ಸೈಕಲ್ ಏರಿದ ರಾಮಾರಾವು, ರಾಜಮೌಳಿ, ರಾಮ್‌ಚರಣ್: ಫೋಟೊ ಫುಲ್ ವೈರಲ್
ಮೌಳಿ ನಿರ್ದೇಶನದ 'RRR' ಸಿನಿಮಾ ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ಮಾ. 25ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಾಲಿವುಡ್ ಪ್ರೇಕ್ಷಕರನ್ನು ರಂಜಿಸಿ ಹಾಲಿವುಡ್ ಫಿಲ್ಮ್ ಮೇಕರ್ಸ್‌ಯಿಂದ್ಲೂ ಶಹಬ್ಬಾಶ್ ಗಿಟ್ಟಿಸಿಕೊಂಡಿತ್ತು. ಹಲವು ಪ್ರಶಸ್ತಿಗಳನ್ನು ಗೆದ್ದಿತ್ತು. ಇದಕ್ಕೆಲ್ಲಾ ಕಳಶವಿಟ್ಟಂತೆ ಆಸ್ಕರ್ ಗರಿ ಸಿಕ್ಕಿತ್ತು.
ಬಹುಕೋಟಿ ವೆಚ್ಚದಲ್ಲಿ ಡಿ ವಿ ವಿ ದಾನಯ್ಯ ನಿರ್ಮಾಣದ 'RRR' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಲೀಡ್ ರೋಲ್‌ಗಳಲ್ಲಿ ರಾಮ್‌ಚರಣ್- ತಾರಕ್ ಅಬ್ಬರಿಸಿದರು. ರಾಜಮೌಳಿ ವಿಷನ್, ರಾಮ್-ಭೀಮ್ ಬ್ರೋಮ್ಯಾನ್ಸ್, ಆ ದೃಶ್ಯವೈಭವ ಕಂಡು ಪ್ರೇಕ್ಷಕರು ಫಿದಾ ಆಗಿದ್ದರು. ತೆಲುಗು ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಚರಣ್- ತಾರಕ್ ಡಬ್ ಮಾಡಿದ್ದರು. 2017 ನವೆಂಬರ್‌ನಲ್ಲಿ ತ್ರಿಮೂರ್ತಿಗಳು ಒಂದು ಸೋಫಾದಲ್ಲಿ ಒಟ್ಟಿಗೆ ಕೂತು ಫೋಟೊ ಕ್ಲಿಕ್ಕಿಸಿ #RRR ಎಂದು ಹ್ಯಾಷ್‌ಟ್ಯಾಗ್‌ನಲ್ಲಿ ಫೋಟೊ ಶೇರ್ ಮಾಡಿದ್ದರು.

