ಎಷ್ಟು ಭಾಗಗಳಾಗಿ ರಾಜಮೌಳಿ ಕನಸಿನ 'ಮಹಾಭಾರತ' ?: ಕೊನೆಗೂ ಮೌನ ಮುರಿದ ಜಕ್ಕಣ್ಣ
'RRR' ಬ್ಲಾಕ್‌ಬಸ್ಟರ್ ಸಕ್ಸಸ್ ನಂತರ ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಯಾವ್ದು ಎನ್ನುವು ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಮಹೇಶ್ ಬಾಬು ಜೊತೆ ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್‌ಗೆ ಮೌಳಿ ಕರಸತ್ತು ನಡೆಸ್ತಿದ್ದಾರೆ. SSMB29 ಚಿತ್ರಕ್ಕೆ ಇಂಡಿಯಾನ ಜೋನ್ಸ್ ತರದ ಕಥೆಯನ್ನು ಸಿದ್ಧಪಡಿಸ್ತಿದ್ದಾರೆ. ಇದೆಲ್ಲದರ ನಡುವೆ ಜಕ್ಕಣ್ಣ ತಮ್ಮ ಡ್ರೀಮ್ ಪ್ರಾಜೆಕ್ಟ್ ಮಹಾಭಾರತದ ಬಗ್ಗೆ ಮಾತನಾಡಿದ್ದಾರೆ.
ಮಹಾಭಾರತ ಕಾವ್ಯವನ್ನು ಸಿನಿಮಾ ಮಾಡುವ ಬಗ್ಗೆ ಈ ಹಿಂದೆ ಹಲವು ಬಾರಿ ರಾಜಮೌಳಿ ಹೇಳಿಕೊಂಡಿದ್ದಾರೆ. ಅದು ನನ್ನ ಡ್ರೀಮ್ ಪ್ರಾಜೆಕ್ಟ್. ಅದರ ತಯಾರಿ ಎನ್ನುವಂತೆ ತಾವು 'ಮಗಧೀರ', 'ಯಮದೊಂಗ', 'ಬಾಹುಬಲಿ' ರೀತಿಯ ಕಾಸ್ಟ್ಯೂಮ್ ಡ್ರಾಮಾ ಸಿನಿಮಾಗಳನ್ನು ಮಾಡ್ತಿದ್ದೀನಿ ಎಂದು ಈ ಹಿಂದೆ ಸಂದರ್ಶನಗಳಲ್ಲಿ ಹೇಳಿದ್ದರು. ಆದರೆ ಯಾವಾಗ, ಹೇಗೆ ಅನ್ನುವುದನ್ನು ಮಾತ್ರ ರಿವೀಲ್ ಮಾಡಿರಲಿಲ್ಲ. ಅದಕ್ಕೆ ಇನ್ನು ಸಮಯ ಇದೆ ನೋಡೋಣ ಎಂದಿದ್ದರು. ಈಗ ಮಹಾಭಾರತ ಸಿನಿಮಾ ಬಗ್ಗೆ ಮೌಳಿ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕ ರಾಜಮೌಳಿಗೆ ಇಂಟ್ರೆಸ್ಟಿಂಗ್ ಪ್ರಶ್ನೆ ಎದುರಾಗಿತ್ತು. ನೀವು ಈ ಹಿಂದೆ ಮಹಾಭಾರತವನ್ನು ಸಿನಿಮಾ ಮಾಡುವುದಾಗಿ ಹೇಳಿದ್ದಿರಿ, ಆ ಕಥೆ ಟಿವಿಯಲ್ಲಿ ಧಾರಾವಾಹಿ ರೂಪದಲ್ಲಿ ಸುಮಾರು 266 ಎಪಿಸೋಡ್‌ಗಳಲ್ಲಿ ಪ್ರಸಾರ ಆಗಿತ್ತು. ನೀವು ಸಿನಿಮಾ ಮಾಡಿದರೆ ಎಷ್ಟು ಭಾಗಗಳಾಗಿ ತೆರೆಗೆ ತರುತ್ತೀರಾ ಎನ್ನುವ ಪ್ರಶ್ನೆಗೆ "ಅದು ನನಗೂ ಗೊತ್ತಿಲ್ಲ. ಒಂದು ವೇಳೆ ಮಹಾಭಾರತವನ್ನು ಸಿನಿಮಾ ಮಾಡಬೇಕು ಅಂದುಕೊಂಡ್ರೆ, ದೇಶದಲ್ಲಿ ಸಿಗುವ ಎಲ್ಲಾ ವರ್ಷನ್ ಮಹಾಭಾರತ ಕಾವ್ಯಗಳನ್ನು ಓದಬೇಕು"
"ಆ ರೀತಿ ಎಲ್ಲಾ ವರ್ಷನ್ ಓದಿ ಅರ್ಥ ಮಾಡಿಕೊಳ್ಳಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕು." ಅದನ್ನು ಫೀಚರ್ ಫಿಲ್ಮ್ ಆಗಿ ತೆರೆಗೆ ತರಬೇಕು ಅಂದ್ರೆ ಕನಿಷ್ಠ ನಮ್ಮ ಊಹೆಯ ಪ್ರಕಾರ 10 ಭಾಗಗಳಾಗಿ ಮಾಡಬೇಕು. ಆದರೆ ಖಚಿತವಾಗಿ ಎಷ್ಟು ಅಂತ ಹೇಳೋಕೆ ಸಾಧ್ಯವಿಲ್ಲ" ಎಂದಿದ್ದಾರೆ. ಮೌಳಿ ಒಂದು ಚಿತ್ರಕ್ಕೆ 3 ರಿಂದ 4 ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಅಂಥದ್ದರಲ್ಲಿ 'ಮಹಾಭಾರತ' ಸಿನಿಮಾ ಅಂದ್ರೆ ಎಷ್ಟು ವರ್ಷ ಬೇಕಾಗುತ್ತೋ ಗೊತ್ತಿಲ್ಲ.

