ಮತ್ತೊಂದು ತೆಲುಗು ಚಿತ್ರದಲ್ಲಿ ರಿಷಬ್? ಟಾಲಿವುಡ್‌ನಲ್ಲೇ ಸೆಟ್ಲ್ ಆಗಿ ಬಿಡ್ತಾರಾ ಶೆಟ್ರು?
ನಟ, ನಿರ್ದೇಶಕ ರಿಷಬ್ ಶೆಟ್ಟಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 'ಕಾಂತಾರ' ಬಳಿಕ ರಿಷಬ್ ನಟಿಸಿದ ಯಾವುದೇ ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಮುಂದಿನ ವರ್ಷ ಅಕ್ಟೋಬರ್ 2ರಂದು 'ಕಾಂತಾರ-1' ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಈ ಚಿತ್ರದ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದಾರೆ.
'ಕಾಂತಾರ'-1 ಬಳಿಕ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಅವರು ನಟಿಸಲಿದ್ದಾರೆ. ಪೋಸ್ಟರ್ ಸಮೇತ ಇದು ಘೋಷಣೆ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಲಿದ್ದಾರೆ.

ಇದೀಗ ರಿಷಬ್ ಶೆಟ್ಟಿ ಸೋಲೊ ಹೀರೊ ಆಗಿ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಆ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. 'ಕಾಂತಾರ' ಚಿತ್ರದಿಂದ ಟಾಲಿವುಡ್‌ನಲ್ಲಿ ರಿಷಬ್ ಶೆಟ್ಟಿ ಬಗ್ಗೆ ಭಾರೀ ಕ್ರೇಜ್ ಇದೆ. ಹಾಗಾಗಿ ಅವರಿಗೆ ಸೂಕ್ತವಾದ ಕತೆಗಳನ್ನು ಬರೆಯುವಲ್ಲಿ ಅಲ್ಲಿನ ಫಿಲ್ಮ್ ಮೇಕರ್ಸ್ ಮುಂದಾಗಿದ್ದಾರೆ.
ರಿಷಬ್ ಒಂದರ ಹಿಂದೆ ಒಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿಯ ಸಂಗತಿಯೇ ಸರಿ. ಆದರೆ ಕನ್ನಡದ ಪ್ರತಿಭೆಗಳು ಕನ್ನಡದಲ್ಲಿ ಹೆಚ್ಚು ಸಿನಿಮಾ ಮಾಡಿ ಕನ್ನಡ ಚಿತ್ರರಂಗವನ್ನು ಬೆಳೆಸಬೇಕು ಎನ್ನುವ ಆಗ್ರಹ ಕೂಡ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳ ಅಭಾವ ಎದುರಾಗಿದೆ. ಎಲ್ಲರೂ ಪ್ಯಾನ್ ಇಂಡಿಯಾ ಗುಂಗಿಗೆ ಬಿದ್ದು ದೊಡ್ಡ ಸಿನಿಮಾಗಳ ನಿರ್ಮಾಣ ಕಮ್ಮಿ ಆಗುತ್ತಿದೆ.
ಸ್ಟಾರ್ ನಟರು ಎರಡ್ಮೂರು ವರ್ಷಕ್ಕೆ ಒಂದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಟಾಕ್ಸಿಕ್' ರಿಲೀಸ್ ಯಾವಾಗ ಎನ್ನುವುದು ಗೊತ್ತಿಲ್ಲ. 'ಮ್ಯಾಕ್ಸ್' ಬಳಿಕ ಸುದೀಪ್ ಹೊಸ ಸಿನಿಮಾ ಯಾವಾಗ ಶುರುವಾಗುತ್ತದೆ? ತೆರೆಗೆ ಬರುತ್ತದೆ? ಎನ್ನುವ ಅಂದಾಜಿಲ್ಲ. ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಚಿತ್ರ ಕೂಡ ತಡವಾಗುತ್ತಿದೆ. ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಶುರು ಮಾಡಿಲ್ಲ. ಶ್ರೀಮುರಳಿ, ಶಿವಣ್ಣ, ಗಣೇಶ್, ದುನಿಯಾ ವಿಜಯ್ ಇತ್ತೀಚೆಗೆ ಒಂದೊಂದು ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮುಂದೆ ಬಂದಿದ್ದರು. ಅವರ ಮುಂದಿನ ಸಿನಿಮಾಗಳು ಸದ್ಯಕ್ಕಿಲ್ಲ.

ಇದೀಗ ರಿಷಬ್ ಶೆಟ್ಟಿ ಇನ್ನೊಂದು ತೆಲುಗು ಸಿನಿಮಾ ಒಪ್ಪಿಕೊಂಡರೆ ಅದು ಮುಗಿಯುವುದು ಯಾವಾಗ? ವಾಪಸ್ ಬಂದು ಕನ್ನಡದಲ್ಲಿ ಸಿನಿಮಾ ಮಾಡಲು ಎಷ್ಟು ವರ್ಷ ಬೇಕಾಗುತ್ತದೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಮುಂದಿನ ವರ್ಷ ಕೂಡ 'ಕಾಂತಾರ-1' ಚಿತ್ರದಲ್ಲೇ ರಿಷಬ್ ಮುಳುಗಿರುತ್ತಾರೆ. ಬಳಿಕ 'ಜೈ ಹನುಮಾನ್' ಚಿತ್ರಕ್ಕೆ ಒಂದು ವರ್ಷ. ಆ ಬಳಿಕ ಮತ್ತೊಂದು ತೆಲುಗು ಸಿನಿಮಾನಾ? ಎನ್ನುವ ಚರ್ಚೆ ಸಹಜವಾಗಿಯೇ ಮೂಡುತ್ತದೆ.
'ಆಕಾಶವಾಣಿ' ಎಂಬ ಸಿನಿಮಾ ಕಟ್ಟಿಕೊಟ್ಟಿದ್ದ ಅಶ್ವಿನ್ ಗಂಗರಾಜು ನಿರ್ದೇಶನದ ಮುಂದಿನ ಚಿತ್ರದಲ್ಲಿ ರಿಷಬ್ ನಟಿಸೋ ಸಾಧ್ಯತೆಯಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರ ಜೊತೆ ಸೇರಿ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೊಂದು ಪೀರಿಯಡ್ ಡ್ರಾಮಾ ಸಿನಿಮಾ ಎಂದು ವರದಿಯಾಗಿದೆ.
ಶೀಘ್ರದಲ್ಲೇ ಈ ಸಿನಿಮಾ ಘೋಷಣೆ ಆಗುತ್ತದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. ರಿಷಬ್ ಶೆಟ್ಟಿ ತೆಲುಗು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಅಂದಹಾಗೆ 'ಕಾಂತಾರ' ಚಿತ್ರಕ್ಕೂ ಮುನ್ ತೆಲುಗು ಚಿತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ರಿಷಬ್ ನಟಿಸಿದ್ದರು. 'ಮಿಷನ್ ಎಂಪಾಸಿಬಲ್' ಎಂಬ ಚಿತ್ರದಲ್ಲಿ ಖಲೀಲ್ ಎನ್ನುವ ಪಾತ್ರದಲ್ಲಿ ಮಿಂಚಿದ್ದರು.


Click it and Unblock the Notifications











