ರಿಷಿಗೆ ಒದಗಿ ಬಂದ ಸುವರ್ಣಾವಕಾಶ ; ಬಾಲಯ್ಯ ಎದುರು ಅಬ್ಬರಿಸಲಿರುವ ಕನ್ನಡದ ಮತ್ತೊಬ್ಬ ನಟ..!
ಅನುರೂಪ ಧಾರಾವಾಹಿಯಲ್ಲಿ ಲಂಬು ಮೇಷ್ಟ್ರಾಗಿ ಕಿರುತೆರೆಗೆ ಲಗ್ಗೆ ಇಟ್ಟವರು ರಿಷಿ. ಅದಾದ ಮೇಲೆ ಬೆಳ್ಳಿ ತೆರೆಯನ್ನೂ ಕೂಡ ಪ್ರವೇಶಿಸಿದರು. ಆಪರೇಷನ್ ಅಲಮೇಲಮ್ಮ, ಕವಲುದಾರಿ, ಸಾರ್ವಜನಿಕರಿಗೆ ಸುವರ್ಣಾವಕಾಶ, ಹೀಗೆ ಭಿನ್ನ..ವಿಭಿನ್ನ ಪಾತ್ರಗಳ ಮೂಲಕ ಜನರ ಮನಸನ್ನೂ ಗೆದ್ದರು.
ಆದರೆ ಹಿತ್ತಲ ಗಿಡ ಮದ್ದಲ್ಲ. ಎಂಥಾ ಭಾವನೆಗಳನ್ನ ಬೇಕಾದರೂ ವ್ಯಕ್ತಪಡಿಸಬಲ್ಲ ಕಲೆಯನ್ನ ಹೊಂದಿರುವ ಈ ಕಲಾವಿದನನ್ನ ಕನ್ನಡ ಚಿತ್ರರಂಗ ಅದ್ಯಾಕೋ ಸರಿಯಾಗಿ ಬಳಸಿಕೊಳ್ತಿಲ್ಲ. ಇಂಥಹದ್ದೊಂದು ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿಯೂ ಇದೆ. ಖುದ್ದು ರಿಷಿಗೂ ಈ ವಿಚಾರದಲ್ಲಿ ಅಸಮಾಧಾನ ಇದ್ದಂತೆ ಇದೆ. ಹೀಗಾಗಿಯೇ ಪರಭಾಷೆಯತ್ತ ಮುಖ ಮಾಡಿರುವ ರಿಷಿ, ಈಗಾಗಲೇ ತೆಲುಗಿನ ವೆಬ್ ಸರಣಿ ಶೈತಾನ್ ಗೆ ಬಣ್ಣ ಹಚ್ಚಿದ್ದಾರೆ. ತಮ್ಮ ಅಭಿನಯದಿಂದ ಅಲ್ಲಿನ ಸಿನಿಪ್ರೇಮಿಗಳ ಹೃದಯವನ್ನ ಗೆದ್ದಿದ್ದಾರೆ. ಇಷ್ಟೇ ಅಲ್ಲ ತೆಲುಗು ನಿರ್ದೇಶಕ ಹಾಗೂ ನಿರ್ಮಾಪಕರ ಗಮನವನ್ನೂ ಸೆಳೆದಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ತೆಲುಗುದಲ್ಲಿ ಸದ್ಯಕ್ಕೆ ರಿಷಿಗೆ ಮತ್ತೊಂದು ಸುವರ್ಣಾವಕಾಶ ಸಿಕ್ಕಿದೆ. ವಿಶೇಷ ಅಂದರೆ ನಮ್ಮಲ್ಲಿನ ನಾಯಕ ರಿಷಿ ಇಲ್ಲಿ ಖಳನಾಯಕನಾದರೆ ತನ್ನದೇ ಆದ ಚರಿಷ್ಮಾ ಸೃಷ್ಟಿ ಮಾಡಿಕೊಂಡಿರುವ ತೆಲುಗು ಚಿತ್ರರಂಗದ ಸ್ಟಾರ್ ನಟ ಬಾಲಯ್ಯ ಈ ಚಿತ್ರದ ಕಥಾನಾಯಕ.

