ವಾರೆವ್ಹಾ.. ಒಂದೇ ಚಿತ್ರದಲ್ಲಿ ರಿಷಬ್ ಶೆಟ್ಟಿ- ಪ್ರಭಾಸ್; ಕಥೆಯೇನು?
ಕನ್ನಡ ಸಿನಿಮಾ, ತೆಲುಗು ಸಿನಿಮಾ, ತಮಿಳು ಸಿನಿಮಾ ಅಲ್ಲ. ಈಗ ಏನಿದ್ದರೂ ಇಂಡಿಯನ್ ಸಿನಿಮಾ. ಹೌದು. ಸಣ್ಣ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರಲ್ಲ ಎಂದು ಸ್ಟಾರ್ ನಟರು, ಫಿಲ್ಮ್ ಮೇಕರ್ಸ್ ನಿರ್ಧರಿಸಿದ್ದಂತಿದೆ. ಈಗ ಬರೀ ಪ್ಯಾನ್ ಇಂಡಿಯಾ ಜಪ ಮಾಡುತ್ತಿದ್ದಾರೆ.
ದೊಡ್ಡ ದೊಡ್ಡ ಸ್ಟಾರ್‌ಗಳು ಒಟ್ಟಿಗೆ ಸೇರಿ ಸಿನಿಮಾ ಮಾಡುವುದು. 300, 400, 500 ಕೋಟಿ ರೂ. ಸುರಿಯುವುದು. ದೊಡ್ಡ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ರಿಲೀಸ್ ಮಾಡೋದು. 1000 ಕೋಟಿ ರೂ. ಕಲೆಕ್ಷನ್ ಮಾಡುವ ಟಾರ್ಗೆಟ್ ಇಟ್ಟುಕೊಳ್ಳುವುದು. ಸದ್ಯ ಚಿತ್ರರಂಗದಲ್ಲಿ ಇದೇ ಈಗ ಟ್ರೆಂಡ್ ಆಗಿದೆ.

ಸ್ಟಾರ್ ನಟರು, ನಿರ್ದೇಶಕರು ಭಾಷೆಯ ಗಡಿಮೀರಿ ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. 'ಕಾಂತಾರ'-1 ಬಳಿಕ ರಿಷಬ್ ಶೆಟ್ಟಿ ತೆಲುಗು ಹಾಗೂ ಬಾಲಿವುಡ್ ಚಿತ್ರಗಳಿಗೆ ಕಾಲ್‌ಶೀಟ್ ಕೊಟ್ಟಿದ್ದಾರೆ. 'ಜೈ ಹನುಮಾನ್' ಚಿತ್ರದಲ್ಲಿ ಹನುಮಂತನ ಪಾತ್ರ ಮಾಡುತ್ತಿದ್ದಾರೆ. ಇನ್ನು ಶಿವಾಜಿ ಬಯೋಪಿಕ್‌ನಲ್ಲಿ ಕೂಡ ನಟಿಸುತ್ತಿದ್ದಾರೆ.
ಇದೀಗ ಪ್ರಭಾಸ್ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಐ ಜೋಡಿಸುವ ಬಗ್ಗೆ ಗುಸುಗುಸು ಶುರುವಾಗಿದೆ. ಈಗಾಗಲೇ ಯಂಗ್ ರೆಬಲ್ ಸ್ಟಾರ್ ಜೊತೆ ಹೊಂಬಾಳೆ ಫಿಲ್ಮ್ಸ್ 3 ಸಿನಿಮಾಗಳನ್ನು ಘೋಷಿಸಿದೆ. ಅದರಲ್ಲಿ ಒಂದು ಚಿತ್ರಕ್ಕೆ ರಿಷಬ್ ಶೆಟ್ಟಿ ಕಥೆ ಒದಗಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಹೊಂಬಾಳೆ ಜೊತೆ ರಿಷಬ್ ಒಡನಾಟ ಬಹಳ ಚೆನ್ನಾಗಿದೆ. ಹಾಗಾಗಿ ಇಂತಾದೊಂದು ಚರ್ಚೆ ನಡೀತಿದೆಯಂತೆ.
