ಹೇಗಿದ್ದ ಹೇಗಾದ ಗೊತ್ತಾ ಟಾಲಿವುಡ್ ಚಿರುತ?: ಚರಣ್ ಆಕ್ಟಿಂಗ್ ಸ್ಕೂಲ್ ವಿಡಿಯೋ ವೈರಲ್
ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ತೇಜಾ ತಮ್ಮ ಅದ್ಭುತ ಪರ್ಫಾರ್ಮನ್ಸ್‌ನಿಂದ ಸಿನಿರಸಿಕರ ಮನಗೆದ್ದಿದ್ದಾರೆ. 'RRR' ಚಿತ್ರದಲ್ಲಿ ಸೀತರಾಮರಾಜು ಪಾತ್ರದಲ್ಲಿ ಚರಣ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ರಾಜಮೌಳಿ ನಿರ್ದೇಶನದ 2 ಸಿನಿಮಾಗಳಲ್ಲಿ ನಟಿಸಿ ಚೆರ್ರಿ ಗೆದ್ದಿದ್ದಾರೆ. ತಮ್ಮದೇ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಮಗನಾದರೂ ತನ್ನದೇ ಪರಿಶ್ರಮದಿಂದ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಹೀರೊ ಆಗಿ ಚಿತ್ರರಂಗಕ್ಕೆ ಬರಲು ಬೇಕಾದ ಎಲ್ಲಾ ತಯಾರಿ ನಡೆಸಿಕೊಂಡೇ ಚರಣ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಚಿರಂಜೀವಿ ವಾರಸ್ದಾರನಾಗಿ ಟಾಲಿವುಡ್ ಪ್ರವೇಶಿಸಿದ ಚರಣ್ ಈಗ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಸ್ಟಾರ್ ನಟನ ಮಗನಾದರೂ ಬಹಳ ಕಷ್ಟಪಟ್ಟು ಚರಣ್ ಚಿತ್ರರಂಗದಲ್ಲಿ ನೆಲೆ ನಿಲ್ಲುವಂತಾಯಿತು.

ಚಿತ್ರರಂಗಕ್ಕೆ ಬರುವುದಕ್ಕು ಮುನ್ನ ಚರಣ್ ಲುಕ್ಸ್ ಬಗ್ಗೆ ಕೆಲವರು ಟೀಕೆ ಮಾಡಿದ್ದರು. ಸ್ಟಾರ್ ನಟರ ಮಕ್ಕಳಾಗಿಬಿಟ್ಟರೆ ಸಾಕು. ಅವರು ಹೇಗೆ ಇದ್ದರೂ ಚಿತ್ರರಂಗಕ್ಕೆ ಬಂದುಬಿಡಬಹುದು ಎಂದವರು ಇದ್ದಾರೆ. ಆಕ್ಟಿಂಗ್ ಬರಲ್ಲ. ಬರೀ ತಂದೆ ಹೆಸರೇಳಿಕೊಂಡು ಚರಣ್ ಬಂದಿದ್ದಾನೆ. ಬಹಳ ದಿನ ಚಿತ್ರರಂಗದಲ್ಲಿ ಉಳಿಯುವುದಿಲ್ಲ ಎಂದಿದ್ದರು. ಅಲ್ಲಿಂದ ಈಗ ಹಾಲಿವುಡ್ ನಿರ್ದೇಶಕರು ಹಾಡಿ ಹೊಗಳುವ ಮಟ್ಟಿಗೆ ಚರಣ್ ಬೆಳೆದು ಬಂದಿದ್ದಾರೆ. ಆದರೆ ಚರಣ್ ಆಕ್ಟಿಂಗ್ ಸ್ಕೂಲ್‌ನಲ್ಲಿದ್ದ ಸೆರೆ ಹಿಡಿದ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಈ ಹಳೇ ವಿಡಿಯೋ ನೋಡಿದ ತೆಲುಗು ಪ್ರೇಕ್ಷಕರು ಹೇಗಿದ್ದ ಹೇಗಾದ ಗೊತ್ತಾ ಚಿರುತ? ಎಂದು ಹಾಡುವಂತಾಗಿದೆ.
