'ವಾರಣಾಸಿ' ಎದುರು ಕಳೆದುಹೋಗುವ ಭಯ; 'ಜೈ ಹನುಮಾನ್' ಸ್ಪೀಡ್ ಹೆಚ್ಚಿಸಿದ ಟೀಂ
'ಕಾಂತಾರ- 1' ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಆರ್ಭಟ ಇನ್ನು ಕಮ್ಮಿ ಆಗಿಲ್ಲ. ವಿಶ್ವದಾದ್ಯಂತ ಸಿನಿಮಾ ಗಳಿಕೆ 800 ಕೋಟಿ ರೂ. ದಾಟಿ ಮುಂದುವರೆದಿದೆ. ಇದೆಲ್ಲದರ ನಡುವೆ ಶೀಘ್ರದಲ್ಲೇ ರಿಷಬ್ ಶೆಟ್ಟಿ ಹೊಸ ಸಿನಿಮಾ ಚಿತ್ರೀಕರಣ ಆರಂಭಿಸಲು ಮುಂದಾಗಿದ್ದಾರೆ.
ಈಗಾಗಲೇ ರಿಷಬ್ ನಟನೆಯ 'ಜೈ ಹನುಮಾನ್' ಸಿನಿಮಾ ಘೋಷಣೆಯಾಗಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರವನ್ನು ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಫೋಟೊಶೂಟ್ ಕೂಡ ಮಾಡಿ ಮುಗಿಸಿದ್ದಾರೆ. ಚಿತ್ರದಲ್ಲಿ ಹನುಮಂತನ ವೇಷದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಜಮೌಳಿ ಹಾಗೂ ಮಹೇಶ್ ಬಾಬು ಜೋಡಿಯ 'ವಾರಣಾಸಿ' ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಗೊತ್ತೇಯಿದೆ. ಇದೇ ಈಗ 'ಜೈ ಹನುಮಾನ್' ಚಿತ್ರತಂಡಕ್ಕೆ ಆತಂಕ ತಂದಿದೆ ಎನ್ನಲಾಗ್ತಿದೆ.

'ವಾರಣಾಸಿ' ಚಿತ್ರದಲ್ಲಿ ರಾಮಾಯಣದ ಒಂದು ಎಪಿಸೋಡ್ ಕೂಡ ಇರಲಿದೆ ಎಂದು ರಾಜಮೌಳಿ ಘೋಷಿಸಿದ್ದಾರೆ. ಮಹೇಶ್ ಬಾಬು ಶ್ರೀರಾಮನಾಗಿ ನಟಿಸುತ್ತಿದ್ದಾರೆ ಎಂದಿದ್ದಾರೆ. ಹನುಮಂತನಾಗಿ ಯಾರು ನಟಿಸಬಹುದು ಎನ್ನುವ ಚರ್ಚೆ ಶುರುವಾಗಿದೆ. ಯಾವುದೇ ಕಥೆ ಆಗಿದ್ದರೂ ರಾಜಮೌಳಿ ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಹಾಗಾಗಿ ರಾಮಾಯಣದ ಈ ಭಾಗವನ್ನು ಹೇಗೆ ತೆರೆಗೆ ತರುತ್ತಾರೆ ಎನ್ನುವ ಕುತೂಹಲ ಮೂಡಿದೆ.
ರಾಜಮೌಳಿ ಅಷ್ಟು ಸೊಗಸಾಗಿ ಶ್ರೀರಾಮ- ಹನುಮಂತನ ಕಥೆ ಹೇಳಿದ್ರೆ ಅದಕ್ಕಿಂತ ಅದ್ಭುತವಾಗಿ 'ಜೈ ಹನುಮಾನ್' ಸಿನಿಮಾ ಮಾಡಬೇಕು. ಇದೇ ಈಗ ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ. 'ವಾರಣಾಸಿ' ಸಿನಿಮಾ ಎದುರು ನಮ್ಮ ಸಿನಿಮಾ ಕಳೆದು ಹೋಗಬಹುದು ಎಂದು ಆತಂಕದಲ್ಲಿರುವ ಚಿತ್ರತಂಡ ಆದಷ್ಟು ಬೇಗ 'ಜೈ ಹನುಮಾನ್' ಸಿನಿಮಾ ಮಾಡಿ ಮುಗಿಸುವ ಲೆಕ್ಕಾಚಾರದಲ್ಲಿದೆ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ.

