ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 'RRR' ಟೀಮ್ ಎಚ್ಚರಿಕೆ: ತಪ್ಪಿನ ಅರಿವಾಗಿ ಕ್ಷಮೆ ಕೇಳಿದ ಸಂಜು ಸ್ಯಾಮ್ಸನ್ ಟೀಂ
ಈ ಬಾರಿ ಸನ್ ರೈಸರ್ಸ್ ವರ್ಸಸ್ ರಾಜಸ್ಥಾನ್ ರಾಯಲ್ಸ್ ಪಂದ್ಯ ಭಾರೀ ಕುತೂಹಲ ಮೂಡಿಸಿತ್ತು. ಇನ್ನೇನು ಹೈದರಾಬಾದ್ ಟೀಂ ಕಥೆ ಮುಗ್ದೇ ಹೋಯ್ತು ಎಂದುಕೊಳ್ಳುವ ಸಮಯದಲ್ಲಿ ಎಲ್ಲರಿಗೂ ನಿರೀಕ್ಷೆ ಸುಳ್ಳಾಗಿಸಿ ಏಡೆನ್ ಮಾರ್ಕ್ರಮ್ ನೇತೃತ್ವದ ತಂಡ ಗೆಲುವಿನ ನಗೆ ಬೀರಿತ್ತು. ಪಂದ್ಯದ ಕೊನೆಗೆ ಬೌಂಡರಿ, ಸಿಕ್ಸ್‌ಗಳನ್ನು ಸಿಡಿಸುವ ಮೂಲಕ ವಿಜಯಮಾಲೆ ಪಡೆದುಕೊಂಡಿತ್ತು.
ಸನ್ ರೈಸರ್ಸ್ ತಂಡದ ಗೆಲುವನ್ನು ಜೀರ್ಣಿಸಿಕೊಳ್ಳಲಾಗದೇ ರಾಜಸ್ಥಾನ್ ರಾಯಲ್ಸ್ ತಂಡ ಮಂಗಾಟ ಶುರು ಮಾಡಿದೆ. ಅದಕ್ಕೆ ನೆಟ್ಟಿಗರು ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಸೋಲಿನ ಹತಾಶೆಯಲ್ಲಿ ರಾಜಸ್ಥಾನ್ ರಾಯಲ್ಸ್ ಮಾಡಿದ ಟ್ವೀಟ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ತಮ್ಮ ತಂಡದ ನಾಯಕ ಸಂಜು ಸ್ಯಾಮ್ಸನ್ 'RRR' ಸಿನಿಮಾಗಿಂತ ಗ್ರೇಟ್ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ 'RRR' ಸಿನಿಮಾ ನಿರ್ಮಿಸಿದ್ದ ಡಿವಿವಿ ಎಂಟರ್‌ಪ್ರೈಸಸ್ ಸಂಸ್ಥೆ ಟ್ವಿಟ್ಟರ್‌ನಲ್ಲೇ ತಿರುಗೇಟು ನೀಡಿದೆ.

