ಹೀರೊ ಆಗಿಬಿಟ್ರು ಎಸ್. ಎಸ್ ರಾಜಮೌಳಿ: ಸ್ಟೈಲಿಶ್ ಲುಕ್‌ನಲ್ಲಿ ಜಕ್ಕಣ್ಣ ಕಮಾಲ್
ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ರಾಜಮೌಳಿ ಹೀರೊ ಆಗಿದ್ದಾರೆ. 'ಸ್ಟೂಡೆಂಟ್ ನಂಬರ್ 1' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾದ ಜಕ್ಕಣ್ಣ ಮತ್ತೆ ಹಿಂತಿರುಗಿ ನೋಡಲಿಲ್ಲ. ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳನ್ನು ಕೊಡುತ್ತಾ ಇದೀಗ ಸ್ಟಾರ್ ನಿರ್ದೇಶಕರಾಗಿದ್ದಾರೆ. ನಿರ್ದೇಶಿಸಿದ 12 ಸಿನಿಮಾಗಳು ಹಿಟ್ ಆಗಿದೆ. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.
ತಂದೆ ವಿಜಯೇಂದ್ರ ಪ್ರಸಾದ್ ಚಿತ್ರರಂಗದಲ್ಲಿ ದೊಡ್ಡ ಕಥೆಗಾರಗಾಗಿ ಗುರ್ತಿಸಿಕೊಂಡಿದ್ದರು. ತಂದೆ ಹಾದಿಯಲ್ಲೇ ಚಿತ್ರರಂಗ ಬಂದ ರಾಜಮೌಳಿ ಇಂದು ಹಾಲಿವುಡ್ ಮಂದಿ ಕೂಡ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. 'ಬಾಹುಬಲಿ' ಸರಣಿ ಸಿನಿಮಾಗಳಿಂದ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದರು. ಮುಂದೆ ಹಾಲಿವುಡ್ ರೇಂಜ್ ಚಿತ್ರಕ್ಕೆ ಪ್ಲ್ಯಾನ್ ಮಾಡ್ತಿದ್ದಾರೆ. ಈ ಬಾರಿ ಮಹೇಶ್ ಬಾಬು ಜೊತೆ ಕೈ ಜೋಡಿಸುತ್ತಿದ್ದಾರೆ.

ನಿರ್ದೇಶಕ ರಾಜಮೌಳಿ ಆಗೊಮ್ಮೆ ಈಗೊಮ್ಮೆ ತೆರೆಮೇಲೆ ಕಾಣಿಸಿಕೊಂಡಿರುವುದು ಇದೆ. ತಮ್ಮದೇ ಸಿನಿಮಾಗಳ ಝಲಕ್‌ಗಳಲ್ಲಿ ಹೀಗೆ ಬಂದು ಹಾಗೆ ಹೋಗಿ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದಾರೆ. ಇದೀಗ ಏಕಾಏಕಿ ಮೌಳಿ ಹೀರೋ ಆಗಿಬಿಟ್ಟಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ವೈಟ್ ಬ್ಲೇಸರ್ ತೊಟ್ಟು ದರ್ಶನ ಕೊಟ್ಟಿದ್ದಾರೆ. ಸ್ಟಾಲ್ಟ್ ಅಂಡ್ ಪೆಪ್ಪರ್ ಹೇರ್‌ಸ್ಟೈಲ್, ಗಡ್ಡದಲ್ಲಿ ಅಲ್ಟ್ರಾ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಜಾಹೀರಾತಿನಲ್ಲಿ ಮೌಳಿ ಮಿಂಚು
ನಿರ್ದೇಶಕ ರಾಜಮೌಳಿ ಹೀರೊ ಆಗಿರೋದೇನೋ ನಿಜ, ಆದರೆ ಸಿನಿಮಾದಲ್ಲಿ ಅಲ್ಲ. ಬದಲಿಗೆ ಜಾಹೀರಾತಿನಲ್ಲಿ. ಒಪ್ಪೋ ಫೋನ್ ಜಾಹೀರಾತಿನಲ್ಲಿ ರಾಜಮೌಳಿ ನಟಿಸಿದ್ದಾರೆ. ಒಂದು ಕೈಯಲ್ಲಿ ಫೋನ್ ಹಿಡಿದು ಹೀರೊ ರೀತಿ ಜಕ್ಕಣ್ಣ ನಡೆದು ಬರುವ ಮೇಕಿಂಗ್ ವಿಡಿಯೋ ವೈರಲ್ ಆಗ್ತಿದೆ. ರಾಜಸ್ಥಾನದಲ್ಲಿ ಈ ಜಾಹೀರಾತಿನ ಚಿತ್ರೀಕರಣ ನಡೆದಿದೆ. ಈ ಜಾಹೀರಾತಿಗೆ ಬಾಲಿವುಡ್ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳಿದ್ದಾರೆ. ರಾಜಸ್ಥಾನ ಜೋಧ್‌ಪುರದ ಹಳೇ ಅರಮನೆಯೊಂದರ ಮುಂಭಾಗದಲ್ಲಿ ಚಿತ್ರೀಕರಣ ನಡೆದಿದೆ.
