"ಮಗನನ್ನು ತಬ್ಬಿಕೊಂಡ ಫೋಟೊ ಬೆತ್ತಲಾಗಿ ಮಾರ್ಫ್ ಮಾಡಿ ಕಿರುಕುಳ.. ಯಾಕೀ ದ್ವೇಷ"; ರೋಜಾ ಕಣ್ಣೀರು
ಬಹುಭಾಷಾ ನಟಿ, ರಾಜಕೀಯ ನಾಯಕಿ ರೋಜಾ ಕಣ್ಣೀರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತನಗೆ ಕಿರುಕುಳ ಕೊಡುತ್ತಿದ್ದಾರೆ. ಬಹಿರಂಗವಾಗಿ ನನ್ನನ್ನು ಟಾರ್ಗೆಟ್ ಮಾಡಿ ಮಾತನಾಡುವುದು ಮಾತ್ರವಲ್ಲದೇ ನನ್ನ ಮಕ್ಕಳಿಗೂ ಕಿರುಕುಳ ನೀಡುತ್ತಿದ್ದಾರೆ. ಟಿಟಿಪಿ ಹಾಗೂ ಜನಸೇನಾ ನಾಯಕರು ಬೇಕೆಂದೇ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆಂಧ್ರದ ಮಾಜಿ ಸಚಿವೆ ರೋಜಾ ವೈಆರ್‌ಎಸ್ ಕಾಂಗ್ರೆಸ್ ಪಕ್ಷದ ಫೈರ್‌ಬ್ರ್ಯಾಂಡ್ ಎಂದೇ ಹೆಸರಾಗಿದ್ದಾರೆ. ಎದುರಾಳಿ ಪಕ್ಷದ ನಾಯಕರನ್ನು ತಮ್ಮ ವಾಗ್ದಾಳಿಯಿಂದ ಕಟ್ಟಿಹಾಕುತ್ತಾರೆ. ಕಳೆದ ಆಂಧ್ರ ಚುನಾವಣೆಯಲ್ಲಿ ವೈಆರ್‌ಎಸ್ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿತ್ತು. ಬಿಜೆಪಿ, ಟಿಡಿಪಿ ಹಾಗೂ ಜನಸೇನಾ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಟಿಡಿಪಿ ಹಾಗೂ ಜನಸೇನಾ ನಾಯಕರು, ಅವರ ಹಿಂಬಾಲಕರು ನನಗೆ ಹಿಂಸೆ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ಸ್ ಮಾಡಿ ನೋವು ಕೊಡುತ್ತಿದ್ದಾರೆ ಎಂದು ರೋಜಾ ಆವೇದನೆ ವ್ಯಕ್ತಪಡಿಸಿದ್ದಾರೆ.

ಮೊದಲಿನಿಂದಲೂ ಜಗನ್‌ಮೋಹನ್ ರೆಡ್ಡಿ ನನ್ನನ್ನು ಸಹೋದರಿ ರೀತಿ ಜೊತೆಗೆ ನಿಂತಿದ್ದಾರೆ. ನನ್ನ ಪತಿ ಹಾಗೂ ಸಹೋದರರು ಬೆಂಬಲವಾಗಿರುವುದರಿಂದ ನಾನು ಇವತ್ತಿಗೂ ಹೋರಾಟ ಮಾಡುತ್ತಿದ್ದೇವೆ ಎಂದು ರೋಜಾ ಹೇಳಿದ್ದಾರೆ. ಸಾಕ್ಷಿ ಟಿವಿ ಸಂದರ್ಶನದಲ್ಲಿ ಈ ಬಗ್ಗೆ ನೋವು ತೋಡಿಕೊಂಡಿದ್ದಾರೆ. "ನನ್ನ ಮಕ್ಕಳ ಫೋಟೊಗಳನ್ನು ಕೂಡ ಮಾರ್ಫ್ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ" ಎಂದು ರೋಜಾ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಪತಿ ಕೂಡ ಇದನ್ನೆಲ್ಲಾ ಎಷ್ಟು ದಿನ ನೋಡಿ ಸಹಿಸಿಕೊಳ್ಳಲು ಸಾಧ್ಯ? ಎಂದು ರೋಜಾ ಪ್ರಶ್ನಿಸಿದ್ದಾರೆ. ನಾನು ತಿರುಪತಿಯಲ್ಲಿ ಹುಟ್ಟಿ ಚೆನ್ನೈನಲ್ಲಿ ಬೆಳೆದೆ. ಬಳಿಕ ಚಿತ್ರರಂಗಕ್ಕೆ ಬಂದೆ. ಈಗ ರಾಜಕೀಯರಂಗದಲ್ಲಿದ್ದೀನಿ. ಟಿಡಿಪಿಯವರನ್ನು ಕೆಲವರನ್ನು ಬಳಸಿಕೊಂಡು ನನ್ನನ್ನು ಬೈಯ್ಯುವಂತೆ ಮಾಡಿದ್ದಾರೆ. ಭಾನು ಪ್ರಕಾಶ್ ಈಗ ನನ್ನನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಇದಕ್ಕೆಲ್ಲಾ ಯಾರ ಕುಮ್ಮಕ್ಕು ಇದೆ. ನನಗೂ ಸಮಯ ಬರುತ್ತದೆ. ನನಗೆ ನೋವು ಕೊಟ್ಟವರು ಸರಿಯಾಗಿ ಪೆಟ್ಟು ತಿಂದಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡುಗೂ ಈ ಅನುಭವವಾಗಿದೆ. ಮತ್ತೆ ನನ್ನ ತಂಟೆಗೆ ಬರ್ತಿದ್ದಾರೆ. ಪ್ರತಿಫಲ ಕಟ್ಟಿಟ್ಟ ಬುತ್ತಿ ಎಂದು ರೋಜಾ ಅಸಮಾಧಾನ ಹೊರ ಹಾಕಿದ್ದಾರೆ.
