'ಆರ್‌ಆರ್‌ಆರ್' ಸಿನಿಮಾದ ಮೊದಲ ವಿಮರ್ಶೆ: ರಾಮ್ ಚರಣ್ ಅಭಿಮಾನಿಗಳ ಅಸಮಾಧಾನ
ಮಲ್ಟಿಸ್ಟಾರರ್ ಸಿನಿಮಾ ಮಾಡುವುದು ಅದೂ ದಕ್ಷಿಣ ಭಾರತದಲ್ಲಿ ಬಹಳ ಕಷ್ಟದ ಕಾರ್ಯ. ಪ್ರತಿಯೊಬ್ಬ ನಾಯಕನಿಗೂ ಅವನದ್ದೇ ಆದ ದೊಡ್ಡ ಅಭಿಮಾನಿ ಬಳಗ ಇರುತ್ತದೆ. ಇಬ್ಬರೂ ನಾಯಕರನ್ನೂ ಆ ಮೂಲಕ ಅವರ ಅಭಿಮಾನಿಗಳನ್ನು ತೃಪ್ತಿಪಡಿಸುವುದು ಸುಲಭದ ಕಾರ್ಯವಲ್ಲ.
ಈ ದುಸ್ಸಾಹಕ್ಕೆ ರಾಜಮೌಳಿ ಕೈ ಹಾಕಿ ಇದೀಗ ಸಿನಿಮಾ ಬಿಡುಗಡೆಗೆ ಸಹ ರೆಡಿಯಾಗಿದೆ. ಸಿನಿಮಾ ಬಿಡುಗಡೆ ಆಗಲು ಇನ್ನೂ 9 ದಿನ ಇದೆ. ಈಗಲೇ 'ಆರ್ಆರ್ಆರ್' ಸಿನಿಮಾದ ನಾಯಕರಾದ ರಾಮ್ ಚರಣ್ ಹಾಗೂ ಜೂ ಎನ್‌ಟಿಆರ್ ಅಭಿಮಾನಿಗಳ ನಡುವೆ ಬಿರುಕು ಪ್ರಾರಂಭವಾಗಿದೆ.
ರಾಮ್ ಚರಣ್ ಹಾಗೂ ಜೂ ಎನ್‌ಟಿಆರ್ ಅಭಿಮಾನಿಗಳ ನಡುವೆ ಬಿರುಕು ಮೂಡಲು ಕಾರಣ ಸಿನಿಮಾದ ಬಗ್ಗೆ ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರು ಮಾಡಿರುವ ಟ್ವೀಟ್. ದುಬೈನಲ್ಲಿ 'ಆರ್ಆರ್ಆರ್' ಸಿನಿಮಾ ನಿನ್ನೆ ಸೆನ್ಸಾರ್ ಆಗಿದ್ದು, ಸೆನ್ಸಾರ್ ಮಂಡಳಿಯ ಸದಸ್ಯ ಉಮೇರ್ ಸಾಂಧು ಸಿನಿಮಾ ಬಗ್ಗೆ ಮಾಡಿರುವ ಟ್ವೀಟ್ ರಾಮ್ ಚರಣ್ ಅಭಿಮಾನಿಗಳಿಗೆ ಅಸಮಾಧಾನ ಉಂಟು ಮಾಡಿದೆ.

ನಿನ್ನೆ ಸೆನ್ಸಾರ್‌ಗಾಗಿ ಸಿನಿಮಾ ನೋಡಿರುವ ಉಮೇರ್ ಸಾಂಧು, ''ಆರ್‌ಆರ್‌ಆರ್' ಸಿನಿಮಾ ಜೂ.ಎನ್‌ಟಿಆರ್‌ಗೆ ಸೇರಬೇಕು. ಸಿನಿಮಾದ ಆತ್ಮ ಜೂ ಎನ್‌ಟಿಆರ್'' ಎಂದು ಟ್ವೀಟ್ ಮಾಡಿದ್ದಾರೆ ಇದು ರಾಮ್ ಚರಣ್ ಅಭಿಮಾನಿಗಳಿಗೆ ಅಸಮಾಧಾನ ಉಂಟು ಮಾಡಿದೆ.
ಉಮೇರ್ ಸಾಂಧು ಟ್ವೀಟ್‌ಗೆ ಜೂ ಎನ್‌ಟಿಆರ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಿಪಡಿಸಿದ್ದರೆ, ರಾಮ್ ಚರಣ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅಭಿಮಾನಿಗಳ ಮಧ್ಯೆ ಜಗಳ ತಂದಿಡಬೇಡ ಎಂದು ಬುದ್ಧಿವಾದ ಹೇಳಿದ್ದಾರೆ.
ಕೆಲವು ವರದಿಗಳ ಪ್ರಕಾರ, ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಅಭಿಮಾನಿಗಳ ನಡುವೆ 'ಪ್ಯಾನ್ಸ್ ವಾರ್' ಮಾಡಬಾರದೆಂದು ಒಪ್ಪಂದ ಆಗಿದೆಯಂತೆ. ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಸಹ ತಮ್ಮ ಅಭಿಮಾನಿಗಳಿಗೆ ಸೂಚನೆ ನೀಡಿದ್ದಾರಂತೆ ಸಾಮಾಜಿಕ ಜಾಲತಾಣದಲ್ಲಿಯೇ ಆಗಲಿ ಚಿತ್ರಮಂದಿರದಲ್ಲಿಯೇ ಆಗಲಿ ಮತ್ತೊಬ್ಬ ನಟನ ಬಗ್ಗೆ ಟೀಕೆ, ನಿಂದನೆ ಮಾಡಬಾರದೆಂದು.
'ಆರ್‌ಆರ್‌ಆರ್' ಸಿನಿಮಾದಲ್ಲಿ ಇಬ್ಬರೂ ನಟರಿಗೆ ಸಮಾನ ಅವಕಾಶ, ಸಮಾನ ಸೀನ್‌ಗಳು ನೀಡಲಾಗಿದೆ. ಯಾರೊಬ್ಬರ ಅಭಿಮಾನಿಗಳು ಸಹ ಬೇಸರಪಟ್ಟುಕೊಳ್ಳದಂತೆ ನೋಡಿಕೊಳ್ಳಲಾಗಿದೆ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.
'ಆರ್‌ಆರ್‌ಆರ್' ಸಿನಿಮಾದಲ್ಲಿ ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್‌ಟಿಆರ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸಿದ್ದಾರೆ. ನಟಿ ಆಲಿಯಾ ಭಟ್, ಶ್ರೆಯಾ ಶಿರಿನ್, ನಟ ಅಜಯ್ ದೇವಗನ್ ಅವರುಗಳು ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾವನ್ನು ರಾಜಮೌಳಿ ನಿರ್ದೇಶನಮಾಡಿದ್ದು, ಡಿವಿವಿ ದಯಾನಂದ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಜನವರಿ 07 ರಂದು ಬಿಡುಗಡೆ ಆಗಲಿದೆ.


Click it and Unblock the Notifications