ರಿಷಬ್ ಶೆಟ್ಟಿ ನಟನೆಗಿಂತಲೂ ತಮ್ಮ ಬರವಣಿಗೆ ಹಾಗೂ ನಿರ್ದೇಶನದಿಂದ ಹೆಚ್ಚು ಗಮನ ಸೆಳೆದವರು. ತಮ್ಮದೇ ತಂಡ ಕಟ್ಟಿಕೊಂಡು ಕತೆಗಳನ್ನು ಬರೆಯುತ್ತಿರುತ್ತಾರೆ. ಭಿನ್ನ ವಿಭಿನ್ನ ಕಥೆಗಳು ರಿಷಬ್ ತಲೆಯಲ್ಲಿದೆ. ಅದಕ್ಕೆಲ್ಲಾ ಸಿನಿಮಾ ರೂಪ ಸಿಗುವ ಸಮಯ ಹತ್ತಿರಬರ್ತಿದೆ. ಪ್ರಭಾಸ್ ಚಿತ್ರಕ್ಕೆ ಕಥೆ ಮಾಡುವಂತೆ ಹೊಂಬಾಳೆ ಸಂಸ್ಥೆ ರಿಷಬ್ ಶೆಟ್ಟಿ ಬಳಿ ಕೇಳಿದ್ದಾರಂತೆ. ಅದಕ್ಕೆ ಅವರು ಒಪ್ಪಿದ್ದಾರೆ ಎಂದು ಟಾಲಿವುಡ್‌ನಲ್ಲಿ ಈಗ ಗುಲ್ಲಾಗಿದೆ.
ಬಾಹುಬಲಿ ನಟ ಪ್ರಭಾಸ್ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ 'ಸಲಾರ್' ಸಿನಿಮಾ ಮಾಡಿ ಗೆದ್ದರು. ಹೊಂಬಾಳೆ ಸಂಸ್ಥೆಯೇ ಚಿತ್ರವನ್ನು ನಿರ್ಮಿಸಿತ್ತು. 'ಸಲಾರ್-2' ಕೂಡ ಬರಬೇಕಿದೆ. ಸದ್ಯ 'ರಾಜಾ ಸಾಬ್' ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸುತ್ತಿದ್ದಾರೆ. 'ಫೌಜಿ' ಎನ್ನುವ ಮತ್ತೊಂದು ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ. ಬಳಿಕ 'ಸ್ಪಿರಿಟ್' ಚಿತ್ರದಲ್ಲಿ ನಟಿಸಬೇಕಿದೆ. ಆ ನಂತರದ ಚಿತ್ರಕ್ಕೆ ರಿಷಬ್ ಕಥೆ ಒದಗಿಸುವ ಸಾಧ್ಯತೆಯಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ. ಇತ್ತೀಚೆಗೆ 'ಬಘೀರ' ಸಿನಿಮಾ ಮಾಡಿ ಸಂಸ್ಥೆ ಗೆದ್ದಿತ್ತು. ಮುಂದೆ 'ಕಾಂತಾರ'-1 ಸಿನಿಮಾ ಬರ್ತಿದೆ. ಅಕ್ಟೋಬರ್ 2ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸುವ 'ರಿಚರ್ಡ್ ಆಂಟನಿ' ಚಿತ್ರಕ್ಕೂ ಸಂಸ್ಥೆ ಹಣ ಹೂಡಲಿದೆ.
ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸಲಾರ್'-2 ಜೊತೆಗೆ ಮತ್ತೆರಡು ಸಿನಿಮಾ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿದೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಎರಡು ಚಿತ್ರಗಳನ್ನು ಯಾರು ನಿರ್ದೇಶನ ಮಾಡುತ್ತಾರೆ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಯಾರ ಚಿತ್ರಕ್ಕೆ ರಿಷಬ್ ಕಥೆ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.
ಹೊಂಬಾಳೆ ಸಂಸ್ಥೆ 'KGF ಚಾಪ್ಟರ್- 3' ಸಿನಿಮಾ ಕೂಡ ಘೋಷಣೆ ಮಾಡಿದೆ. ಅದು ಯಾವಾಗ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ತಮ್ಮ ಬೇರೆ ಬೇರೆ ಕಮೀಟ್‌ಮೆಂಟ್ ಮುಗಿಸಿದ ಬಳಿಕ 'KGF-3'ಗೆ ಮತ್ತೆ ಜೊತೆಯಾಗಲಿದ್ದಾರೆ.


Click it and Unblock the Notifications