ಜನವರಿಯಿಂಧ ಜೂನ್‌ವರೆಗೆ 6 ತಿಂಗಳ ಕಾಲ 'ಜೈ ಹನುಮಾನ್' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಕಾಲ್ ಶೀಟ್ ಕೊಟ್ಟಿದ್ದಾರಂತೆ. ಮುಂದಿನ ವರ್ಷವೇ ಸಿನಿಮಾ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರುವ ಪ್ರಯತ್ನ ನಡೀತಿದೆ. 2027ರ ಸಮ್ಮರ್‌ನಲ್ಲಿ 'ವಾರಣಾಸಿ' ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಶತಾಯ ಗತಾಯ 'ಜೈ ಹನುಮಾನ್' ಸಿನಿಮಾ ತೆರೆಗೆ ತರಬೇಕು ಎಂದು ಚಿತ್ರತಂಡ ಭಾವಿಸಿದೆ ಎಂದು ಹೇಳಲಾಗ್ತಿದೆ.
ಕುಂದಾಪುರಕ್ಕೆ ಹೋಗಿ 'ಕಾಂತಾರ- 1' ಸೆಟ್‌ನಲ್ಲೇ 'ಜೈ ಹನುಮಾನ್' ಸಿನಿಮಾ ಕಥೆ ಹೇಳಿ ಪ್ರಶಾಂತ್ ವರ್ಮಾ ಒಪ್ಪಿಸಿದ್ದರು. ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟ ರಿಷಬ್ ಶೆಟ್ಟಿ ಕೂಡಲೇ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇನ್ನು ಪೋಸ್ಟರ್‌ನಲ್ಲಿ ಅವರ ಲುಕ್ ಕೂಡ ವಿವಾದಕ್ಕೆ ಕಾರಣವಾಗಿತ್ತು. ಹನಮಂತನನ್ನು ವಾನರನ ರೀತಿ ತೋರಿಸದೇ ಸಾಮಾನ್ಯ ಮನುಷ್ಯಂತೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ತಪ್ಪು ಚಿತ್ರಣ ಕೊಟ್ಟಂತೆ ಆಗುತ್ತದೆ ಎನ್ನುವ ಆರೋಪ ಬಂದಿತ್ತು. ಈ ಸಂಬಂಧ ದೂರು ಸಹ ದಾಖಲಾಗಿದೆ.
'ಕಾಂತಾರ' ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆ ಹೆಚ್ಚು ಮುಖ ಮಾಡಿದ್ದಾರೆ. 'ಜೈ ಹನುಮಾನ್' ಬಳಿಕ ಶಿವಾಜಿ ಬಯೋಪಿಕ್‌ನಲ್ಲಿ ನಟಿಸುವ ಸಾಧ್ಯತೆಯಿದೆ. 'ಹನುಮಾನ್' ಸಿನಿಮಾ ಕಟ್ಟಿಕೊಟ್ಟು ಗೆದ್ದ ಪ್ರಶಾಂತ್ ವರ್ಮಾ ಒಂದಷ್ಟು ಸಿನಿಮಾಗಳನ್ನು ಘೋಷಿಸಿದ್ದಾರೆ. ಎಲ್ಲರ ಬಳಿ ಅಡ್ವಾನ್ಸ್ ಪಡೆದು ಯಾವುದೇ ಸಿನಿಮಾ ಶುರು ಮಾಡ್ತಿಲ್ಲ ಎನ್ನುವ ಆರೋಪ ಬಂದಿತ್ತು.
'ಕಾಂತಾರ- 1' ಸಿನಿಮಾ ಕೆಲಸಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಇದ್ದರು. ಹಾಗಾಗಿ ಚಿತ್ರೀಕರಣಕ್ಕೆ ಸಮಯ ಸಿಕ್ಕಿರಲಿಲ್ಲ. ಜನವರಿಯಲ್ಲಿ 'ಜೈ ಹನುಮಾನ್' ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎಂದು ಹೇಳಲಾಗ್ತಿದೆ. ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಹೈಪ್ ಕ್ರಿಯೇಟ್ ಮಾಡ್ತಿದೆ.


Click it and Unblock the Notifications











