ವಿಜಯವಾಡದಲ್ಲಿ ತೆಲುಗಿನಲ್ಲೇ ರಿಷಬ್ ಶೆಟ್ಟಿ ಮಾತು, ಕನ್ನಡವನ್ನು ಮರೆಯಲಿಲ್ಲ
ಬಹುನಿರೀಕ್ಷಿತ 'ಕಾಂತಾರ- 1' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಈಗಾಗಲೇ ಭರ್ಜರಿ ಪ್ರಚಾರ ನಡೀತಿದ್ದು ರಿಷಬ್ ಶೆಟ್ಟಿ ಮುಂಬೈ, ಹೈದರಾಬಾದ್, ವಿಜಯವಾಡ, ಕೊಚ್ಚಿಗೆ ಹೋಗಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ರಿಷಬ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ತೆಲುಗು ಮಂದಿ ಚಕಾರ ಎತ್ತಿದ್ದರು. ವಿಜಯವಾಡದಲ್ಲಿ ತೆಲುಗಿನಲ್ಲೇ ರಿಷಬ್ ಮಾತನಾಡಿದ್ದಾರೆ.
ನಿನ್ನೆ(ಸೆಪ್ಟೆಂಬರ್ 30) ಸಂಜೆ ವಿಜಯವಾಡದಲ್ಲಿ 'ಕಾಂತಾರ- 1' ಪ್ರೀ ರಿಲೀಸ್ ಈವೆಂಟ್ ನೀಡಿತು. ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಜೊತೆಗೆ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. ಸಾಕಷ್ಟು ಜನ ತೆಲುಗು ಸಿನಿರಸಿಕರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ರಿಷಬ್ ಮಾತು ಕೇಳಿ ಜೈಕಾರ ಹಾಕಿದರು. ನನಗೆ ತೆಲುಗು ಅಷ್ಟಾಗಿ ಮಾತನಾಡಲು ಬರಲ್ಲ. ಮುಂದಿನ ದಿನಗಳಲ್ಲಿ ಚೆನ್ನಾಗಿ ಕಲಿತು ಮಾತನಾಡುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ದಸರಾ ಶುಭಾಶಯ ಕೋರಿ ರಿಷಬ್ ಶೆಟ್ಟಿ ಮಾತು ಆರಂಭಿಸಿದರು. "ಇಷ್ಟು ಪ್ರೀತಿ, ಆಶೀರ್ವಾದ ಕೊಟ್ಟಿದ್ದಕ್ಕೆ ಧನ್ಯವಾದ. ಇವತ್ತಿಗೆ ಸರಿಯಾಗಿ 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ಬಿಡುಗಡೆ ಆಗಿತ್ತು. ಅಷ್ಟು ದೊಡ್ಡದಾಗಿ ಗೆಲ್ಲಿಸಿದ್ರಿ. ಅಕ್ಟೋಬರ್ 2ರಂದು 'ಕಾಂತಾರ- 1' ಬರ್ತಿದೆ. ಅದೇ ಆಶೀರ್ವಾದ ಬೇಕು. ಬೆಂಬಲಿಸಿ. ನನಗೆ ಅಷ್ಟು ಚೆನ್ನಾಗಿ ತೆಲುಗು ಬರಲ್ಲ, ಆದರೂ ಪ್ರಯತ್ನಿಸುತ್ತಿದ್ದೇನೆ. ಮುಖ್ಯವಾಗಿ ನಮ್ಮ ಸಹೋದರ ಜ್ಯೂ. ಎನ್‌ಟಿಆರ್, ಡಾರ್ಲಿಂಗ್ ಪ್ರಭಾಸ್ ಟ್ರೈಲರ್ ಬಿಡುಗಡೆ ಮಾಡಿದ್ರು. ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ಸಿಎಂ ಚಂದ್ರಬಾಬು ನಾಯ್ಡುಗೆ ಧನ್ಯವಾದ" ಎಂದು ಹೇಳಿದ್ದಾರೆ.
ಬಳಿಕ ಕನ್ನಡದಲ್ಲೇ ರಿಷಬ್ ಶೆಟ್ಟಿ ಮಾತನಾಡಿದ್ರು. ಕನ್ನಡಿಗರು ಹಾಗೂ ತೆಲುಗು ಜನ ಎಲ್ಲರೂ ಸಹೋದರರು. ಒಬ್ಬ ಅಪ್ಪಟ ಕನ್ನಡ ಅಭಿಮಾನಿ ಸೋದರ ಭಾಷೆಯನ್ನು ಪ್ರೀತಿಯಿಂದ ಅಭಿಮಾನದಿಂದ ನೋಡುತ್ತಾನೆ. ಅದೇ ಭಾವನೆ ಇದೆ. ಅಕ್ಟೋಬರ್ 2ರಂದು ಎಲ್ಲರೂ ಚಿತ್ರಮಂದಿರಗಳಲ್ಲಿ ಭೇಟಿ ಆಗೋಣ. ಮೈತ್ರಿ ಸಂಸ್ಥೆಯ 'ಜೈ ಹನುಮಾನ್' ಚಿತ್ರದಲ್ಲಿ ನಟಿಸ್ತಿದ್ದೀನಿ. ಆಗ ಸರಿಯಾಗಿ ತೆಲುಗು ಕಲಿತು ಬರ್ತೀನಿ" ಎಂದು ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದರು.
ಒಂದು ದಿನ ಮುನ್ನ ಪ್ರೀಮಿಯರ್ ಶೋ ಮಾಡಲು ಚಿತ್ರತಂಡ ಮುಂದಾಗಿತ್ತು. ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದೆ. ಅಕ್ಟೋಬರ್ ಬೆಳಗ್ಗೆ 6 ಗಂಟೆಗೆ ಎಲ್ಲಾ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತಂದಿದೆ. ಈಗಾಗಲೇ ಆಂಧ್ರದಲ್ಲಿ 'ಕಾಂತಾರ- 1' ಚಿತ್ರದ ಟಿಕೆಟ್ ದರ ಏರಿಕೆಗೆ ಸರ್ಕಾರ ಅನುಮತಿ ನೀಡಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ 100 ರೂ. ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 75 ರೂ. ದರ ಹೆಚ್ಚಿಸಲು ಸರ್ಕಾರ ಒಪ್ಪಿದೆ.
ಈಗಾಗಲೇ ದೇಶ ವಿದೇಶಗಳಲ್ಲಿ ಚಿತ್ರದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. 30 ದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ದೇಶಾದ್ಯಂತ 7000 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಅಂದಾಜಿದೆ. 4 ದಿನಗಳಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿತ್ತು.
ರಿಷಬ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ನಟಿಸಿರುವ ಸಿನಿಮಾ ಇದು. ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ, ಜಯರಾಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ 'ಬ್ರಹ್ಮಕಲಶ' ಸಾಂಗ್ ಬಿಡುಗಡೆಯಾಗಿ ಹಿಟ್ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.


Click it and Unblock the Notifications