ಬಾಬಿ ಕೊಲ್ಲಿ ಈ ಚಿತ್ರದ ನಿರ್ದೇಶಕ. ಶೈತಾನ್ ವೆಬ್ ಸಿರೀಸ್ ನಲ್ಲಿ ರಿಷಿ ಅಭಿನಯಕ್ಕೆ ಮನ ಸೋತ ಬಾಬಿ ಕೊಲ್ಲಿ ಅವತ್ತೇ ತಮ್ಮ ಚಿತ್ರದ ಖಳನಾಯಕ ರಿಷಿಯೆಂಬ ತೀರ್ಮಾನಕ್ಕೆ ಬಂದಿದ್ದರು. ಹೀಗೆಂದು ಬಾಬಿ, ರಿಷಿಗೆ ಹೇಳಿದ್ದಾರೆ ಕೂಡ. ಇನ್ನೂ ಚಿತ್ರದ ಕಥೆಯನ್ನಷ್ಟೇ ವಿವರಿಸದೇ ರಿಷಿ ಪಾತ್ರ ಹೇಗಿರಲಿದೆ ಎಂಬುದರ ಸ್ಕೆಚ್ ನ್ನೂ ಕೂಡ ಬಾಬಿ ಕೊಲ್ಲಿ ರಿಷಿಗೆ ಅವರಿಗೆ ತೋರಿಸಿದ್ದಾರೆ. ನಿರ್ದೇಶಕರ ಈ ಶ್ರದ್ಧೆ ಹಾಗೂ ಪ್ರೀತಿಗೆ ಮನ ಸೋತ ರಿಷಿ ಸದ್ಯಕ್ಕೆ ಬಾಲಯ್ಯ ಎದುರು ಅಬ್ಬರಿಸಲು ಸಿದ್ಧವಾಗುತ್ತಿದ್ದಾರೆ
ಇನ್ನೂ ನಿಮಗೆ ಗೊತ್ತು ತೆರೆ ಮೇಲೆ ಸಿಂಹದಂತೆ ಗರ್ಜಿಸೋ ಬಾಲಯ್ಯ ಚಿತ್ರದ ಖಳರ ವಿರುದ್ಧ ನಡೆಸುವ ಆಟಾಟೋಪಗಳು ಒಂದೆರಡಲ್ಲ. ತುಪಾಕಿಯಿಂದ ಸಿಡಿದ ಗುಂಡಿನಂತೆ ಮಾತಾಡೋ ಬಾಲಯ್ಯನ ಡೈಲಾಗ್ಸ್‍ಗೆ ಚಪ್ಪಾಳೆ ಶಿಳ್ಳೆ ಖಚಿತ. ಈ ಕಾರಣಕ್ಕೆ ಬಾಲಯ್ಯ ಸಿನಿಮಾದಲ್ಲಿ ಖಳನಾಯಕರ ದಂಡು ತುಸು ಹೆಚ್ಚಿರುತ್ತೆ. ಆ ದಂಡು ಇಲ್ಲಿಯೂ ಇದೆ. ಇನ್ನೂ ವಿಶೇಷ ಅಂದರೆ ಆ ದಂಡಿನ ನಾಯಕತ್ವವನ್ನ ಬಾಲಿವುಡ್ ನಲ್ಲಿ ಲಾರ್ಡ್ ಬಾಬಿ ಎಂದೆ ಕರೆಯಲ್ಪಡುವ ಬಾಬಿ ಡಿಯೋಲ್ ವಹಿಸಿಕೊಂಡಿದ್ದಾರೆ.

ದಕ್ಷಿಣದಲ್ಲಿ ಬಾಬಿ ಡಿಯೋಲ್ ಗೆ ಭಾರೀ ಬೇಡಿಕೆ
ಆನಿಮಲ್ ಚಿತ್ರದ ಗೆಲುವಿನ ನಂತರ, ಏಕಾಏಕಿ ಬಾಬಿ ಡಿಯೋಲ್ ಅವರಿಗೆ ಬೇಡಿಕೆ ಸೃಷ್ಟಿಯಾಗಿದೆ. ಇದಕ್ಕೆ ಪೂರಕವಾಗಿ ತಮಿಳಿನಲ್ಲಿ ಬಾಬಿ ಡಿಯೋಲ್ ಸೂರ್ಯ ಎದುರು ಕಣಕ್ಕಿಳಿದಿದ್ದಾರೆ. ಈಗ ಬಾಲಯ್ಯ ಸಿನಿಮಾದ ಮೂಲಕ ತೆಲುಗು ಚಿತ್ರರಂಗವನ್ನೂ ಪ್ರವೇಶಿಸಿದ್ದಾರೆ. ಇನ್ನೂ ಹೆಸರಿಡದ ಬಾಲಯ್ಯ ಅವರ 109ನೇ ಸಿನಿಮಾದಲ್ಲಿ ಖಳನಾಯಕರಾಗಿ ಕಾಣಿಸಿಕೊಳ್ತಿದ್ದಾರೆ. ಬಾಬಿ ಡಿಯೋಲ್ ಪಕ್ಕ ನಮ್ಮ ಕನ್ನಡದ ರಿಷಿ ಕೂಡ ಇರಲಿದ್ದಾರೆ.

ಬಾಬಿ ಡಿಯೋಲ್ ಜೊತೆ ರಿಷಿ
ಒಂದು ಕಡೆ ಬಾಲಯ್ಯ, ಇನ್ನೊಂದು ಕಡೆ ಬಾಬಿ ಡಿಯೋಲ್.. ರಿಷಿ ಸಂಭ್ರಮವನ್ನ ಸದ್ಯಕ್ಕೆ ಇವೆರಡು ಹೆಸರು ಹೆಚ್ಚಿಸಿವೆ. ಹೀಗಾಗಿಯೇ ಬಾಲ್ಯದ ದಿನಗಳಲ್ಲಿ ಬಾಬಿ ಡಿಯೋಲ್ ಸಿನಿಮಾಗಳನ್ನ ನೋಡುತ್ತಾ ಬಂದವನು ಈಗ ಅವರ ಜೊತೆ ಖಳನಾಯಕನಾಗಿ ತೆರೆ ಹಂಚಿಕೊಳ್ತಿದ್ದೇನೆ ಇದ್ದಕ್ಕಿಂತ ಸೌಭಾಗ್ಯ ಇನ್ನೆಲ್ಲಿದೆ ಎನ್ನುವ ರಿಷಿ, ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications











