'KGF-2' ದಾಖಲೆ ಮುರಿದ 'RRR': ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ
ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ RRR ಸಿನಿಮಾಗಾಗಿ ಇಡೀ ಭಾರತೀಯ ಸಿನಿಮಾರಂಗ ಕಾತರದಿಂದ ಕಾಯುತ್ತಿದೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ ಆರ್ ಆರ್ ಆರ್ ಭಾರತೀಯ ಸಿನಿಮಾರಂಗದ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ.
ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇರುವ ಆರ್ ಆರ್ ಆರ್ ಬಗ್ಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಆರ್ ಆರ್ ಆರ್ ಸಿನಿಮಾ ಬಿಡುಗಡೆಯೂ ಮೊದಲೇ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಚಿತ್ರೀಕರಣದ ಕೊನೆಯ ಹಂತದಲ್ಲಿರುವ RRR ಪ್ರಿ-ಬ್ಯುಸಿನೆಸ್ ನಲ್ಲಿ ನಿರತವಾಗಿದೆ.
ಸದ್ಯ ಚಿತ್ರದ ಆಡಿಯೋ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ ಎನ್ನುವ ಭರ್ಜರಿ ಸುದ್ದಿ ಹೊರಬಿದ್ದಿದೆ. ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಆಡಿಯೋವನ್ನು ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ಖರೀದಿ ಮಾಡಿದೆ. ಐದಕ್ಕಿಂತ ಹೆಚ್ಚು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಆಡಿಯೋಗೆ 25 ಕೋಟಿ ರೂ. ನೀಡುವ ಮೂಲಕ ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ತನ್ನದಾಗಿಸಿಕೊಂಡಿದೆ.

ಈ ಮೊದಲು ಕೆಜಿಎಫ್-2 ಚಿತ್ರದ ಆಡಿಯೋ ಹಕ್ಕು ಸಹ ಭರ್ಜರಿ ಮೊತ್ತಕ್ಕೆ ಮಾರಾಟವಾಗಿತ್ತು. ಲಹರಿ ಸಂಸ್ಥೆ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಆಡಿಯೋವನ್ನು 7.20 ಕೋಟಿ ರೂ.ಗೆ ಖರೀದಿ ಮಾಡಿತ್ತು. ಇದೀಗ ಆರ್ ಆರ್ ಆರ್ ಸಿನಿಮಾದ ಆಡಿಯೋವನ್ನು 25 ಕೋಟಿಗೆ ಖರೀದಿ ಮಾಡುವ ಮಾಡುವ ಮೂಲಕ ಕೆಜಿಎಫ್-2 ಚಿತ್ರದ ದಾಖಲೆಯನ್ನು ಮುರಿದಿದೆ.
ಆಡಿಯೋ ಖರೀದಿ ಮಾಡಿದ ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ ಎಷ್ಟು ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ ಎನ್ನುವ ಮಾಹಿತಿಯನ್ನು ರಿಲೀಸ್ ಮಾಡಿಲ್ಲ. ಆರ್ ಆರ್ ಆರ್ ಸಿನಿಮಾ ಈಗಾಗಲೇ ದೊಡ್ಡ ಮೊತ್ತದ ಪ್ರಿ-ರಿಲೀಸ್ ವ್ಯವಹಾರ ನಡೆಸುವ ಮೂಲಕ ಬಾಹುಬಲಿ ಸಿನಿಮಾದ ದಾಖಲೆಯನ್ನು ಮುರಿದಿದೆ.
ಆರ್ ಆರ್ ಆರ್ ಸಿನಿಮಾಗೆ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಜೂ.ಎನ್ ಟಿ ಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಸಹ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