ಜಾಹೀರಾತಿಗೆ ಭಾರೀ ಸಂಭಾವನೆ
'ಬಾಹುಬಲಿ' ಸರಣಿ ಹಾಗೂ 'RRR' ಚಿತ್ರಗಳಿಂದ ರಾಜಮೌಳಿ ಕ್ರೇಜ್ ಉತ್ತರ ಭಾರತದಲ್ಲೂ ಹೆಚ್ಚಾಗಿದೆ. ಜಕ್ಕಣ್ಣನನ್ನು ನಂಬಿ ನೂರಾರು ಕೋಟಿ ಬಂಡವಾಳ ಹೂಡಲು ನಿರ್ಮಾಪಕರು ಸಿದ್ಧರಾಗಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ಸ್ ಕೂಡ ಮೌಳಿ ನಿರ್ದೇಶನದಲ್ಲಿ ನಟಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಹಾಲಿವುಡ್ ಫಿಲ್ಮ್ಸ್ ಮೇಕರ್ಸ್ ಜಕ್ಕಣ್ಣನ ಮುಂದಿನ ಚಿತ್ರಕ್ಕಾಗಿ ಕಾಯ್ತಿದ್ದಾರೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಮೌಳಿ ಈಗ ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾರೆ. ಅದೇ ಕ್ರೇಜ್ ಎನ್‌ಕ್ಯಾಶ್ ಮಾಡಿಕೊಳ್ಳೋಕೆ ಒಪ್ಪೋ ಸಂಸ್ಥೆ ರಾಯಭಾರಿ ಆಗಿ ಆಯ್ಕೆ ಮಾಡಿಕೊಂಡಿದೆ. ಇದಕ್ಕಾಗಿ ಮೌಳಿ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ.
ಮುಂದಿನ ಚಿತ್ರಕ್ಕಾಗಿ ತಯಾರಿ
'RRR' ಸೂಪರ್ ಸಕ್ಸಸ್ ನಂತರ ಜಕ್ಕಣ್ಣ ತಮ್ಮ ಮುಂದಿನ ಸಿನಿಮಾ ಕಡೆ ದೃಷ್ಟಿ ನೆಟ್ಟಿದ್ದಾರೆ. ಈಗಾಗಲೇ ಮಹೇಶ್ ಬಾಬು ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿಬಿಟ್ಟಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಈ ಬಾರಿ ದೇಶ ವಿದೇಶಗಳಲ್ಲಿ ಸಾಗುವ ಒಂದು ಆಕ್ಷನ್ ಅಡ್ವೆಂಚರಸ್ ಕಥೆ ಆಧರಿಸಿ ಸಿನಿಮಾ ಮಾಡಲು ಜಕ್ಕಣ್ಣ ಮುಂದಾಗಿದ್ದಾರೆ.
ಮುಂದಿನ ವರ್ಷ ಸಿನಿಮಾ ಶುರು
ರಾಜಮೌಳಿ ಯಾವುದೇ ಸಿನಿಮಾ ಮಾಡಬೇಕಾದರೂ ಸಿಕ್ಕಾಪಟ್ಟೆ ಹೋಂ ವರ್ಕ್ ಮಾಡ್ತಾರೆ. ಪ್ರೀ ಪ್ರೊಡಕ್ಷನ್‌ಗಾಗಿ ವರ್ಷಗಗಳಗಟ್ಟಲೆ ವ್ಯಯಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಒಂದೊಂದು ಚಿತ್ರಕ್ಕೆ ಮೂರ್ನಾಲ್ಕು ವರ್ಷ ಸಮಯ ತೆಗೆದುಕೊಳ್ತಿದ್ದಾರೆ. ಸದ್ಯ ಮಹೇಶ್ ಬಾಬು 'ಗುಂಟೂರು ಖಾರಂ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ನಂತರ ಮೌಳಿ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ. ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.


Click it and Unblock the Notifications