ಅದೊಂದು ಫೋಟೊದಿಂದ 'RRR' ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಅದಾಗಲೇ ರಾಜಮೌಳಿ ನಿರ್ದೇಶನದ 3 ಸಿನಿಮಾಗಳಲ್ಲಿ ತಾರಕ್ ನಟಿಸಿದ್ದರು. 'ಮಗಧೀರ' ಚಿತ್ರದಲ್ಲಿ ಚರಣ್- ಜಕ್ಕಣ್ಣ ಕೆಲಸ ಮಾಡಿದ್ದರು. ಇನ್ನು ನಂದಮೂರಿ ಫ್ಯಾಮಿಲಿ ಹಾಗೂ ಮೆಗಾ ಫ್ಯಾಮಿಲಿ ನಡುವೆ ದಶಕಗಳಿಂದ ಸಂಘರ್ಷ ನಡೀತಿತ್ತು. ಇದನ್ನೆಲ್ಲಾ ಮೀರಿ ಚರಣ್- ತಾರಕ್ ಒಂದೇ ಸಿನಿಮಾದಲ್ಲಿ ಅದೂ ಕೂಡ ರಾಜಮೌಳಿ ನಿರ್ದೇಶನದಲ್ಲಿ ನಟಿಸ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೇರಿತ್ತು. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗಿತ್ತು.
ಕೊರೋನಾ ಹಾವಳಿಯಿಂದ 'RRR' ಸಿನಿಮಾ ಶೂಟಿಂಗ್ ತಡವಾಗಿ ಪದೇ ಪದೇ ರಿಲೀಸ್ ಡೇಟ್ ಬದಲಿಸುವಂತಾಯಿತು. ಕೊನೆಗೂ 2022ರ ಮಾರ್ಚ್ 25ಕ್ಕೆ ತೆರೆಮೇಲೆ ರಾಮ್-ಭೀಮ್ ದರ್ಶನವಾಗಿತ್ತು. ಎಪಿಕ್ ಆಕ್ಷನ್ ಸಿನಿಮಾದಲ್ಲಿ ಮೌಳಿ ಒಂದು ಪ್ರಯೋಗ ಮಾಡಿ ಗೆದ್ದಿದ್ದರು. ಆಂಧ್ರದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮುರಂ ಭೀಮ್ ಪಾತ್ರಗಳನ್ನಿಟ್ಟುಕೊಂಡು ಒಂದು ಕಾಲ್ಪನಿಕ ಕಥೆ ಕಟ್ಟಿದ್ದರು. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಜೊತೆ ಚಿತ್ರವನ್ನು ಕಟ್ಟಿಕೊಟ್ಟಿದ್ದರು.

ವಿಶ್ವದಾದ್ಯಂತ 'RRR' ಬಾಕ್ಸಾಫೀಸ್ ಶೇಕ್ ಮಾಡಿತ್ತು. ವಿಜಯೇಂದ್ರ ಪ್ರಸಾದ್ ಕಥೆ, ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. 5 ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಿತ್ತು. ಕಳೆದ ನವೆಂಬರ್‌ನಲ್ಲಿ ಜಪಾನ್ ಭಾಷೆಗೆ ಡಬ್ ಆಗಿ ಅಲ್ಲಿ ರಿಲೀಸ್ ಆದ ಸಿನಿಮಾ ಇನ್ನು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ ಹಾಲಿವುಡ್ ಅಂಗಳದಲ್ಲಿ ಸಿನಿಮಾ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದೆ. ಗೋಲ್ಡನ್ ಗ್ಲೋಬ್ ಹಾಗೂ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಧಕ್ಕಿತ್ತು.
ಇತ್ತೀಚೆಗೆ ಚಿತ್ರದ 'ನಾಟು ನಾಟು' ಗೀತೆಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಆಸ್ಕರ್ ವೇದಿಕೆಯಲ್ಲಿ ಸಾಂಗ್ ಲೈವ್ ಪರ್ಫಾರ್ಮೆನ್ಸ್ ಕೂಡ ಇತ್ತು. ಸಿನಿಮಾ ರಿಲೀಸ್ ಆಗಿ 1 ವರ್ಷ ಪೂರೈಸಿರುವ ಸಂದರ್ಭದಲ್ಲಿ ಚಿತ್ರತಂಡ ಒಂದು ಸ್ಪೆಷಲ್ ಫೋಟೊ ಶೇರ್ ಮಾಡಿದೆ. 'RRR' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ರಾಜಮೌಳಿ, ಚರಣ್, ತಾರಕ್ ಸೈಕಲ್ ಏರಿ ಸುತ್ತಾಡಿದ್ದಾರೆ. ವಿಶೇಷ ಅಂದ್ರೆ, ರಾಮ್-ಭೀಮ್ ಇಬ್ಬರು ಮೇಕಪ್, ಕಾಸ್ಟ್ಯೂಮ್ ಸಮೇತ ಸೈಕಲ್ ಏರಿದ್ದಾರೆ. ಈ ಫೋಟೊ ಸಖತ್ ವೈರಲ್ ಆಗುತ್ತಿದೆ. ತಂಡ 'RRR' ಸೀಕ್ವೆಲ್ ಮಾಡೋದಾಗಿಯೂ ಹೇಳಿದೆ.


Click it and Unblock the Notifications