16 ವರ್ಷಗಳ ಹಿಂದೆ ರಾಮ್‌ಚರಣ್ ಮುಂಬೈನ ಕಿಶೋರ್ ನಮಿತ್ ಕಪೂರ್ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯ ಎಬಿಸಿಡಿ ಕಲಿತಿದ್ದರು. ಆರಂಭದ ದಿನಗಳಲ್ಲಿ ಸಹಪಾಠಿಗಳ ಜೊತೆ ಕಾಣಿಸಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ದೊಡ್ಡದಾಗಿ ನಟನೆ ಏನು ಮಾಡುತ್ತಿಲ್ಲ. ಆರಂಭದಲ್ಲಿ ಆಕ್ಟಿಂಗ್ ಸ್ಕೂಲ್‌ಗಳಲ್ಲಿ ಓಪನ್ ಅಪ್ ಎಕ್ಸರ್‌ಸೈಜ್ ಮಾಡಿಸಿರುವುದನ್ನು ನೋಡಬಹುದು. ಇನ್ನು ಚರಣ್‌ನ ನೋಡಿ ಸಹಪಾಠಿಗಳು ಬಿದ್ದುಬಿದ್ದು ನಕ್ಕಿದ್ದಾರೆ.
ಉದ್ದನೆಯ ಕೂದಲು, ಕ್ಲೀನ್ ಶೇವ್, ಬಡಕಲು ದೇಹದ ರಾಮ್‌ಚರಣ್‌ನ ನೋಡಿ ಅರೇ, ನಮ್ಮ ಮೆಗಾ ಪವರ್ ಸ್ಟಾರ್ ಇವ್ರೇನಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ. ಹಳೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳಂತೂ ಈ ವಿಡಿಯೋ ನೋಡಿ ಖುಷಿಯಾಗಿದ್ದಾರೆ. ನಮ್ಮ ಹೀರೋ ತನ್ನ ಸ್ವಂತ ಪರಿಶ್ರಮದಿಂದಲೇ ಇವತ್ತು ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಕಾಲರ್ ಎಗರಿಸುತ್ತಿದ್ದಾರೆ.
ಚಿರಂಜೀವಿ ಮಗನಿಗೆ ಚಿಕ್ಕಂದಿನಿಂದಲೂ ಕುದುರೆ ಸವಾರಿ, ಡ್ಯಾನ್ಸ್ ಎಲ್ಲವನ್ನು ಕಲಿಸುತ್ತಾ ಬಂದಿದ್ದರು. ಚಿತ್ರರಂಗಕ್ಕೆ ಪರಿಚಯಿಸಬೇಕು ಎಂದಾಗ ಹೆಚ್ಚಿನ ತರಬೇತಿ ಕೊಡಿಸಿದ್ದರು. ಚಿರು ತಮ್ಮ ಡ್ಯಾನ್ಸ್ ಹಾಗೂ ಆಕ್ಷನ್‌ನಿಂದ ಹೆಚ್ಚು ಗಮನ ಸೆಳೆದಿದ್ದರು. ಹಾಗಾಗಿ ಪ್ರೇಕ್ಷಕರು ಅದನ್ನೇ ಚರಣ್ ಬಳಿ ನಿರೀಕ್ಷೆ ಮಾಡುತ್ತಾರೆ ಎಂದು ತಿಳಿದಿತ್ತು. ಹಾಗಾಗಿ ಆಕ್ಟಿಂಗ್ ಜೊತೆಗೆ ಸ್ಟಂಟ್ಸ್, ಡ್ಯಾನ್ಸ್ ಎಲ್ಲದರ ತರಬೇತಿ ಆಗಿತ್ತು.
2007ರಲ್ಲಿ ಪೂರಿ ಜಗನ್ನಾಥ್ ನಿರ್ದೇಶನದ 'ಚಿರುತ' ಸಿನಿಮಾ ಮೂಲಕ ಚರಣ್ ಚಿತ್ರರಂಗಕ್ಕೆ ಬಂದರು. ಮೊದಲ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಚರಣ್ ಭರವಸೆ ಮೂಡಿಸಿದ್ದರು. ದಿಢೀರನೆ 'ಮಗಧೀರ' ಚಿತ್ರಕ್ಕೆ ಆಯ್ಕೆ ಆಗಿದ್ದರು. ರಾಜಮೌಳಿ ನಿರ್ದೇಶನದ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕಾಸ್ಟ್ಯೂಮ್ ಡ್ರಾಮಾದಲ್ಲಿ ಚೆರ್ರಿ ಕಮಾಲ್ ಮಾಡಿದ್ದರು. ಬಳಿಕ ಒಂದಷ್ಟು ಸಿನಿಮಾಗಳು ಸೋತು, ಗೆದ್ದು ನಿಧಾನವಾಗಿ ಚಿತ್ರರಂಗದಲ್ಲಿ ನೆಲೆ ನಿಂತರು.
ಸದ್ಯ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಿದೆ. 'RRR' ಬಳಿಕ ಚರಣ್ ಹಾಲಿವುಡ್ ಸಿನಿಮಾಗಳಲ್ಲೂ ನಟಿಸೋ ಬಗ್ಗೆ ಮಾತುಗಳು ಕೇಳಿಬರ್ತಿದೆ.


Click it and Unblock the Notifications