ಇನ್ನು ಮೌಳಿ ಸಿನಿಮಾಗಳನ್ನು ನೋಡಿದವರು ಮಹಾಭಾರತ ಕಾವ್ಯವನ್ನು ತಮ್ಮ ವಿಷನ್‌ನಲ್ಲಿ ಹೇಗೆ ತೆರೆಗೆ ತರುತ್ತಾರೆ ಇನ್ನುವುದನ್ನು ಕಲ್ಪಿಸಿಕೊಂಡೇ ಥ್ರಿಲ್ಲಾಗಿದ್ದಾರೆ. ಆದಷ್ಟು ಬೇಗ ಅಂತಾದೊಂದು ಸಿನಿಮಾ ಮಾಡಲಿ ಎಂದು ಆಶಿಸುತ್ತಿದ್ದಾರೆ. 'RRR' ಸಿನಿಮಾ ಮಾಡಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಮೌಳಿ ಗೆದ್ದಿದ್ದಾರೆ. ಎನ್‌ಟಿಆರ್, ರಾಮ್‌ಚರಣ್ ನಟಿಸಿದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಹಾಲಿವುಡ್‌ನಲ್ಲೂ ದೊಡ್ಡದಾಗಿ ಸದ್ದು ಮಾಡಿತ್ತು.
ಮಹೇಶ್ ಬಾಬು ಜೊತೆಗಿನ ಚಿತ್ರಕ್ಕೆ ರಾಜಮೌಳಿ ಅಂಡ್ ಟೀಂ ಈಗಾಗಲೇ ಸ್ಕ್ರಿಪ್ಟ್ ವರ್ಕ್ ಆರಂಭಿಸಿದೆ. ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಟಾಲಿವುಡ್ ಪ್ರಿನ್ಸ್ ನಟಿಸ್ತಿದ್ದಾರೆ. ಆ ಸಿನಿಮಾ ಮುಗಿದ ಮೇಲೆ ಮೌಲಿ ಜೊತೆ ಕೈ ಜೋಡಿಸಲಿದ್ದಾರೆ. ಈ ವರ್ಷಾಂತ್ಯಕ್ಕೆ ಆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.
ಜಪಾನ್‌ನಲ್ಲಿ ನಿಲ್ಲದ 'RRR' ಆರ್ಭಟ
ಕಳೆದ ವರ್ಷ ಮಾರ್ಚ್ 25ಕ್ಕೆ ವಿಶ್ವದಾದ್ಯಂತ 'RRR' ಸಿನಿಮಾ ತೆರೆಗಪ್ಪಳಿಸಿ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ನವೆಂಬರ್ 21ಕ್ಕೆ ಜಪಾನ್ ಭಾಷೆಗೆ ಡಬ್ ಆಗಿ ಅಲ್ಲಿ ರಿಲೀಸ್ ಆಗಿತ್ತು. ಇದೀಗ 102 ಸ್ಕ್ರೀನ್‌ಗಳಲ್ಲಿ ಸಿನಿಮಾ 200 ದಿನ ಪೂರೈಸಿದೆ. ಭಾರತದ ಸಿನಿಮಾವೊಂದು ಜಪಾನ್‌ನಲ್ಲಿ ಈ ರೇಂಜ್‌ಗೆ ಸದ್ದು ಮಾಡುತ್ತಿರುವುದು ಇದೇ ಮೊದಲು. ಈ ಹಿಂದೆ ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ಕೂಡ ಇದೇ ರೀತಿ ಅಲ್ಲಿ ಸಂಚಲನ ಸೃಷ್ಟಿಸಿತ್ತು. ಅದನ್ನು ಮೀರಿ 'RRR' ದಾಖಲೆ ಬರೆದಿದೆ.


Click it and Unblock the Notifications











