದಿಯಲ್ಲಿದೆ.

ಹೀರೊ ಆಗಬೇಕು ಎಂದು ಚಿತ್ರರಂಗಕ್ಕೆ ಬಂದು ಮೊದಲ ಸಹ ನಿರ್ದೇಶಕನಾಗಿ ರಿಷಬ್ ಶೆಟ್ಟಿ ವೃತ್ತಿ ಆರಂಭಿಸಿದ್ದರು. ಬಳಿಕ ನಿರ್ದೇಶಕರು ಆದರು. ಕೊನೆಗೆ ಅವರ ಕನಸಿನಂತೆ ಹೀರೊ ಆಗಿಬಿಟ್ಟರು. 'ಕಾಂತಾರ' ಸರಣಿ ಸಿನಿಮಾಗಳ ಮೂಲಕ ಸ್ಟಾರ್ ನಿರ್ದೇಶಕ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕಮಾಲ್ ಮಾಡ್ತಿದ್ದಾರೆ. ಹೀಗೆ ಸಿನಿಮಾ ನಿರ್ಮಾಣ ಮಾಡುವ ಕನಸು ಕಾಣುವವರ ಸುತ್ತಾ ಕಟ್ಟಿಕೊಟ್ಟಿದ್ದ ಸಿನಿಮಾ 'ಹರಿಕಥೆ ಅಲ್ಲ ಗಿರಿಕಥೆ'.
4 ವರ್ಷಗಳ ಹಿಂದೆ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ತೆರೆಗೆ ಬಂದಿತ್ತು. ಕರಣ್ ಅನಂತ್ ಹಾಗೂ
ಅನಿರುದ್ಧ್ ಮಹೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸಂದೇಶ್ ಪ್ರೊಡಕ್ಷನ್ಸ್ ಜೊತೆ ಸೇರಿ ರಿಷಬ್ ಶೆಟ್ಟಿ ಸಿನಿಮಾ ನಿರ್ಮಿಸಿ ನಟಿಸಿದ್ದರು. ಇದೇ ಚಿತ್ರವನ್ನು ಈಗ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಹೀಗೆ ನಟ ಅಥವಾ ನಟಿ ಬೇರೆ ಭಾಷೆಗಳಲ್ಲಿ ಜನಪ್ರಿಯರಾಗುತ್ತಿದ್ದಂತೆ ಅವರ ಹಳೇ ಸಿನಿಮಾಗಳನ್ನು ಆಯಾ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನಗಳು ನಡೆಯುತ್ತೆ. ಅದೇ ರೀತಿ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಈಗ 'ಎ ಫಿಲ್ಮ್ ಬೈ ಗಿರಿ' ಹೆಸರಿನಲ್ಲಿ ತೆರೆಗು ಪ್ರೇಕ್ಷಕರ ಮುಂದೆ ಹೋಗ್ತಿದೆ. ತಪಸ್ವಿನಿ ಪೂಣಚ್ಚ, ರಚನಾ ಇಂದರ್, ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ.
ಎಂಜಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಚ್ಚಿಬಾಬು ಎಂಬುವವರು ಚಿತ್ರವನ್ನು ಡಬ್ ಮಾಡಿ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡದಲ್ಲಿ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರ ದೊಡ್ಡದಾಗಿ ಹಿಟ್ ಆಗಿರಲಿಲ್ಲ. ಆದರೆ ತೆಲುಗು ರಾಜ್ಯಗಳಲ್ಲಿ ರಿಷಬ್ ಶೆಟ್ಟಿ ಕ್ರೇಜ್ ಎನ್‌ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನ ಜೋರಾಗಿದೆ. 'ಜೈಹನುಮಾನ್' ಚಿತ್ರಕ್ಕೆ ಸಹ ನಿರ್ಮಾಪಕರಾಗಿ ರಿಷಬ್ ಶೆಟ್ಟಿ ಕೈಜೋಡಿಸಿದ್ದಾರೆ. ಮುಂದೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗಾಗಿ ಸದ್ಯಕ್ಕೆ ತೆಲುಗು ರಾಜ್ಯಗಳಲ್ಲಿ ಡಿವೈನ್ ಸ್ಟಾರ್ ದರ್ಬಾರ್ ನಡೆಯಲಿದೆ.
'ಎ ಫಿಲ್ಮ್ ಬೈ ಗಿರಿ' ಸಿನಿಮಾ ಮೇ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅಂದಹಾಗೆ ಈ ಚಿತ್ರದ ಕಥೆಯಲ್ಲಿ ಮೂವರು ಗಿರಿಗಳಿದ್ದಾರೆ. ಒಬ್ಬರು ನಿರ್ದೇಶಕ ಗಿರಿ, ಮತ್ತೊಬ್ಬರು ವಿಲನ್ ಗಿರಿ ಮತ್ತು ಇನ್ನೊಬ್ಬರು ನಾಯಕಿ 'ಗಿರಿ'ಜಾ. ಚಿತ್ರರಂಗದಲ್ಲಿ ಮಿಂಚುವ ಈ ಮೂವರ ಕನಸಿನ ಕಥೆ ಇದು. ತಮಾಷೆಯಾಗಿ ಶುರುವಾಗುವ ಕಥೆ ಮುಂದೆ ಕ್ರೈಂ ಥ್ರಿಲ್ಲರ್ ಸ್ವರೂಪ ಪಡೆದುಕೊಂಡು ರಂಜಿಸುತ್ತದೆ. ತೆಲುಗು ಪ್ರೇಕ್ಷಕರಿಗೂ ಇಷ್ಟವಾಗುತ್ತಾ ಕಾದು ನೋಡಬೇಕಿದೆ.


Click it and Unblock the Notifications