"ನನ್ನ ಮಗ ಬಂದು ನನ್ನನ್ನು ತಬ್ಬಿಕೊಳ್ಳುತ್ತಾನೆ. ಅಂತಹ ಫೋಟೊಗಳನ್ನು ಬೆತ್ತಲಾಗಿ ಎಡಿಟ್ ಮಾಡಿ ಅವನಿಗೆ ಕಳ್ಸಿದ್ದಾರೆ. ನನ್ನ ಮಗ ಸದಾ ಆಕ್ಟೀವ್ ಆಗಿ ಇರುತ್ತಿದ್ದ. ಈ ಫೋಟೊಗಳನ್ನು ನೋಡಿದ ಮೇಲೆ ಡಿಪ್ರೆಷನ್‌ಗೆ ಹೋಗಿದ್ದ. ಇದ್ದಕ್ಕಿದಂತೆ ಸೈಲೆಂಟ್ ಆಗಿಬಿಟ್ಟ. ಬಳಿಕ ಯಾಕೆ ಎಂದು ವಿಚಾರಿಸಿದ್ದಾಗ ನಿಧಾನವಾಗಿ ಆ ಫೋಟೊಗಳ ವಿಚಾರ ಹೇಳಿದ. ಆ ಫೋಟೊಗಳನ್ನು ನೋಡಿದಾಗ ಸೂಸೈಡ್ ಮಾಡಿಕೊಳ್ಳಬೇಕು ಎನಿಸಿತು. ನನಗೆ ಆ ರೀತಿ ಅನ್ನಿಸಿದ್ರೆ, ನನ್ನ ಮಗನಿಗೆ ಹೇಗೆ ಅನ್ನಿಸಬಹುದು. ಇಂತಹ ಟಾರ್ಚರ್ ತಡೆಯೋಕೆ ಆಗದೇ ನನ್ನ ಮಗಳು ಅಮೆರಿಕಾಗೆ ಹೋಗಿಬಿಟ್ಲು" ಎಂದು ರೋಜಾ ಕಣ್ಣೀರಾಗಿದ್ದಾರೆ.
ಮಾತು ಮುಂದುವರೆಸಿರುವ ರೋಜಾ "ನಾನು ವರಲಕ್ಷ್ಮಿ ವ್ರತ, ಸಂಕ್ರಾಂತಿ ಹಬ್ಬ, ಮಕ್ಕಳ ಹುಟ್ಟು ಆಚರಿಸಿ ಫೋಟೊ, ವೀಡಿಯೋ ಶೇರ್ ಮಾಡಿದ್ರೆ ಅದಕ್ಕೂ ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಅಂದರೆ ಎಷ್ಟು ದ್ವೇಷ ಸಾಧಿಸುತ್ತಿದ್ದಾರೆ. ಎಷ್ಟು ಅವಮಾನಿಸುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಜನ ನನ್ನ ಜೊತೆಗಿದ್ದಾರೆ. ಬಂಡಾರು ಸತ್ಯನಾರಾಯಣ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಚಿತ್ರರಂಗದ ಹಲವರು ಬೆಂಬಲ ಸೂಚಿಸಿದ್ದರು. ಅವರೆಲ್ಲರ ಬೆಂಬಲದಿಂದಲೇ ನಾನು ಇನ್ನು ಹೋರಾಟ ಮುಂದುವರೆಸಿದ್ದೇನೆ" ಎಂದು ರೋಜಾ ವಿವರಿಸಿದ್ದಾರೆ.


Click it and Unblock the Notifications