ತಮ್ಮ ತಂಡದ ನಾಯಕನನ್ನು ಹೊಗಳುವುದು ತಪ್ಪಲ್ಲ. ಆದರೆ ಮಧ್ಯದಲ್ಲಿ 'RRR' ಸಿನಿಮಾವನ್ನು ಎಳೆದು ತಂದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಂಜು ಸ್ಯಾಮ್ಸನ್ ಗ್ರೇಟ್ ಅಂದ್ರೆ ಸರಿ, ಅದು ಬಿಟ್ಟು ಸೂಪರ್ ಹಿಟ್ ಸಿನಿಮಾವನ್ನು ಕಮ್ಮಿ ಮಾಡಿ ಮಾತನಾಡಿದ್ದು ಯಾಕೆ? ಎನ್ನುವ ಪ್ರಶ್ನೆ ಎದ್ದಿತ್ತು. ತೆಲುಗು ಸಿನಿಮಾ ಎನ್ನುವ ಕಾರಣಕ್ಕೆ ಸನ್‌ರೈಸರ್ಸ್ ಬದಲು 'RRR' ಹೆಸರನನ್ನು ಬಳಸಿದಂತೆ ಕಾಣುತ್ತಿದೆ. ದೇಶಕ್ಕೆ ಆಸ್ಕರ್ ಪ್ರಶಸ್ತಿ ತಂದು ಕೊಟ್ಟ ಚಿತ್ರವನ್ನು ಅವಮಾನಿಸಿದ್ದು ಸರಿಯಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಇದೇ ಕಾರಣಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ತಮ್ಮನ್ನು ಹೀಯಾಳಿಸಿ ಪೋಸ್ಟ್ ಮಾಡಿದ್ದಕ್ಕೆ 'RRR' ತಂಡ ಸುಮ್ಮನಿರದೇ 'ವೆಂಕಿ' ಚಿತ್ರದ ಸಣ್ಣ ವಿಡಿಯೋ ಶೇರ್ ಮಾಡಿ ತಿರುಗೇಟು ನೀಡಿದೆ. ಇನ್ನು ಡಿವಿವಿ ಸಂಸ್ಥೆ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದೆ. 'ಇಡಿಯಟ್' ಚಿತ್ರದ ದೃಶ್ಯವನ್ನು ಶೇರ್ ಮಾಡಿ ಪರೋಕ್ಷವಾಗಿ ಚಾಟಿ ಬೀಸಿದೆ. ಈ ಬಗ್ಗೆ ಅತಿಯಾದ ಟ್ರೋಲ್ ಎದುರಾಗುತ್ತಿದ್ದಂತೆ ತಪ್ಪಿನ ಅರಿವಾಗಿ ರಾಜಸ್ಥಾನ್ ರಾಯಲ್ಸ್ ತಂಡ ಕ್ಷಮೆ ಕೇಳಿ ಟ್ವೀಟ್ ಮಾಡಿದೆ. " 'RRR' ಸಿನಿಮಾ ಹೇಗೆ ಜಗತ್ತಿನಾದ್ಯಂತ ಸದ್ದು ಮಾಡ್ತೋ ಅದೇ ರೀತಿ ಇಡೀ ಜಗತ್ತಿಗೆ ಗೊತ್ತಾಗುವಂತೆ ಕ್ಷಮೆ ಕೇಳುತ್ತಿದ್ದೇವೆ. ಸಂಜು ಸ್ಯಾಮ್ಸನ್ ಹಾಗೂ 'RRR' ಎರಡು ನಮಗೆ ಇಷ್ಟ" ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್‌ಗಳು ಸಖತ್ ವೈರಲ್ ಆಗ್ತಿದೆ.
ಇನ್ನು ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿ 5ರಲ್ಲಿ ಗೆದ್ದು 6 ಪಂದ್ಯ ಸೋತಿರುವ ರಾಜಸ್ಥಾನ್ ರಾಯಲ್ಸ್ ತಂಡ 4ನೇ ಸ್ಥಾನದಲ್ಲಿದೆ. ಮತ್ತೊಂದು ಕಡೆ 10 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 6 ಪಂದ್ಯ ಸೋತಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ 9ನೇ ಸ್ಥಾನದಲ್ಲಿದೆ. ಸನ್ ರೈಸರ್ಸ್ ತಂಡಕ್ಕೆ ಪ್ಲೇ ಆಫ್ ತಲುಪುವ ಅವಕಾಶ ಬಹುತೇಕ ಕ್ಷೀಣಿಸಿದೆ.
ರಾಜಮೌಳಿ ನಿರ್ದೇಶನದ ಆಕ್ಷನ್ ಅಡ್ವೆಂಚರ್ ಸಿನಿಮಾ 'RRR' ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅಂತರಾಷ್ಟ್ರೀಯಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿ ಸಿನಿಮಾ ಹುಬ್ಬೇರಿಸಿತ್ತು. ಜ್ಯೂ. ಎನ್‌ಟಿಆರ್, ರಾಮ್‌ಚರಣ್ ಅಭಿನಯಕ್ಕೆ ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದರು. ಈ ಚಿತ್ರದ ಸೀಕ್ವೆಲ್ ಬಗ್ಗೆ ಕೂಡ ರಾಜಮೌಳಿ ಮತ್ತವರ ತಂಡ ಚಿಂತನೆ ನಡೆಸ್ತಿದೆ.


Click it and Unblock the Notifications











